ನೆಲದ ಮೇಲೆ ಬಿದ್ದಿರುವ ಮೃತದೇಹವೊಂದನ್ನು ತೋರಿಸುವ ವೀಡಿಯೊ ಕ್ಲಿಪ್ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ, ಫಜ್ಲುರ್ ರೆಹಮಾನ್ ಎಂಬ ಮುಸ್ಲಿಂ ಮುಖಂಡನನ್ನು ಹಿಂದೂಗಳು ಹತ್ಯೆಗೈದರು ಮತ್ತು ಶಿರಚ್ಛೇದನ ಮಾಡಿದರು, ಈ ವಿಡಿಯೋದಲ್ಲಿರುವಂತೆ ಇನ್ನೂ ಇಬ್ಬರು ಮುಸ್ಲಿಂ ಮುಖಂಡರನ್ನು ಉತ್ತರ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿ” ಎಂಬಂತಹ ಬರಹಗಳು ಕೂಡ ವೈರಲ್ ಆಗುತ್ತಿದೆ.
ಈ ವಿಡಿಯೋ ಮತ್ತು ಬರಹಗಳನ್ನು ನೋಡಿದ ಹಲವರು ಇದರ ಪೂರ್ವಪರಗಳನ್ನು ವಿಚಾರಿಸದೆ ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಇಂತಹದೊಂದು ಘಟನೆ ನಡೆದಿರುವ ಸಾಧ್ಯತೆಗೆ ಪುಷ್ಠಿ ನೀಡುವ ಯಾವುದೇ ಅಂಶಗಳು ಕಂಡು ಬರುತ್ತಿಲ್ಲ. ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋ ಮತ್ತು ಪೋಸ್ಟ್ ಹಲವು ಅನುಮಾನಗಳನ್ನು ಕೂಡ ಹುಟ್ಟುಹಾಕಿದೆ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕೆಲವೊಂದು ವರದಿಗಳು ಪತ್ತೆಯಾದವು. ಈ ವರದಿಗಳ ಪ್ರಕಾರ 11 ಜೂನ್ 2024 ರಂದು ಶಾಮ್ಲಿ ಜಿಲ್ಲೆಯ ಜಿಂಜನಾ ಪೊಲೀಸ್ ಠಾಣಾ ವ್ಯಾಪ್ತಿಯ ಮನ್ನಮಜ್ರಾ ಗ್ರಾಮದಲ್ಲಿ 58 ವರ್ಷದ ಇಮಾಮ್‌ನನ್ನು ಅವನ ಮಾನಸಿಕ ಅಸ್ವಸ್ಥ ಮಗ ಕೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
‘ ಅಮರ್ ಉಜಾಲ ‘ ವರದಿಯ ಪ್ರಕಾರ , ಫಜ್ಲುರ್ ರೆಹಮಾನ್ ಅವರನ್ನು ಅವರ ಮಗ ಜುನೈದ್ ಬೈಸಿಕಲ್ ವಿಚಾರವಾಗಿ ಕೊಂದಿದ್ದಾನೆ ಎನ್ನಲಾಗುತ್ತಿದೆ. ಜುನೈದ್ ತನ್ನ ತಂದೆಯಿಂದ ಹೊಸ ಸೈಕಲ್‌ಗಾಗಿ ಹಲವು ದಿನಗಳಿಂದ ಬೇಡಿಕೆ ಇಡುತ್ತಿದ್ದ ಎಂದು ಮೃತನ ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ, ಕೆಲ ದಿನಗಳ ನಂತರ ಸೈಕಲ್ ಕೊಡಿಸುವುದಾಗಿ ತಂದೆ ಭರವಸೆ ನೀಡಿದ್ದರು. ಇದರಿಂದ ಕೋಪಗೊಂಡ ಜುನೈದ್ ತನ್ನ ತಂದೆಯ ಸೈಕಲ್ ತೆಗೆದುಕೊಂಡು ಹೊಲಕ್ಕೆ ಹೋಗುವಂತೆ ಪ್ರೇರೇಪಿಸಿದ. ಮೃತರು ಮಗನನ್ನು ಹುಡುಕಲು ಹೊಲಕ್ಕೆ ಹೋದಾಗ ಆತ ತನ್ನ ತಂದೆಯನ್ನೇ ಕೊಂದಿದ್ದಾನೆ.
ವರದಿಗಳ ಪ್ರಕಾರ, ಜಿಂಜನಾ ಪೊಲೀಸರು ಆರೋಪಿ ಜುನೈದ್‌ನನ್ನು ಬಂಧಿಸಿದ್ದು, ಮೃತನ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಾಮ್ಲಿ ಪೊಲೀಸರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಘಟನೆಯ ವಿವರಗಳನ್ನು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಈ ಘಟನೆಯಲ್ಲಿ ಯಾವುದೇ ರೀತಯಾದ ಕೋಮು ಆಯಾಮ ಇಲ್ಲವೆಂಬುದು ಸಾಬೀತಾಗಿದೆ.
थाना झिंझाना पुलिस द्वारा थाना क्षेत्रान्तर्गत ग्राम बल्लामाजरा के जंगल में हुई वृद्ध व्यक्ति की हत्या की घटना का 06 घण्टे की अल्प समयवधि में सफल अनावरण करते हुए घटना में लिप्त 01 हत्याभियुक्त को किया गिरफ्तार, कब्जे से आलाकत्ल फावड़ा व मोबाइल बरामद । @Uppolice @adgzonemeerut pic.twitter.com/n83mqJc4Mq
— Shamli police (@PoliceShamli) June 11, 2024
ಇನ್ನು ಇದೇ ರೀತಿಯಾಗಿ ಉತ್ತರ ಪ್ರದೇಶದ ಮೌಲಾನಾ ಫಾರೂಕ್ ಕೊಲೆ ವಿಚಾರಕ್ಕೂ ಕೋಮು ಬಣ್ಣವನ್ನು ಕಟ್ಟಲಾಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಲಾಯಿತು. ಈ ವೇಳೆ ಕೆಲವೊಂದು ವರದಿಗಳು ಕಂಡು ಬಂದಿದ್ದು, ಆ ವರದಿಗಳ ಪ್ರಕಾರ 08 ಜೂನ್ 2024 ರಂದು, ಪ್ರತಾಪಗಢ್‌ನಲ್ಲಿ ಜಮಿಯತ್ ಉಲಾಮಾ-ಎ-ಹಿಂದ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೌಲಾನಾ ಫಾರೂಕ್ ಅವರು ಹಣಕಾಸಿನ ವಿಷಯಗಳ ಮೇಲೆ ಅವರ ಸ್ಥಳೀಯ ಗ್ರಾಮವಾದ ಸೋನಾಪುರದಲ್ಲಿ ಕೊಲ್ಲಲ್ಪಟ್ಟರು. ಪ್ರತಾಪ್‌ಗಢದ ಸೋನಾಪುರದಲ್ಲಿ ನಡೆದ ಇಮಾಮ್‌ನ ಈ ಹತ್ಯೆಯ ವಿವರಗಳನ್ನು ಪ್ರತಾಪ್‌ಗಢ ಪೊಲೀಸರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ . ಈ ಪೋಸ್ಟ್ ಪ್ರಕಾರ, ಕೊಲೆಗೆ ಹಣಕಾಸಿನ ವಹಿವಾಟು ಕಾರಣ ಮತ್ತು ಕೂಡ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸಾಬೀತಾಗಿದೆ.
थाना जेठवारा क्षेत्रान्तर्गत ग्राम सोनपुर में पैसे के लेन-देन के विवाद में एक व्यक्ति की हत्या होने की सूचना पर थाना जेठवारा पुलिस द्वारा किये जा रहे कार्यवाही के संबंध में,
SP, PBH @satpal_IPS की बाइट । pic.twitter.com/vbgxiLUAgH
— PRATAPGARH POLICE (@pratapgarhpol) June 8, 2024
ಇದೇ ರೀತಿಯಾಗಿ ಉತ್ತರ ಪ್ರದೇಶದ ಮತ್ತೊಬ್ಬ ಮುಸ್ಲಿಂ ಮುಖಂಡನ ಸಾವಿಗೂ ಕೋಮು ಬಣ್ಣ ಬಳಿಯಲಾಗುತ್ತಿದೆ. ಈ ಕುರಿತು ಪರಿಶೀಲಿಸಿದಾಗ 11 ಜೂನ್ 2024 ರಂದು, ಇಮಾಮ್ ಮೊಹಮ್ಮದ್ ಅಕ್ರಮ್ ಅವರನ್ನು ಉತ್ತರ ಪ್ರದೇಶದ ಮೊರಾದಾಬಾದ್‌ನ ಭೆನ್ಸಿಯಾ ಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾರನ್ನೂ ಬಂಧಿಸಲಾಗಿಲ್ಲ. ಈ ಕೊಲೆಯ ಹಿಂದಿನ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆಯ ನಂತರವಷ್ಟೆ ಈ ಕೊಲೆಗೆ ಕಾರಣವೇನು ಮತ್ತು ಯಾರು ಕೊಂದಿರುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಉತ್ತರ ಪ್ರದೇಶದಲ್ಲಿನ ಮೂವರು ಮುಸ್ಲಿಂ ಮುಖಂಡರ ಕೊಲೆಯಲ್ಲಿ ಇಬ್ಬರು ಮುಸ್ಲಿಂ ಮುಖಂಡ ಕೊಲೆಗೆ ಯಾವುದೇ ರೀತಿಯಾದ ಕೋಮು ಆಯಾಮವಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಮತ್ತೊಂದು ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ. ಇನ್ನೂ ಆ ಪ್ರಕರಣ ತನಿಖೆಯ ಹಂತದಲ್ಲಿದೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸುಳ್ಳು ಮಾಹಿತಿಯೊಂದಿಗೆ ವಿವಿಧ ಕೊಲೆ ಪ್ರಕರಣವನ್ನು ತಿರುಚಲಾಗಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸುವುದು ಉತ್ತಮ
ಇದನ್ನೂ ಓದಿ : Fact Check: ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ CISF ಕಾನ್‌ಸ್ಟೆಬಲ್ ಜೊತೆ ಗಾಂಧಿ ಕುಟುಂಬ ಪೋಟೋ ತೆಗೆಸಿಕೊಂಡಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.