Fact Check | 2007ರ T-20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಭೇಟಿ ಮಾಡಿಲ್ಲವೆಂಬುದು ಸುಳ್ಳು

ಭಾರತ ಕ್ರಿಕೆಟ್ ತಂಡ 2007ರಲ್ಲಿ ವಿಶ್ವಕಪ್ ಗೆದ್ದಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರು ಮತ್ತು ರಾಜೀವ್ ಶುಕ್ಲಾ ಅವರು ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿದ್ದರು. ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಬದಲಿಗೆ ಸೂಪರ್ ಪಿಎಂ ಸೋನಿಯಾ ಗಾಂಧಿ ಅವರೊಂದಿಗೆ ಅಂದು ಫೋಟೋ ಶೂಟ್ ಮಾಡಿಸಲಾಗಿದೆ. ಆಗ ಯಾವ ಪತ್ರಕರ್ತರೂ ಭಾರತದ ಕ್ರಿಕೆಟ್ ತಂಡದ ಜೊತೆ ಫೋಟೋ ಶೂಟ್ ಮಾಡಿಕೊಳ್ಳುತ್ತಿರುವ ಸೋನಿಯಾ ಗಾಂಧಿ ಯಾರು ಎಂಬ ಪ್ರಶ್ನೆಯನ್ನು ಎತ್ತಲಿಲ್ಲ. ತುಚ್ಛವಾದ ಕಾಂಗ್ರೆಸ್ ಭಾರತದಲ್ಲಿ ಎಷ್ಟು ಸರ್ವಾಧಿಕಾರವನ್ನು ತೋರಿಸಿದೆ ಮತ್ತು ಅದು ಪ್ರಧಾನಿ ಹುದ್ದೆಯ ಘನತೆಗೆ ಎಷ್ಟು ಅವಮಾನ ಮಾಡಿದೆ ಎಂದು ಊಹಿಸಿ.” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮತ್ತೊಬ್ಬ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು “ಭಾರತದ ಪ್ರಧಾನಿ ಮೋದಿ ಜಿ ಭಾರತೀಯ ಆಟಗಾರರನ್ನು ಭೇಟಿಯಾಗಲು/ಭೇಟಿ ಮಾಡಲು ಸಮಸ್ಯೆ ಇರುವವರು, ಸೋನಿಯಾ ಗಾಂಧಿ ಅವರು 2007 ರಲ್ಲಿ ವಿಶ್ವಕಪ್ ಗೆದ್ದ ನಂತರ ಭಾರತ ಕ್ರಿಕೆಟ್ ತಂಡವನ್ನು ಯಾವ ಸಾಮರ್ಥ್ಯದಲ್ಲಿ ಭೇಟಿಯಾದರು ಎಂಬುದನ್ನು ವಿವರಿಸಬಹುದೇ? ಆಕೆ ಅಂದು ಪ್ರಧಾನಿಯೂ ಆಗಿರಲಿಲ್ಲ, ಮಂತ್ರಿಯೂ ಆಗಿರಲಿಲ್ಲ..!!” ಎಂದು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ನೋಡಿದ ಹಲವರು ಅಂದು ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರು ಅಂದಿನ ವಿಜೇತ ತಂಡವನ್ನು ಭೇಟಿಯಾಗಿಲ್ಲ ಎಂದೇ ಭಾವಿಸಿದ್ದಾರೆ. ಆದರೆ ವಾಸ್ತವ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ. 

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ 30 ಅಕ್ಟೋಬರ್ 2007 ರಂದು ನವದೆಹಲಿಯಲ್ಲಿರುವ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಕ್ಲಿಕ್ ಮಾಡಲಾದ ಫೋಟೋವನ್ನು ಉಲ್ಲೇಖಿಸುವ ಶೀರ್ಷಿಕೆಯೊಂದಿಗೆ ವೈರಲ್‌ ಫೋಟೋವನ್ನು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ.

ಈ ಫೋಟೋವಿನ ಜೊತೆ ಮಾಹಿತಿಯನ್ನು ನೀಡಲಾಗಿದ್ದು, “ಸೋನಿಯಾ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮತ್ತು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅಧ್ಯಕ್ಷೆ ಮತ್ತು ಭಾರತೀಯ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ 20-20 ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಸಹ ಆಟಗಾರರು ಗಾಂಧಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದರು, 30 ಅಕ್ಟೋಬರ್ 2007. 20-20 ಕ್ರಿಕೆಟ್ ವಿಶ್ವಕಪ್ ವಿಜೇತರು.” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. 

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದಾಗ, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು T-20 ವಿಶ್ವಕಪ್ ವಿಜೇತ ತಂಡವನ್ನು ಅಭಿನಂದಿಸಲು ಭೇಟಿಯಾದರು ಎಂದು ದೃಢೀಕರಿಸುವ ಹಲವಾರು ಸುದ್ದಿ ವರದಿಗಳು ಕಂಡು ಬಂದಿವೆ. ನ್ಯೂಸ್ ಏಜೆನ್ಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಅಕ್ಟೋಬರ್ 30, 2007 ರಂದು ಈ ಕುರಿತು ವರದಿಯನ್ನು ಕೂಡ ಮಾಡಿದೆ , ಸಿಂಗ್ ಅವರು ತಮ್ಮ ಪತ್ನಿ ಗುರುಶರಣ್ ಕೌರ್ ಅವರೊಂದಿಗೆ ವಿಜೇತ ತಂಡವನ್ನು ಅಭಿನಂದಿಸಿದರು ಮತ್ತು ಹೊಸ ದೆಹಲಿಯ ಅವರ ನಿವಾಸದಲ್ಲಿ ವಿಜೇತ ತಂಡದೊಂದಿಗೆ ಸಂವಾದದಲ್ಲಿ ತೊಡಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ..

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದಂತೆ 2007ರ ಟಿ-20 ವಿಶ್ವಕಪ್‌ ವಿಜೇತ ತಂಡದೊಂದಿಗೆ ಕೇವಲ ಸೋನಿಯ ಗಾಂಧಿ ಅವರು ಮಾತ್ರ ಫೋಟೋ ತೆಗೆಸಿಕೊಂಡಿದ್ದಾರೆ ಎಂಬುದು ಸುಳ್ಳು. ಮತ್ತು ಅಂದಿನ ಪ್ರಧಾನಿಗಳಾದ ಡಾ.ಮನಮೋಹನ್‌ ಸಿಂಗ್‌ ಅವರು ಟೀಂ ಇಂಡಿಯಾ ಕ್ರಿಕೆಟ್ ಆಟಗಾರರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಅವರು ಕೂಡ ಟೀ ಇಂಡಿಯಾ ಆಟಗಾರರನ್ನು ಭೇಟಿಯಾಗಿದ್ದಾರೆ. ಹಾಗಾಗಿ  ವೈರಲ್‌ ಆಗುವಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಭಾರತೀಯ ಸೈನಿಕರು ಅಪಘಾತದಲ್ಲಿ ಹುತಾತ್ಮರಾಗಿದ್ದಾರೆ ಹೊರತು ಉಗ್ರರಿಂದ ಹತರಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *