Fact Check: ಪ್ರಧಾನಿ ಮೋದಿಯವರ ಆಡಳಿತದಲ್ಲಿ ನಡೆದ ಎಲ್ಲಾ ರೈಲ್ವೆ ಅಪಘಾತಗಳು ರಾಜಕೀಯ ಪಿತೂರಿಯಿಂದ ನಡೆಯುತ್ತಿವೆ ಎಂಬುದಕ್ಕೆ ಆಧಾರವಿಲ್ಲ

ರೈಲ್ವೆ ಅಪಘಾತ

ಕೋಲ್ಕತ್ತಾ ನಗರ ಮತ್ತು ಸಿಲ್ಚಾರ್ ನಡುವೆ ಸಂಚರಿಸುವ ಕಾಂಚನಜುಂಗಾ ಎಕ್ಸ್‌ಪ್ರೆಸ್ ಹೊಸ ಜಲ್ಪೈಗುರಿ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ನಲವತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಸಧ್ಯ ಈ ಘಟನೆಗೆ ಕಾರಣವಾಗಬಹುದಾದ ಎಲ್ಲಾ ಕಾರಣಗಳನ್ನು ರೈಲ್ವೇ ಸುರಕ್ಷತೆಯ ಮುಖ್ಯ ಆಯುಕ್ತರು (CCRS) ಪರಿಶೀಲಿಸುತ್ತಿದ್ದಾರೆ. 2023ರ ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 296 ಮಂದಿ ಜೀವ ಕಳೆದುಕೊಂಡಿದ್ದರು. ಅದಾಗಿ ಒಂದು ವರ್ಷದಲ್ಲಿಯೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸೋಮವಾರ(ಜೂನ್ 17) ಕಾಂಚನಜುಂಗಾ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್‌ ರೈಲು ಅಪಘಾತಕ್ಕೀಡಾಗಿದೆ.

ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ 2014 ರಿಂದ 2024ರ ವರೆಗೆ ಹತ್ತು ಬಾರಿ ರೈಲ್ವೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ ಮತ್ತು ಇನ್ನೂ ಅನೇಕರು ಗಾಯಾಳುಗಳಾಗಿ ತನ್ನ ಜೀವನವನ್ನು ಕಳೆದುಕೊಂಡಿದ್ದಾರೆ. ಆದರೆ ಈಗ ಈ ಎಲ್ಲಾ ಅಪಘಾತಗಳನ್ನು ರಾಜಕೀಯ ದ್ವೇಷದಿಂದ ಮಾಡಿಸಲಾಗಿದೆ. ನರೇಂದ್ರ ಮೋದಿಯವರ ಮೇಲಿನ ಅಸೂಹೆ ಮತ್ತು ಹೊಟ್ಟೆಕಿಚ್ಚಿನಿಂದ ಈ ಕೃತ್ಯವನ್ನು ಎಸಗಲಾಗುತ್ತಿದೆ ಎಂದು ಅನೇಕ ಬಲಪಂಥೀಯ ಕಾರ್ಯಕರ್ತರು ಸೇರಿದಂತೆ ಬಿಜೆಪಿ ಬೆಂಬಲಿಗರು ಆರೋಪಿಸಿದ್ದಾರೆ. ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪೋಟೋ ಬಳಿಸಿಕೊಂಡು ಪೋಸ್ಟರ್‌ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೆ ಈ ಕೃತ್ಯವನ್ನು ಮುಸ್ಲಿಮರು(ಜಿಹಾದಿಗಳು) ಮಾಡಿದ್ದಾರೆ ಎಂದು ಸಹ ಆರೋಪಿಸಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ, ರೈಲ್ವೆ ಅಪಘಾತಗಳನ್ನು ರಾಜಕೀಯ ದ್ವೇಷದಿಂದ ಮಾಡಿಸಲಾಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. “ಪ್ರಾಥಮಿಕ ವರದಿಗಳು ಮಾನವ ದೋಷದ ಸಾಧ್ಯತೆಯನ್ನು ಸೂಚಿಸುತ್ತವೆ, ಆದರೆ ರೈಲ್ವೆ ಸುರಕ್ಷತಾ ಆಯುಕ್ತರ ತನಿಖೆ ಪೂರ್ಣಗೊಂಡ ನಂತರವೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿಯಲಿದೆ.” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದುವರೆಗೂ ಈ ಘಟನೆಗೆ ಸಂಬಂಧಿಸಿದಂತೆ ಯಾರೂ ಈ ಕೃತ್ಯಕ್ಕೆ ಕಾರಣ ಎಂದು ತಿಳಿದು ಬಂದಿಲ್ಲ. ಯಾರೋ ಕಿಡಿಗೇಡಿಗಳು ರೈಲ್ವೆ ಹಳಿ ಬಳಿಯ ಸಿಗ್ನಲ್ ಕಂಬವನ್ನು ಬಟ್ಟೆಯಿಂದ ಸಿಗ್ನಲ್‌ ಲೈಟ್‌ ಕಾಣದಂತೆ ಮುಚ್ಚಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇನ್ನೂ ಮುಸ್ಲಿಮರು ಈ ರೈಲ್ವೆ ಅಪಘಾತಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ. ಆದರೆ ಈ ಬಾರಿಯ ರೈಲ್ವೆ ಅಪಘಾತ ಸಂಭವಿಸಿದಾಗ ಸ್ಥಳಕ್ಕೆ ಆಗಮಿಸಿ, ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದವರು ಮುಸ್ಲಿಮರೇ ಆಗಿದ್ದಾರೆ.

ಈ ಕುರಿತು ಅನೇಕ ಮಾಧ್ಯಮಗಳು ವರದಿ ಮಾಡಿದ್ದು, “ಸಾಂಪ್ರದಾಯಿಕ ಹಬ್ಬದ ಉಡುಪುಗಳನ್ನು ಧರಿಸಿ ಮತ್ತು ಬಕ್ರೀದ್ ಆಚರಣೆಯನ್ನು ಅರ್ಧಕ್ಕೆ ನಿಲ್ಲಿಸಿ, ಪಶ್ಚಿಮ ಬಂಗಾಳದ ರಂಗಪಾಣಿಯ ಹಲವಾರು ಸ್ಥಳೀಯರು ಜೂನ್ 17 ರಂದು ಈ ಪ್ರದೇಶದಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತದಲ್ಲಿ ಗಾಯಗೊಂಡ ಜನರನ್ನು ರಕ್ಷಿಸಲು ಧಾವಿಸಿದರು.”

“ಈದ್ ನಮಾಜ್ ಮುಗಿಸಿ ಮನೆ ತಲುಪುತ್ತಿದ್ದಂತೆ ಗುಡುಗಿನಂತಹ ಸದ್ದು ಕೇಳಿಸಿತು. ನಾವೆಲ್ಲರೂ ಸ್ಥಳಕ್ಕೆ ಧಾವಿಸಿ ರೈಲು ಅಪಘಾತವನ್ನು ನೋಡಿದೆವು. ಸಂಭ್ರಮಾಚರಣೆ ಬಿಟ್ಟು ರಕ್ಷಣಾ ಕಾರ್ಯ ಆರಂಭಿಸಿದೆವು. ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು. ನಾವು ನಮ್ಮ ಮನೆಗಳಿಂದ ಏಣಿಗಳನ್ನು ಪಡೆದುಕೊಂಡು ಹಳಿತಪ್ಪಿದ ಬರ್ತ್‌ಗಳಿಂದ ಪ್ರಯಾಣಿಕರನ್ನು ಹೊರತಂದಿದ್ದೇವೆ” ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸ್ಥಳೀಯರೊಬ್ಬರು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ.

ಆದ್ದರಿಂದ ಸಧ್ಯ ರೈಲ್ವೆ ಅಪಘಾತಕ್ಕೆ ಮಮತಾ ಬ್ಯಾನರ್ಜಿಯಾಗಲಿ, ಮುಸ್ಲಿಮರಾಗಲಿ ಕಾರಣರಲ್ಲ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಇನ್ನೂ ನಡೆಯುತ್ತಿದ್ದು, ಅದಕ್ಕೆ ಮುಂಚೆಯೇ ಒಂದು ಸಮುದಾಯವನ್ನು ಕೇಂದ್ರವಾಗಿರಿಸಿ ಕೋಮು ಹೇಳಿಕೆಯ ಇಂತಹ ಸುಳ್ಳು ಆರೋಪ ಮಾಡುವುದು ನಿಜಕ್ಕೂ ಅಪರಾಧವಾಗಿದೆ.


ಇದನ್ನು ಓದಿ: ಟಿಎಂಸಿ ಬೆಂಬಲಿಗರು ಹಿಂದು ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ವೀಡಿಯೋ ಹಂಚಿಕೆ


ವೀಡಿಯೋ ನೋಡಿ: ಮಹಾತ್ಮಾ ಗಾಂಧೀಜಿಯವರು ಮುಸ್ಲಿಂ ಎಂಬುದು ಸಂಪೂರ್ಣ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *