ಸಾಮಾಜಿಕ ಜಾಲತಾಣದಲ್ಲಿ ” ಮಲ್ಲಿಕಾರ್ಜುನ ಖರ್ಗೆಯವರನ್ನು ಸದನಕ್ಕೆ ಆರಿಸಿ ಕಳುಹಿಸಿದ ಮತದಾರರಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಅವಮಾನ ಮಾಡಿದ್ದಾರೆ. ಈ ವಿಡಿಯೋ ನೋಡಿ. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನಾನು ಈ ಸ್ಥಾನಕ್ಕೆ ಬರಲು ಸೋನಿಯಾ ಗಾಂಧಿ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಆ ಮೂಲಕ ಇವರನ್ನು ಆರಿಸಿ ಕಳುಹಿಸಿದ ಮತದಾರರಿಗೆ ಇವರು ಅವಮಾನ ಮಾಡಿದ್ದಾರೆ.” ಎಂಬ ರೀತಿಯ ಹಲವು ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನೇ ಆಧಾರವಾಗಿರಿಸಿಕೊಂಡು ಟಿವಿ ವಿಕ್ರಮ ತನ್ನ ಯುಟ್ಯುಬ್ ಚಾನಲ್‌ನಲ್ಲಿ ಸುಳ್ಳು ಸುದ್ದಿಯನ್ನು ಹರಡಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನವನ್ನು ಮಾಡಿದೆ
ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೂಡ ಮಲ್ಲಿಕಾರ್ಜುನ ಖರ್ಗೆ ಅವರು ” ನಾನು ಈ ಸ್ಥಾನಕ್ಕೆ ಬರಲು ಶ್ರೀಮತಿ ಸೋನಿಯ ಗಾಂಧಿ ಕಾರಣ” ಎಂಬಂತೆಯೇ ಮಾತನಾಡಿರುವುದನ್ನು ನೋಡಬಹುದಾಗಿದೆ. ಇದೇ ವಿಡಿಯೋವನ್ನು ಹಂಚಿಕೊಂಡಿರುವ ಟಿವಿ ವಿಕ್ರಮ, ಜನರ ದಾರಿ ತಪ್ಪಿಸುತ್ತಿದ್ದು, ಇದು ಹಂಚಿಕೊಂಡ ಯುಟ್ಯಬ್ ವಿಡಿಯೋ ನೋಡಿದ ಹಲವು ಮಂದಿ ಇದು ನಿಜವಾದ ವಿಡಿಯೋ ಎಂದು ಸಾಮಾಜಿಕ ಜಾಲತಾಣದ ತಮ್ಮ ವೈಯಕ್ತಿ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಹಿರಿಯ, ಮುತ್ಸದಿ ಹಾಗೂ ಜವಬ್ದಾರಿಯುತವಾದ ರಾಜಕಾರಣಿ ಎನಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ನಿಜಕ್ಕೂ ಇಂತಹ ಹೇಳಿಕೆ ನೀಡಲು ಸಾಧ್ಯವೆ ಎಂಬ ಅನುಮಾನ ಕೂಡ ಮೂಡುತ್ತಿದೆ. ಹಾಗಾಗಿ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಸ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ ನಮಗೆ 02-07-2024 ರಂದು ಇಂಡಿಯಾ ಟುಡೆ ಸುದ್ದಿ ವಾಹಿನಿ ತನ್ನ ಯುಟ್ಯುಬ್ ಚಾನಲ್‌ನಲ್ಲಿ Sonia Gandhi Made Me: Mallikarjun Kharge’s Fiery Reply To Jagdeep Dhankhar In Rajya Sabha ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದು ಅಪ್‌ಲೋಡ್ ಮಾಡಿರುವುದನ್ನು ಕಂಡುಕೊಂಡಿದ್ದೇವೆ.
ಈ ವಿಡಿಯೋದಲ್ಲಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸ್ಪೀಕರ್ ಜಗದೀಪ್ ಧನ್ಕರ್ ಮತ್ತು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ನಡೆದ ವಾಗ್ವಾದವನ್ನು ನೋಡಬಹುದಾಗಿದೆ. ಈ ವೇಳೆ “ನನ್ನನ್ನು ಈ ಸ್ಥಾನಕ್ಕೆ ಬರುವಂತೆ ಮಾಡಿದವರು ಇಲ್ಲೇ ಕುಳಿತಿದ್ದಾರೆ, ಶ್ರೀಮತಿ ಸೋನಿಯಾ ಗಾಂಧಿ ಅವರು, ಇದಕ್ಕೆ ಜೈರಾಮ್ ರಮೇಶ್ ಅಥವಾ ನೀವು (ಸ್ಪೀಕರ್) ಕಾರಣವಲ್ಲ, ನನ್ನನ್ನು ಜನ ಈ ಸ್ಥಾನಕ್ಕೆ ತಂದಿದ್ದಾರೆ” ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಇದರಲ್ಲಿ “ಜನರು ನನ್ನನ್ನು ಇಲ್ಲಿಗೆ ತಂದಿದ್ದಾರೆ” ಎಂಬ ಕ್ಲಿಪ್ ಅನ್ನು ಕಟ್ ಮಾಡಿ ಟಿವಿ ವಿಕ್ರಮ ವಿಡಿಯೋವನ್ನು ಹಂಚಿಕೊಂಡಿದೆ. ಆದರೆ ಇದರ ಅಸಲಿ ವಿಡಿಯೋವನ್ನು ಕಾಂಗ್ರೆಸ್ ಬೆಂಬಲಿಗರು ಸೇರಿದಂತೆ, ಹಲವರು ತಮ್ಮ ಎಕ್ಸ್ ಖಾತೆಯಲ್ಲಿ ಎಡಿಟೆಡ್ ವಿಡಿಯೋ ಮತ್ತು ನಿಜವಾದ ವಿಡಿಯೋ ಯಾವುದು ಎಂದು ಹಂಚಿಕೊಂಡಿದ್ದಾರೆ.
Fake news factory of BJP exposed pic.twitter.com/QaO3YYSJHZ
— Spirit of Congress✋ (@SpiritOfCongres) July 2, 2024
ಇನ್ನು ಇದೇ ಟಿವಿ ವಿಕ್ರಮ ತನ್ನ ಯುಟ್ಯುಬ್ ವಿಡಿಯೋವಿನ ಥಂಬ್‌ನೇಲ್‌ನಲ್ಲಿ “ಸೋನಿಯಾ ಗಾಂಧಿ ಕಾಲಿಗೆ ಅಡ್ಡಡ್ಡ ಬಿದ್ರು ಖರ್ಗೆ! ಛೀ ಎಂಥಾ ಗುಲಾಮಗಿರಿ ಇದು!” ಎಂಬ ಸಾಲುಗಳನ್ನು ಬರೆದು ಅದನ್ನೇ ಶೀರ್ಷಿಕೆಯಾಗಿ ನೀಡಿದೆ. ಇನ್ನು ಈ ಸುದ್ದಿ ನಿರೂಪಣೆ ಮಾಡಿದೆ ನಿರೂಪಕಿ ಶ್ವೇತ ಒಂದು ಹಂತದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ “ಅಲ್ರಿ ಖರ್ಗೆ ಸಾಹೇಬ್ರೆ ಕಲಬುರ್ಗಿ ಮಂದಿ ನಿಮಗೆ ಆಶಿರ್ವಾದ ಮಾಡಿದಿಲ್ಲಾ ಅಂದ್ರಾ, ವೋಟ್ ಕೊಡ್ಲಾರ್ದೆ ಇದ್ರಾ, ಸತತವಾಗಿ ಗೆಲ್ಲಿಸ್ಲಾದ್ರೆ ಹೋಗಿದ್ರಾ, ಸೋನಿಯಾ ಗಾಂಧಿ ಬಿಡ್ರಿ, ಅವ್ರು ಮನಿ ನಾಯಿ ಸಹಿತ ನಿಮ್ಮನ್ನ ಮೂಸ್ತಿರ್ಲಿಲ್ಲ.” ಎಂದು ತನ್ನ ಕೊಳಕು ಬಾಯಿಯಿಂದ ಹಿರಿಯ, ಮುತ್ಸದಿ ರಾಜಕಾರಣಿಯಾದ ಖರ್ಗೆ ಅವರಿಗೆ ಅವಮಾನ ಮಾಡಿದ್ದಾರೆ. ಇನ್ನು ಈ ಎಡಿಟೆಡ್ ವಿಡಿಯೋವನ್ನು ಕೇವಲ ಟಿವಿ ವಿಕ್ರಮ ಮಾತ್ರವಲ್ಲ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಸೇರಿದಂತೆ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಏಳಿಗೆಗೆ ಸೋನಿಯಾ ಗಾಂಧಿ ಮಾತ್ರ ಕಾರಣ ಎಂದಿದ್ದಾರೆ ಎಂಬ ವಿಡಿಯೋ ಎಡಿಟೆಡ್ ಆಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದು ಅಪರಾಧವಾಗಿ. ಹಾಗೂ ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸಿ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ