Fact Check | ತಮಿಳುನಾಡು ಕ್ರೈಸ್ತರು ದೇವಾಲಯವನ್ನು ಚರ್ಚ್‌ ಆಗಿ ಪರಿವರ್ತಿಸಿದ್ದಾರೆ ಎಂಬುದು ಸುಳ್ಳು

“ತಮಿಳುನಾಡಿನ ರಾಮನಾಥಪುರಂನಲ್ಲಿರುವ ಅಧಿಯಮಾನ್ ಎಂಬಲ್ಲಿನ ಹಳೆಯ ದೇವಾಲಯವನ್ನು ಕ್ರಿಶ್ಚಿಯನ್ನರು ಆಕ್ರಮಿಸಿಕೊಂಡರು ಮತ್ತು ಅದನ್ನು ಚರ್ಚ್ ಆಗಿ ಪರಿವರ್ತಿಸಿದ್ದಾರೆ. ಈಗಲೂ ಹಿಂದೂಗಳು ಎಚ್ಚೆತ್ತುಕೊಳ್ಳದೆ ಹೋದರೆ ಇನ್ನೂ ಹಲವು ದೇವಾಲಯಗಳು ಚರ್ಚ್‌ಗಳಾಗಿ ಬದಲಾಗುತ್ತವೆ. ಮುಂದೆ ಭಾರತದಲ್ಲಿ ದೇವಾಲಯಗಳು ಇದ್ದವು ಎಂದು ನಾವು ಪಠ್ಯ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ.” ಎಂಬ ಬರಹದೊಂದಿಗೆ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಫೋಟೋ ನೋಡಿದ ಹಲವರು ಇದು ನಿಜವಾದ ಫೋಟೋ ಎಂದು ಭಾವಿಸಿ ಶೇರ್‌ ಮಾಡುತ್ತಿದ್ದು, ಸಾಕಷ್ಟು ಮಂದಿ ಕ್ರೈಸ್ತ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಫೋಟೋದಲ್ಲಿ ಕೂಡ ದೇವಾಲಯದ ಕಟ್ಟಡದಲ್ಲಿ ಶಿಲುಬೆಯ ಚಿಹ್ನೆ ಇರುವುದನ್ನು ಗಮನಿಸಬಹುದಾಗಿದೆ. ಹೀಗಾಗಿ ಸಾಕಷ್ಟು ಮಂದಿ ನಿಜವಾಗಿಯೂ ಈ ಘಟನೆ ನಡೆದಿದೆ ಎಂದು ಭಾವಿಸಿದ್ದಾರೆ. ಆದರೆ ಈ ಕುರಿತು ಕೆಲವು ಅನುಮಾನಗಳು ಕೂಡ ಹುಟ್ಟಿಕೊಂಡಿವೆ. ಹಾಗಾಗಿ ವೈರಲ್‌ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಫೋಟೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ಫೋಟೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಲಾಯಿತು ಆದರೆ, ಇದಕ್ಕೆ ಪೂರಕವಾದ ಯಾವುದೇ ವರದಿಗಳು ಲಭ್ಯವಾಗಿಲ್ಲ. ಒಂದು ವೇಳೆ ಇಂತಹ ಘಟನೆ ನಡೆದಿದ್ದೇ ಆದರೆ, ಈ ಕುರಿತು ರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ಸ್ಥಳೀಯ ಮಾಧ್ಯಮಗಳವರೆಗೂ ಸಾಲು ಸಾಲು ವರದಿಗಳು ಬರಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಪತ್ತೆಯಾಗಿಲ್ಲ.

ಹೆಚ್ಚಿನ ಮಾಹಿತಿಗಾಗಿ ವೈರಲ್‌ ಪೋಟೋವಿನ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಲಾಯಿತು. ಈ ವೇಳೆ 9 ಅಕ್ಟೋಬರ್‌ 2013ರಂದು Rajans’ Ministry Updates ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ  “ಚರ್ಚ್ ಅನ್ನು ಭಾರತೀಯ ಶೈಲಿಯಲ್ಲಿ ರೂಪಿಸಲಾಗಿದೆ!” ಎಂಬ ಬರಹದೊಂದಿಗೆ ಹಂಚಿಕೊಳ್ಳಲಾಗಿದ್ದ ವೈರಲ್‌ ಫೋಟೋವು ಕಂಡು ಬಂದಿದೆ. ಇದು ತಮಿಳುನಾಡಿನ ತೆಂಕಶಿ ಜಿಲ್ಲೆಯಲ್ಲಿರುವ ಕುರ್ಟಾಲಂನಲ್ಲಿರುವ ಚರ್ಚ್ ಎಂದು ಈ ಪೋಸ್ಟ್‌ನ ಕಮೆಂಟ್‌ನಲ್ಲಿ ಕೂಡ ಉಲ್ಲೇಖಿಸಲಾಗಿದೆ.

ಇನ್ನು ಈ ಮಾಹಿತಿಯ ಆಧಾರದ ಮೇಲೆ ಹುಡುಕಾಟ ನಡೆಸಿದಾಗ ಎನ್‌ಎಂಎಸ್‌ಐನ (ನ್ಯಾಷನಲ್ ಮಿಷನರಿ ಸೊಸೈಟಿ ಆಫ್ ಇಂಡಿಯಾ) ಕ್ರಿಸ್ತಕುಲ ಆಶ್ರಮ ಕುರ್ಟಾಲಂ ಎಂಬ ಶೀರ್ಷಿಕೆಯ ಈ ಫೇಸ್‌ಬುಕ್ ಆಲ್ಬಂನಲ್ಲಿನ ಇದೇ ರೀತಿಯ ಫೋಟೋಗಳು ಕಂಡು ಬಂದಿದ್ದು,  ಭಾರತೀಯ ದೇವಾಲಯಗಳ ಶೈಲಿಗಳಿಂದ ಸ್ಪೂರ್ತಿ ಪಡೆದುಕೊಂಡು ಇಲ್ಲಿ ಚರ್ಚ್‌ಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕುರಿತು ಇಂಡಿಯಾ ಹಿಸ್ಟರಿ ಎಂಬ ಫೇಸ್‌ಬುಕ್‌ ಪೇಜ್‌ ಸಂಪೂರ್ಣ ಮಾಹಿತಿಯನ್ನು ನೀಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಚರ್ಚ್‌ ಅನ್ನು ದ್ರಾವೀಡ ದೇವಾಲಯದಂತೆ ನಿರ್ಮಿಸಲಾಗಿದೆಯೇ ಹೊರತು ಕ್ರೈಸ್ತರು ದೇವಾಲಯವನ್ನು ಚರ್ಚ್‌ ಆಗಿ ಬದಲಾಯಿಸಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ.


ಇದನ್ನೂ ಓದಿ : Fact Check | ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಭ್ರಷ್ಟ ಪೋಲೀಸ್ ಅಧಿಕಾರಿ ಬಂಧನ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *