Fact Check | IRCTC ಯ ಹೊಸ ನಿಯಮದ ಪ್ರಕಾರ ಉಪನಾಮ ಹೊಂದಿರದ ಕುಟುಂಬ ಸದಸ್ಯರಿಗೆ ಟಿಕೆಟ್‌ ಬುಕ್‌ ಮಾಡಲಾಗುವುದಿಲ್ಲ ಎಂಬುದು ಸುಳ್ಳು

IRCTC ಯಿಂದ ಹೊಸ ಬುಕಿಂಗ್ ನಿಯಮದ ಕುರಿತು ಸಾಮಾಜಿಕ ಜಾಲತಾಣದಲ್ಲಿನ ಸುದ್ದಿಯೊಂದು ಹರಿದಾಡುತ್ತಿದೆ. ಅದರ ಪ್ರಕಾರ “ಸಾರ್ವಜನಿಕರು ವೈಯಕ್ತಿಕ IRCTC ಖಾತೆಯನ್ನು ಬಳಸಿಕೊಂಡು, ರಕ್ತ ಸಂಬಂಧಿಗಳಿಗೆ ಅಥವಾ ಅದೇ ಉಪನಾಮ ಹೊಂದಿರುವವರಿಗೆ ಮಾತ್ರ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಸ್ನೇಹಿತರು ಅಥವಾ ಇತರರಿಗಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುವುದರಿಂದ 10,000 ರೂ.ಗಳ ಭಾರಿ ದಂಡ, 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡಕ್ಕೂ ಕಾರಣವಾಗಬಹುದು.” ಎಂದು ಹಂಚಿಕೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವುದರಿಂದ ಅನ್‌ಲೈನ್‌ ಟಿಕೆಟ್‌ ಬುಕ್‌ ಮಾಡುವ ಸಾಕಷ್ಟು ಮಂದಿ ಗೊಂದಲಕ್ಕೆ ಕೂಡ ಒಳಗಾಗಿದ್ದಾರೆ. ಇನ್ನೂ ಕೆಲವರು ಬುಕಿಂಗ್‌ ಆದ ಮೇಲೆ ತಾವು ಹಣ ಕಳೆದುಕೊಂಡರೆ ಏನು ಮಾಡುವುದು ಎಂಬ ಆತಂಕವನ್ನು ಕೂಡ ಎದುರಿಸುತ್ತಿದ್ದಾರೆ. ಹಾಗಿದ್ದರೆ ವೈರಲ್‌ ಸುದ್ದಿಯ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

https://twitter.com/KuchBhiAman/status/1805564131866505398

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ನ ಕುರಿತು  ಸತ್ಯಾಸತ್ಯತೆಯನ್ನು ಪರೀಶಿಲನೆ ನಡೆಸಲು IRCTC ಯ ಅಧಿಕೃತ ವೆಬ್‌ಸೈಟ್‌ನಲ್ಲಿ  ಪರಿಶೀಲನೆ ನಡೆಸಲಾಯಿತು. ಆದರೆ ವೈರಲ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದಂತೆ ಉಪನಾಮ ಹೊಂದಿರುವವರು ತಮ್ಮ ಕುಟುಂಬಸ್ಥರಿಗೆ ಮಾತ್ರ ಟಿಕೆಟ್‌ ಬುಕ್‌ ಮಾಡಬಹುದು ಎಂಬ ಅಂಶ ಕಂಡು ಬಂದಿಲ್ಲ.

ಇನ್ನು ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ IRCTC ಎಕ್ಸ್‌ ಖಾತೆಯಲ್ಲಿ ಹುಡುಕಾಟ ನಡೆಸಿದಾಗ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಜೂನ್‌ 25 ರಂದು IRCTC ಸ್ಪಷ್ಟನೆಯನ್ನು ನೀಡಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ಅದರಲ್ಲಿ  “ಮಾನ್ಯ IRCTC ಖಾತೆಯ ಮೂಲಕ ಬುಕಿಂಗ್ ಮಾಡುವವರೆಗೆ ಬಳಕೆದಾರರು ತಮ್ಮ ಉಪನಾಮವನ್ನು ಲೆಕ್ಕಿಸದೆ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗಿದೆ ಎಂದು ಅವರು ದೃಢಪಡಿಸಿದರು. ಹೆಚ್ಚುವರಿಯಾಗಿ, ಪ್ರಮಾಣಿತ ಬಳಕೆದಾರರು ತಿಂಗಳಿಗೆ ಗರಿಷ್ಠ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು IRCTC ಹೇಳಿದೆ, ಆದರೆ ತಮ್ಮ IRCTC ಖಾತೆಯೊಂದಿಗೆ ತಮ್ಮ ಆಧಾರ್ ಅನ್ನು ಲಿಂಕ್ ಮಾಡಿದ ಬಳಕೆದಾರರು ತಿಂಗಳಿಗೆ 24 ಟಿಕೆಟ್‌ಗಳನ್ನು ಕಾಯ್ದಿರಿಸಬಹುದು” ಎಂದು ಸ್ಪಷ್ಟನೆಯನ್ನು ನೀಡಿದೆ.

ಇನ್ನು ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೇಟ್‌ಗಳನ್ನು ವಾಣಿಜ್ಯಿಕವಾಗಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ ಮತ್ತು ರೈಲ್ವೆ ಕಾಯಿದೆ, 1989 ರ ಸೆಕ್ಷನ್ 143 ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಕೂಡ ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ಈ ಮೂಲಕ IRCTC ಸಾರ್ವಜನಿಕರು ವೈಯಕ್ತಿಕ IRCTC ಖಾತೆಯನ್ನು ಬಳಸಿಕೊಂಡು, ರಕ್ತ ಸಂಬಂಧಿಗಳಿಗೆ ಅಥವಾ ಅದೇ ಉಪನಾಮ ಹೊಂದಿರುವವರಿಗೆ ಮಾತ್ರ ಟಿಕೆಟ್‌ಗಳನ್ನು ಬುಕ್‌ ಮಾಡಬಹುದು ಎಂಬುದು ನಿಜವಲ್ಲ ಎಂದು ಸ್ಪಷ್ಟ ಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಳಕೆದಾರರು ತಮ್ಮ ಉಪನಾಮವನ್ನು ಲೆಕ್ಕಿಸದೆ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು IRCTC ತಿಳಿಸಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ : Fact Check | ರಾಜಸ್ಥಾನದಲ್ಲಿ ಒಂದೇ ಬಂಡೆಯಿಂದ ಕೆತ್ತಿದ 5,000 ವರ್ಷಗಳ ಹಳೆಯ ದೇವಾಲಯ ಪತ್ತೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *