ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇರುವುದರಿಂದ ಜನರಿಗೆ ಹಣ ಹಂಚಿ ಮತ ಪಡೆಯುವುದನ್ನು ತಪ್ಪಿಸುವ ಸಲುವಾಗಿ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ವಹಿಸಿದ್ದು ಎಲ್ಲಾ ಮುಖ್ಯ ರಸ್ತೆಗಳಲ್ಲಿಯೂ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಮತ್ತು ಹಲವು ಕಡೆ ಅನಾಧಿಕೃತ ಹಣ ಸಾಗಾಟವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿರುವುದು ವರದಿಯಾಗುತ್ತಿದೆ.
ಅದರಂತೆ ಈಗ, “ಬೆಂಗಳೂರಿನ ಜಯನಗರದಲ್ಲಿ ಡಿಕೆ ಸಹೋದರರ ಹಣವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.” ಎಂಬ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಜಯನಗರದಲ್ಲಿ ವಶಪಡಿಸಿಕೊಂಡ ಅನಾಧಿಕೃತ ಹಣ ಮತ್ತು ವಾಹನಗಳು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ಅವರಿಗೆ ಸಂಬಂಧಿಸಿದ್ದು ಎಂದು ಆರೋಪಿಸಲಾಗುತ್ತಿದೆ.
ಫ್ಯಾಕ್ಟ್‌ಚೆಕ್: ಬೆಂಗಳೂರು ದಕ್ಷಿಣ ಕ್ಷೇತ್ರದ ಜಯನಗರದಲ್ಲಿ 13 ಏಪ್ರಿಲ್ 2024ರಂದು ಎರಡು ಕಾರು ಮತ್ತು ಒಂದು ಬೈಕಿನಲ್ಲಿ ಸಾಗಿಸುತ್ತಿದ್ದ ಸುಮಾರು 1.40 ಕೋಟಿಯಷ್ಟು ಹಣವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ಮತ್ತು ಈ ಸಂಬಂಧ ಜಯನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಆದರೆ ಪೋಲೀಸ್ ಆಗಲೀ, ಚುನಾವಣಾ ಅಧಿಕಾರಿಗಳೇ ಆಗಲಿ ವಶಪಡಿಸಿಕೊಂಡಿರುವ ಹಣ ಡಿಕೆ ಸಹೋದರಿರಿಗೆ ಸಂಬಂಧಿಸಿದ್ದು ಎಂದು ಹೇಳಿಲ್ಲ. ಇದೊಂದು ಆಧಾರರಹಿತ ಆರೋಪವಾಗಿದೆ.
ಈ ಕುರಿತು ಟಿವಿ 9 ಕನ್ನಡ, ಪಬ್ಲಿಕ್ ಟಿವಿ, ಟಿವಿ 5 ಕನ್ನಡ, ಸೇರಿದಂತೆ ಕನ್ನಡದ ಬಹುತೇಕ ಮಾಧ್ಯಮಗಳು ವರದಿ ಮಾಡಿದ್ದು ಎಲ್ಲಿಯೂ ಈ ಹಣ ಡಿಕೆ ಸಹೋದರಿಗೆ ಸೇರಿದದ್ದು ಎಂದು ಹೇಳಿಲ್ಲ. ಆದರೆ ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಇದು ಬಿಜೆಪಿಗರ ಕಪ್ಪು ಹಣ ಎಂದರೆ ಬಿಜೆಪಿ ಅಭ್ಯರ್ಥಿ ಮತ್ತು ಸಂಸದ ತೇಜಸ್ವಿ ಸೂರ್ಯ ಇದು ಕಾಂಗ್ರೆಸ್ಸಿಗರ ಹಣ ಎಂದು ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಆದರೆ ತನಿಖೆಯ ಬಳಿಕ ಪೋಲೀಸರೇ ಸತ್ಯಾಂಶ ತಿಳಿಸಬೇಕಿದೆ. ಆದ್ದರಿಂದ ಸಧ್ಯ ಜಯನಗರದಲ್ಲಿ ಡಿಕೆ ಸಹೋದರರ ಕೋಟಿ ಕೋಟಿ ಹಣ ವಶ ಎಂದು ಬಿಜೆಪಿ ಬೆಂಬಲಿಗರು ಮಾಡಿರುವ ಆರೋಪಕ್ಕೆ ಆಧಾರಗಳಿಲ್ಲ.
ಇದನ್ನು ಓದಿ: Fact Check: RSSನಿಂದ ಮಾತ್ರವೇ ಸಂವಿಧಾನ ಬದಲಾವಣೆ ಸಾಧ್ಯ ಎಂದು ಎಸ್. ಬಾಲರಾಜ್ ಹೇಳಿಲ್ಲ
ವಿಡಿಯೋ ನೊಡಿ: ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಸುಧೀರ್ ಕುಮಾರ್ ಮುರೋಳಿ ಹೇಳಿದ್ದಾರೆ ಎಂಬುದು ಎಡಿಟೆಡ್ ವಿಡಿಯೋ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ