Fact Check: ಮುಸ್ಲಿಂ ಹೋಟೆಲ್‌ಗಳಲ್ಲಿ ಹಿಂದುಗಳಿಗೆ ನೀಡುವ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಲಾಗಿರುತ್ತದೆ ಎಂಬುದು ಸುಳ್ಳು

ಮುಸ್ಲಿಂ ಹೋಟೆಲ್‌ಗಳಲ್ಲಿ ಹಿಂದೂಗಳಿಗೆ ನೀಡುವ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಲಾಗಿರುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವರ್ಷಗಳಿಂದ ಹರಿದಾಡುತ್ತಿದೆ. ಈ ಮೂಲಕ ಹಿಂದುಗಳು ಮುಸ್ಲಿಂ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದನ್ನು ಭಹಿಷ್ಕರಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

” ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದ ಹೆದ್ದಾರಿಗಳಲ್ಲಿ 40ಕ್ಕೂ ಹೆಚ್ಚು ಮುಸ್ಲಿಂ ಢಾಬಾಗಳ ಮೇಲೆ ದಾಳಿ ನಡೆಸಿದ್ದು, ಈ ಎಲ್ಲಾ ಹೋಟೆಲ್‌ಗಳಲ್ಲಿ ಹಿಂದೂಗಳಿಗೆ ಆಹಾರದಲ್ಲಿ ಸಂತಾನಹೀನತೆಯ ರಾಸಾಯನಿಕ ಬೆರೆಸಲಾಗಿರುವುದು ಪತ್ತೆಯಾಗಿದೆ. ಆ ಹೋಟೆಲ್‌ಗಳ ಬಗ್ಗೆ ಎಚ್ಚರದಿಂದಿರಿ. ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಹಿಂದೂ ಧರ್ಮವನ್ನು ನಾಶಮಾಡಲು, ಇವರ ಯಾವುದೇ ಆಹಾರ ಮಳಿಗೆಗಳಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಇಂತಹ ರಾಸಾಯನಿಕಗಳನ್ನು ಬಳಸುತ್ತಿರುವುದು ಪದೇಪದೇ ಬೆಳಕಿಗೆ ಬರುತ್ತಿವೆ. ಸಾಕಷ್ಟು ಕಡೆ ಸರ್ಕಾರೀ ಬಸ್ಸುಗಳನ್ನೂ ಇಂತಹದೇ ಹೋಟೆಲ್ ಗಳಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ.” ಎಂಬ ಶೀರ್ಷಿಕೆಯೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಮೊದಲು ಇದೇ ಸಂದೇಶವನ್ನು “ತಮಿಳುನಾಡಿನ ಕೊಯಮತ್ತೂರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳಿಗೆ ಬಿರಿಯಾನಿಯಲ್ಲಿ ಪುರುಷತ್ವ ಹರಣ ಔಷಧವನ್ನು ಸೇರಿಸಿದ್ದಾನೆ. ಈ ಬಿರಿಯಾನಿ ತಿನ್ನುವ ಗಂಡಸು ಅಥವಾ ಹೆಂಗಸರಿಗೆ ಮಕ್ಕಳಾಗೋದಿಲ್ಲ. ಹೀಗಾಗಿ, ಮುಸ್ಲಿಮರಿಂದ ಯಾವುದೇ ವಸ್ತು ಖರೀದಿಸಬೇಡಿ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿತ್ತು.

ಫ್ಯಾಕ್ಟ್‌ಚೆಕ್: ಈ ಕುರಿತು ನಾವು ಹುಡುಕಿದಾಗ ಈ ಪ್ರತಿಪಾದನೆ ಸುಳ್ಳಾಗಿದ್ದು. ಮುಸ್ಲಿಂ ಹೋಟೆಲ್‌ ಗಳ ಕುರಿತು ಹಿಂದುಗಳಲ್ಲಿ ಕೆಟ್ಟ ಭಾವನೆ ಮೂಡಲಿ ಮತ್ತು ಅಲ್ಲಿನ ಆಹಾರಗಳನ್ನು ಭಹಿಷ್ಕರಿಸಲಿ ಎಂಬ ಸಲುವಾಗಿ ಬೇರೆ ಬೇರೆ ಸಂದರ್ಭದ ಅಥವಾ ಘಟನೆಗಳ ಪೋಟೋಗಳನ್ನು ಈ ಸುಳ್ಳು ಪ್ರತಿಪಾದನೆಯನ್ನು ಮಾಡಲು ಬಳಸಿಕೊಳ್ಳಲಾಗಿದೆ.

ಫೋಟೋ-1

ವೈರಲ್ ಚಿತ್ರದಲ್ಲಿರುವ ಈ ಫೋಟೊ ಯೂಟ್ಯೂಬ್‌ ವಿಡಿಯೋ ಒಂದರ ಫೋಟೋ ಎಂದು ತಿಳಿದುಬಂದಿದೆ. ಸ್ಟ್ರೀಟ್‌ ಫುಡ್ ಅಫಿಷಿಯಲ್ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ಮುಸ್ಲಿಂ ರೆಸಿಪಿ ಅಡುಗೆ ಎಂಬ ಹೆಡ್‌ಲೈನ್‌ ಹಾಕಿ ಜೂನ್ 30, 2016ರಲ್ಲಿ ಒಂದು ವಿಡಿಯೋ ಪೋಸ್ಟ್‌ ಮಾಡಲಾಗಿತ್ತು. ಈ ಚಿತ್ರವನ್ನು ತಪ್ಪು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ಸಹ ಸತ್ಯಶೋಧನೆಯನ್ನು ನಡೆಸಿದೆ.

ಮುಸ್ಲಿಮರ ಖಾದ್ಯ ತಯಾರಿಕೆಯನ್ನು ತೋರಿಸುವ, ರುಚಿಕಟ್ಟಾದ ಮುಸ್ಲಿಂ ಹಬ್ಬದ ದಮ್ ಬಿರಿಯಾನಿ ತಯಾರಿಸುವುದು ಹೇಗೆ ಎಂದು ವಿವರಿಸುವ ವಿಡಿಯೋ ಇದು. ಇದರ ಒಂದು ಫೋಟೋವನ್ನು ದುರುದ್ದೇಶಕ್ಕೆ ಬಳಸಿಕೊಳ್ಳಲಾಗಿದೆ.

ಫೋಟೊ-2

ವೈರಲ್ ಆಗಿರುವ ಪೋಸ್ಟ್‌ನಲ್ಲಿರುವ ಎರಡನೇ ಫೋಟೊವನ್ನು ಪರಿಶೀಲಿಸಿದಾಗ, ಈ ಫೋಟೋಗಳು ಉತ್ತರ ಪ್ರದೇಶದ ಬಿಜ್ನೂರ್‌ಗೆ ಸೇರಿದವು ಎಂದು ತಿಳಿದುಬಂದಿದೆ. ಪೊಲೀಸರು ಮದರಸಾ ಒಂದರ ಮೇಲೆ ದಾಳಿ ನಡೆಸಿದ ವೇಳೆ ತೆಗೆದ ಫೋಟೋಗಳಿವು. ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆಯನ್ನು ಬೇಧಿಸಿದ್ದ ಪೊಲೀಸರು ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಬಿಜ್ನೂರ್‌ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಡಿರುವ ಪೋಸ್ಟ್‌ ಕೂಡಾ ಲಭ್ಯವಾಗಿದೆ.

ಫೋಟೊ-3

ಮಾತ್ರೆಗಳಿರುವ ಕೊನೆಯ ಫೋಟೋದ ಸತ್ಯಾಂಶವೆಂದರೆ, ಶ್ರೀಲಂಕಾದ ಕೊಲಂಬೋದಲ್ಲಿ ವಶಕ್ಕೆ ಪಡೆಯಲಾದ ಮಾದಕ ವಸ್ತುಗಳ ಫೋಟೋ ಎಂದು ತಿಳಿದುಬಂದಿದೆ. ಈ ಫೋಟೋಗಳನ್ನು ಕಳೆದ ವರ್ಷ ತೆಗೆಯಲಾಗಿತ್ತು. ಡೈಲಿ ಮಿರರ್ ಆನ್‌ಲೈನ್ ಎಂಬ ಶ್ರೀಲಂಕಾ ಮಾಧ್ಯಮದವರು ಈ ಘಟನೆ ಕುರಿತು ವರದಿ ಮಾಡಿರುವುದನ್ನು ನೀವಿಲ್ಲಿ ಓದಬಹುದು. ಮತ್ತು ಈ ವರದಿಯಲ್ಲಿ ವೈರಲ್ ಆಗಿರುವ ಮಾತ್ರೆಗಳ ಚಿತ್ರವೂ ಇರುವುದನ್ನು ಖಚಿತಪಡಿಸಿಕೊಳ್ಳಬಹುದು.

ಇತ್ತೀಚೆಗೆ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೋಮುದ್ವೇಷ ಬಿತ್ತುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚೆಚ್ಚು ಹಂಚಿಕೊಳ್ಳಲಾಗುತ್ತಿದೆ. ಹಿಂದೂ ಮುಸ್ಲಿಂ ಸಾಮರಸ್ಯವನ್ನು ಹಾಳು ಮಾಡಲು ಹೊಂಚುಹಾಕುತ್ತಿರುವವರ ಬಗ್ಗೆ ಮತ್ತು ಅಂತಹ ಪೋಸ್ಟ್‌ಗಳ ಬಗ್ಗೆ ಎಚ್ಚರವಿರಲಿ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ತಯಾರಿಸುವ ಬಿರಿಯಾನಿ ಬೇರೆ ಇತರೆ ಬಿರಿಯಾನಿಗಿಂತಲೂ ಹೆಚ್ಚು ರುಚಿ ಮತ್ತು ಪ್ರಸಿದ್ಧಿ ಪಡೆದಿರುತ್ತವೆ. ಇದನ್ನು ಸಹಿಸದ ಕೆಲವರು ಅವರ ವ್ಯಾಪಾರಕ್ಕೆ ತೊಂದರೆ ನೀಡುವ ಉದ್ದೇಶದಿಂದ ಇಂತಹ ಸುಳ್ಳು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: ಮಹಾರಾಷ್ಟ್ರದ 6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ-ಕೊಲೆಯ ಆರೋಪಿ ಮುಸ್ಲಿಂ ಅಲ್ಲ


ವೀಡಿಯೋ ನೋಡಿ: RSS 52 ವರ್ಷ ರಾಷ್ಟ್ರಧ್ವಜ ಹಾರಿಸದರಿಲು ರಾಷ್ಟ್ರವಿರೋಧಿ ಭಾವನೆಯೇ ಕಾರಣ.! 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *