ಸಾಮಾಜಿಕ ಜಾಲತಾಣದಲ್ಲಿ “ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರೀಡಾ ಸಾಧನೆಗೆ ಪ್ರತಿಯಾಗಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಯಾವ ಕ್ರಿಕೆಟಿಗನಿಗೂ ಸಿಗದ ಗೌರವ ವಿರಾಟ್ ಕೊಹ್ಲಿ ಅವರಿಗೆ ಸಿಕ್ಕಿದೆ. ಇದು ಭಾರತದ ಕ್ರೀಡಾ ಪಟುವಿಗೆ ಸಿಕ್ಕ ಅತಿದೊಡ್ಡ ಗೌರವ. ಹೀಗಾಗಿ ಈ ಪೋಸ್ಟ್ ಅನ್ನು ಎಲ್ಲರಿಗೂ ಶೇರ್ ಮಾಡಿ” ಎಂದು ವಿರಾಟ್ ಕೊಹ್ಲಿ ಅವರ ಪ್ರತಿಮೆ ಇರುವ ಫೋಟೋದೊಂದಿಗೆ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಫೋಟೋ ನೋಡಲು ನಿಜವಾದ ಫೋಟೋದಂತೆ ಇರುವುದರಿಂದ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವೊಂದು ಸುದ್ದಿ ಮಾಧ್ಯಮಗಳು ಕೂಡ ಇದೇ ಫೋಟೋ ಕುರಿತು ವರದಿಯನ್ನು ಮಾಡಿರುವುದರಿಂದ ಹಲವು ಮಂದಿ ಇದು ನಿಜವಾದ ವಿಚಾರವಿರಬಹುದು ಎಂದು ನಂಬಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊವನ್ನು ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಟೋ ಕುರಿತು ಸತ್ಯಾಸತ್ಯತೆಯನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಡ್ಯೂರೋಫ್ಲೆಕ್ಸ್ ಅವರ ಟ್ವೀಟ್ ಸೇರಿದಂತೆ , ಯೂಟ್ಯಬ್ ಚಾನಲ್ನಲ್ಲೂ ವೈರಲ್ ಪೋಸ್ಟ್ನಲ್ಲಿದ್ದ ಫೋಟೋದಂತೆ ಇರುವ ವಿಡಿಯೋವೊಂದು ಕಂಡು ಬಂದಿದೆ.
ಬಳಿಕ ಇದು ಮ್ಯಾಟ್ರೆಸ್ ಕಂಪನಿಯಾದ ಡ್ಯೂರೊಫ್ಲೆಕ್ಸ್ನ ಜಾಹೀರಾತು ಎಂಬುದು ತಿಳಿದು ಬಂದಿದೆ. ಅವರು ತಮ್ಮ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್ಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ವೈರಲ್ ವಿಡಿಯೋ ಕಂಪ್ಯೂಟರ್ ಜನರೇಟೆಡ್ ಇಮೇಜರಿ (ಸಿಜಿಐ) ಅನ್ನು ಬಳಸಿಕೊಂಡು ಕೊಹ್ಲಿಯ ಈ ದೃಶ್ಯಗಳನ್ನು ರಚಿಸಿದ್ದಾರೆ ಎಂಬುದು ತಿಳಿದು ಬಂದಿದೆ.
Just Unveiled :A larger-than-life statue of Virat Kohli at the iconic Times Square.
This King's Duty, we are going global and making history!
We’re delivering great sleep and great health to Virat Kohli.#GreatSleepGreatHealth #ViratKohli #worldcup #cricket #CGI pic.twitter.com/5WpkZcwa7i
— Duroflex (@Duroflex_world) June 23, 2024
ಇನ್ನು ನಾವು ಅರ್ಥ್ಕ್ಯಾಮ್ನ ಯೂಟ್ಯೂಬ್ ಚಾನೆಲ್ನಲ್ಲಿ ಟೈಮ್ಸ್ ಸ್ಕ್ವೇರ್ನ ಲೈವ್ ಫೀಡ್ ಅನ್ನು ಸಹ ನೋಡಿದಾಗ, ಆ ಲೈವ್ ಸ್ಟ್ರೀಮ್ ವಿಡಿಯೋದಲ್ಲಿ ಎಲ್ಲಿಯೂ ವಿರಾಟ್ ಕೊಹ್ಲಿ ಅವರ ಪ್ರತಿಮೆ ಇರುವುದು ಕಂಡು ಬಂದಿಲ್ಲ. ಹಾಗಾಗಿ ಡ್ಯೂರೋಫ್ಲೆಕ್ಸ್ ಸಂಸ್ಥೆಯೇ ಉಲ್ಲೇಖಿಸಿರುವಂತೆ ಇದೊಂದು ಸಿಜಿಐ ವಿಡಿಯೋ ಆಗಿದ್ದು, ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್ನಲ್ಲಿ ವಿರಾಟ್ ಕೊಹ್ಲಿ ಪ್ರತಿಮೆ ನಿರ್ಮಾಣವಾಗಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಸುದ್ದಿ ಮಾಧ್ಯಮಗಳಲ್ಲಿ ವರದಿ ಮಾಡಿದ ಹಾಗೆ ನ್ಯೂಯಾರ್ಕ್ ನಗರದಲ್ಲಿ ವಿರಾಟ್ ಕೊಹ್ಲಿ ಪ್ರತಿಮೆ ನಿರ್ಮಾಣವಾಗಿದೆ ಎಂಬುದು ಸುಳ್ಳು. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ.
ಇದನ್ನೂ ಓದಿ : Fact Check: ಅರವಿಂದ್ ಕೇಜ್ರಿವಾಲ್ ಅವರು ಮದ್ಯ ನೀತಿ ಹಗರಣಕ್ಕೆ ಮನೀಶ್ ಸಿಸೋಡಿಯಾ ಅವರನ್ನು ದೂಷಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ