Fact Check: ಕಂಗಾನ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂಬುದು ಸುಳ್ಳು

ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇತ್ತೀಚೆಗೆ, ಕುಲ್ವಿಂದರ್ ಕೌರ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ರೈತರ ಚಳವಳಿಗೆ ಸಂಬಂಧಿಸಿದಂತೆ ಕಂಗಾನ ಹೇಳಿಕೆಯು ಇದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಕುಲ್ವಿಂದರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು.

ಈಗ ಅಮಾನತುಗೊಂಡಿದ್ದ ಕುಲ್ವಿಂದರ್ ಕೌರ್ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಅನೇಕ ಖಾತೆಗಳು ಸುದ್ದಿಯನ್ನು ಪೋಸ್ಟ್ ಮಾಡಿವೆ. “ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ. ಅವರ ಅಮಾನತನ್ನು ಹಿಂತೆಗೆದುಕೊಳ್ಳಲಾಗಿದೆ, ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಮತ್ತು ಬೆಂಗಳೂರಿನಲ್ಲಿ ನಿಯೋಜಿಸಲಾಗಿದೆ” ಎಂದು ಹಲವರು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಫಸ್ಟ್‌ಪೋಸ್ಟ್‌ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ ಸಹ ಇದೇ ಸುದ್ದಿಯನ್ನು ವರದಿ ಮಾಡಿವೆ.

ಫ್ಯಾಕ್ಟ್‌ಚೆಕ್: ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಕುಲ್ವಿಂದರ್ ಅವರನ್ನು ಚಂಡೀಗಢದಿಂದ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಆದರೆ, ಕುಲ್ವಿಂದರ್ ಕೌರ್ ಅವರನ್ನು ಇನ್ನೂ ಅಮಾನತಿನಲ್ಲಿರಿಸಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್ ಸ್ಪಷ್ಟಪಡಿಸಿದೆ.

ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ,  ಸಿಎಸ್ಐಎಫ್ ಎಕ್ಸ್‌(ಟ್ವಿಟರ್)ನಲ್ಲಿ ಹರಡುತ್ತಿರುವ ಸುದ್ದಿ ನಿಜವಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದೆ. “ಬಿಜೆಪಿ ಸಂಸದೆ ಕಂಗಾನ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಸಿಐಎಸ್ಎಫ್ ಕಾನ್ಸ್‌ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಇನ್ನೂ ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ವಿಚಾರಣೆ ಇನ್ನೂ ನಡೆಯುತ್ತಿದೆ” ಎಂದು ಸಿಎಸ್ಐಎಫ್ ಹೇಳಿಕೆಯನ್ನು ಎಎನ್ಐ ವರದಿ ಮಾಡಿದೆ.

ಕುಲ್ವಿಂದರ್ ಕೌರ್ ಅವರನ್ನು ಪುನಃ ಸೇರಿಸಿಕೊಳ್ಳಲಾಗಿದೆ ಎಂಬ ಸುದ್ದಿಯನ್ನು ಹರಡಿದ ಮೂಲ ಟ್ವೀಟ್ ಅನ್ನು ಅಳಿಸಲಾಗಿದೆ. “ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕಾನ್ಸ್‌ಟೆಬಲ್ ಕುಲ್ವಿಂದರ್ ಕೌರ್ ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಮತ್ತು ಬೆಂಗಳೂರಿನಲ್ಲಿ ನಿಯೋಜಿಸಲಾಗಿದೆ ಎಂದು ಪತ್ರಕರ್ತ ಗಗನ್ದೀಪ್ ಸಿಂಗ್ ಸುಳ್ಳು ಸುದ್ದಿಯನ್ನು ಹಂಚಿಕೊಂಡಿದ್ದಾರೆ” ಎಂದು ಮತ್ತೊಂದು ಖಾತೆ ಟ್ವೀಟ್ ಮಾಡಿದೆ.

ಮತ್ತೊಂದು ಖಾತೆಯು ಈ ಸುದ್ದಿ ನಕಲಿ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಎಚ್ಚರಿಸಿ, “ನಕಲಿ ಸುದ್ದಿ! ಕುಲ್ವಿಂದರ್ ಕೌರ್ ಇನ್ನೂ ಅಮಾನತುಗೊಂಡಿದ್ದಾರೆ ಮತ್ತು ವಿಚಾರಣೆ ಮುಗಿಯುವವರೆಗೆ ಅವರನ್ನು ಎಲ್ಲಿಯೂ ನೇಮಿಸಲಾಗುವುದಿಲ್ಲ. ಸುಳ್ಳು ಸುದ್ದಿಗಳ ವಿರುದ್ಧ ಸಿಐಎಸ್ಎಫ್ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸುತ್ತೇನೆ” ಎಂದು ಟ್ವಿಟ್‌ ಮಾಡಿದ್ದಾರೆ.

ಆದ್ದರಿಂದ ನಟಿ ಮತ್ತು ಬಿಜೆಪಿ ಸಂಸದೆ ಕಂಗಾನ ರಣಾವತ್‌ಗೆ ಕಪಾಳ ಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂಬುದು ಸುಳ್ಳು.


ಇದನ್ನು ಓದಿ: ಎಡಿಟ್ ವಿಡಿಯೋ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿ ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ.!


ವೀಡಿಯೋ ನೋಡಿ: ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *