Fact Check: ಕೇರಳದಲ್ಲಿ ಮುಸ್ಲಿಂ ತಾಯಿ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ತಪ್ಪು ಹೇಳಿಕೆಯೊಂದಿಗೆ ವೀಡಿಯೋವೊಂದು ವೈರಲ್ ಆಗಿದೆ

ಕೇರಳದ ಮುಸ್ಲಿಂ ತಾಯಿ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ಸಾಮಾಜಿಕ ಜಾಲತಾಣಗಳಾದ ಎಕ್ಸ್ ಮತ್ತು ಫೇಸ್ ಬುಕ್ ನಲ್ಲಿ ಹೆಚ್ಚು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆ ತನ್ನ ಮಗನಿಗೆ ಹೂವಿನ ಹಾರ ಹಾಕಿರುವುದನ್ನು ಕಾಣಬಹುದು. 

ವೀಡಿಯೋದಲ್ಲಿ “ಜೀನತ್ ಜಹಾನ್, ಕೇರಳದ ಮುಸ್ಲಿಂ ಮಹಿಳೆ, ಅವರ ಪತಿ ನಿಧನರಾದರು. ಅವರಿಗೆ 3 ಮಕ್ಕಳಿದ್ದರು. ಅವರು ತಮ್ಮ ಹಿರಿಯ ಮಗನನ್ನು ತಮ್ಮ ಮನೆಯಲ್ಲಿಯೇ ಮದುವೆಯಾದರು.” ಎಂಬ ಶೀರ್ಷಿಕೆಯೊಂದಿಗೆ ಅನೇಕರು ಈ ವೀಡಿಯೋವನ್ನು ಹಂಚಿಕೊಂಡು ಇಸ್ಲಾಂ ಧರ್ಮವನ್ನು ತುಚ್ಚೀಕರಿಸುವಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. 

ಫ್ಯಾಕ್ಟ್‌ಚೆಕ್: ನಾವು Google ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್‌ ಇಮೇಜ್ ಹುಡುಕಾಟವನ್ನು ಮಾಡಿದಾಗ, ಈ ವೀಡಿಯೊವನ್ನು ಹಲವಾರು ಪಾಕಿಸ್ತಾನಿ ಬಳಕೆದಾರರು 13 ಏಪ್ರಿಲ್ 2024 ರಂದು ಪೋಸ್ಟ್ ಮಾಡಿದ್ದಾರೆ ಎಂದು ಕಂಡುಬಂದಿದೆ. ಇಟ್ಕಾಫ್‌ನಿಂದ ಹಿಂತಿರುಗಿದ ನಂತರ ತಾಯಿ ತನ್ನ ಮಗನನ್ನು ಸ್ವಾಗತಿಸುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ.

ರಂಜಾನ್ ತಿಂಗಳಲ್ಲಿ ಮಾಡುವ ಪ್ರಾರ್ಥನೆಗಳಲ್ಲಿ ಇತ್ಕಾಫ್ ಕೂಡ ಒಂದು. ರಂಜಾನ್‌ನ ಮೂರನೇ ಆಶ್ರದಲ್ಲಿ, ಅಂದರೆ ರಂಜಾನ್‌ನ ಕೊನೆಯ 10 ದಿನಗಳಲ್ಲಿ, ಮುಸ್ಲಿಂ ಪುರುಷರು ಇತ್ಕಾಫ್‌ನಲ್ಲಿ ಮಸೀದಿಯಲ್ಲಿ ಕುಳಿತುಕೊಳ್ಳುತ್ತಾರೆ, ತಮ್ಮನ್ನು ಪ್ರಪಂಚದಿಂದ ಮತ್ತು ಕುಟುಂಬದಿಂದ ಬೇರ್ಪಡಿಸುತ್ತಾರೆ. ಈ ಸಮಯದಲ್ಲಿ, ಅವರು 10 ದಿನಗಳ ಕಾಲ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ ಮತ್ತು ಈದ್ ಚಂದ್ರನ ದರ್ಶನದ ನಂತರ ಮಾತ್ರ ಮನೆಗೆ ಮರಳುತ್ತಾರೆ.

ಈ ಕುರಿತು ಆಲ್ಟ್‌ ನ್ಯೂಸ್ ವರದಿಗಾರ ಮಹಮ್ಮದ್ ಜುಬೈರ್‌ ಸಹ ಸ್ಪಷ್ಟನೆ ನೀಡಿ ತಮ್ಮ ಎಕ್ಸ್‌ ಖಾತೆಯಲ್ಲಿ ಈ ವೈರಲ್ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. “ಖುರಾನ್ ಮುಗಿದ ನಂತರ ತಾಯಿ ಮಗನನ್ನು ಅಭಿನಂದಿಸುತ್ತಿರುವ ವೀಡಿಯೊವನ್ನು ಮುಸ್ಲಿಂ ಮಹಿಳೆಯೊಬ್ಬಳು ತನ್ನ ಮಗನನ್ನು ಮದುವೆಯಾದಳು ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. @swetasamadhiya ಈ ಖಾತೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಸರಿಸುತ್ತಿದ್ದಾರೆ.” ಎಂದು ಬರೆದುಕೊಂಡಿದ್ದಾರೆ.

ಇದೇ ಸಮಯದಲ್ಲಿ, ನಮ್ಮ ತಂಡವು ವೀಡಿಯೊದ ಮೂಲ ಮತ್ತು ಸ್ಥಳದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ, ಮಾಹಿತಿ ಬಂದ ತಕ್ಷಣ ಸುದ್ದಿಯನ್ನು ನವೀಕರಿಸಲಾಗುತ್ತದೆ.

ವೈರಲ್ ಆಗಿರುವ ವಿಡಿಯೋ ಕೇರಳದ ಮುಸ್ಲಿಂ ತಾಯಿ-ಮಗನ ಮದುವೆಯಲ್ಲ ಫ್ಯಾಕ್ಟ್ ಚೆಕ್‌ನಿಂದ ಸ್ಪಷ್ಟವಾಗಿದೆ. ಈ ವೀಡಿಯೊ ಪಾಕಿಸ್ತಾನದಿಂದ ಬಂದಿದ್ದು, ರಂಜಾನ್ ತಿಂಗಳಲ್ಲಿ, ಇತ್ಕಾಫ್‌ನಿಂದ ಹಿಂದಿರುಗಿದ ನಂತರ ತಾಯಿ ತನ್ನ ಮಗನನ್ನು ಸ್ವಾಗತಿಸುತ್ತಿದ್ದಾರೆ. ಆದ್ದರಿಂದ, ವೀಡಿಯೋ ಹಂಚಿಕೊಂಡಿರುವವರ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.


ಇದನ್ನು ಓದಿ: ಕರ್ನಾಟಕದಲ್ಲಿ ಜೈನ ಮುನಿಗೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ವಿಕ್ರಂ ಹೆಗ್ಡೆ ಹಂಚಿಕೊಂಡಿದ್ದ ಸುಳ್ಳು ಮತ್ತೆ ವೈರಲ್


ವೀಡಿಯೋ ನೋಡಿ: ‘ಬೇಟ್ ದ್ವಾರಕಾ’ ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿಲ್ಲ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *