Fact Check: ರಾಹುಲ್ ಗಾಂಧಿ ಹೇಳಿಕೆಗಳನ್ನು ತಿರುಚಿ ಅವರ ಹಿಂದು ವಿರೋಧಿ ಹೇಳಿಕೆಗಳ ಪಟ್ಟಿ ಎಂದು ಹಂಚಿಕೊಳ್ಳಲಾಗುತ್ತಿದೆ

ರಾಹುಲ್ ಗಾಂಧಿ

ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ತಿರುಚಿ ಅವರನ್ನು ಹಿಂದು ಧರ್ಮ ವಿರೋಧಿ ಎಂದು ಬಿಂಬಿಸುತ್ತಿರುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಾಹುಲ್ ಗಾಂಧಿಯವರು ಎಲ್ಲಿಯೇ ಭಾಷಣ ಮಾಡಿದರೂ ಮತ್ತು ಹೇಳಿಕೆಗಳನ್ನು ನೀಡಿದರೂ ಅವುಗಳನ್ನು ತಿರುಚಿ ಅಥವಾ ಎಡಿಟ್‌ ಮಾಡಿ ವೀಡಿಯೋ ಮತ್ತು ಪೋಸ್ಟರ್ ಹಂಚಿಕೊಳ್ಳಲಾಗುತ್ತಿದೆ.

ಈಗ ಅದೇ ರೀತಿಯ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಅದರಲ್ಲಿ, “ರಾಹುಲ್ ಗಾಂಧಿಯ ಹಿಂದೂ ವಿರೋಧಿ ಹೇಳಿಕೆಗಳು: ಹಿಂದೂಗಳು ದೇವಸ್ಥಾನಕ್ಕೆ ಹೋಗಿ ಬಂದ ಮೇಲೆ ಬಸ್‌ನಲ್ಲಿ ಮಹಿಳೆಯರನ್ನು ಚುಡಾಯಿಸ್ತಾರೆ. ಹಿಂದೂಗಳು, ಹಿಂದುತ್ವ ಪರ ಹೋರಾಟಗಾರರು ಟೆರರಿಸ್ಟ್‌ಗಳು, ಹಿಂದೂ ಧರ್ಮದಲ್ಲಿ ದೇವಿಗೆ ‘ಶಕ್ತಿ’ ಅಂತ ಕರೆಯುತ್ತಾರೆ. ನಾವೆಲ್ಲ ಆ ‘ಶಕ್ತಿ’ಯ ವಿರುದ್ಧ ಹೋರಾಡಬೇಕಿದೆ. ಹಿಂದೂಗಳ ಹಿಂಸಾಚಾರಿಗಳು, ಅವರ ದೇವರು ಶಿವನ ತ್ರಿಶೂಲವೂ ಹಿಂಸೆಯ ಪ್ರತಿರೂಪ. ಹಿಂದೂ ವಿರೋಧಿ, ರಾಹುಲ್ ಗಾಂಧಿಗೆ ನಿಮ್ಮ ಧಿಕ್ಕಾರವಿರಲಿ.” ಎಂಬ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟರ್ ಅವನ್ನು “ಚುನಾವಣೆ ಸಂಧರ್ಭ ವೋಟ್ ಗಾಗಿ ಕೌಲ್ ಬ್ರಾಹ್ಮಣನಾಗಿ ಬದಲಾಗುವ ಫಿರೋಜ್ ಖಾನ್ ನ ಮೊಮ್ಮಗ ರಾಹುಲ್ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದನ್ನು ಕಾಂಗ್ರೆಸ್ ಹಿಂದೂಗಳು ಖಂಡಿಸುವ ಧೈರ್ಯ ಇದೆಯೇ?? ಹಿಂದೂ ಧರ್ಮವನ್ನು ಅವಹೇಳನ ಮಾಡಿದ ರಾಹುಲ್ ಗಾಂಧಿ ವಿರುದ್ಧ ನಿಮ್ಮ ಪೊಲೀಸ್ ಠಾಣೆಗಳಲ್ಲಿ ಕೇಸ್ ಜಡಿಯಲು ಹಿಂದುಗಳಿಗೆ ಧೈರ್ಯ ಇಲ್ಲವೇ?? ದಿಕ್ಕಾರ ಕೂಗುವುದಕ್ಕೆ ಸೀಮಿತವಾಗಿರುವ ಹಿಂದೂಗಳು ರಾಹುಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡಲಿ ನೋಡೋಣ” ಎಂಬ ಶಿರ್ಷಿಕೆಯೊಂದಿಗೆ ವಾಟ್ಸಾಪ್‌ನಲ್ಲಿ ಸಾಕಷ್ಟು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ಈ ಪೋಸ್ಟರ್ ನಲ್ಲಿ ನೀಡಲಾಗಿರುವ ಹೇಳಿಕೆಗಳು ರಾಹುಲ್ ಗಾಂಧಿಯವರ ಮೂಲ ಭಾಷದಿಂದ ತಿರುಚಲಾಗಿದೆ. ಇಂತಹ ಯಾವುದೇ ಹೇಳಿಕೆಯನ್ನು ರಾಹುಲ್ ಗಾಂಧಿಯವರು ನೀಡಿಲ್ಲ.

ಹೇಳಿಕೆ ೧: 

ರಾಹುಲ್ ಗಾಂಧಿಯವರು ಅವರ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದಂದು ಆಗಸ್ಟ್‌ 20, 2014ರಲ್ಲಿ ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಭಾರತದಲ್ಲಿ ಜನರು ‘ದೇವಿ’ಯನ್ನು ಪೂಜಿಸುತ್ತಾರೆ ಮತ್ತು ಮಹಿಳೆಯರನ್ನು ತಮ್ಮ ತಾಯಿ ಅಥವಾ ಸಹೋದರಿ ಎಂದು ಸಂಬೋಧಿಸುತ್ತಾರೆ. ಆದರೆ ಆಗಾಗ್ಗೆ ಅದೇ ಜನರು ಬಸ್‌ಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಾರೆ ಮತ್ತು ಅವರನ್ನು ನಿಯಂತ್ರಿಸುತ್ತಾರೆ.” 

ಕಾನೂನು ಜಾರಿಯಿಂದ ಮಾತ್ರ ಸಮಾಜ ಬದಲಾಗುವುದಿಲ್ಲ. ಜನರ ಮನಸ್ಥಿತಿಯನ್ನು ಬದಲಾಯಿಸುವ ಮೂಲಕ ಅಭಿವೃದ್ಧಿ ಹೊಂದುತ್ತಾರೆ. ನಾವು ಮಹಿಳೆಯರನ್ನು ಸಬಲೀಕರಣಗೊಳಿಸಬೇಕು, ಅವರಿಗೆ ಅಧಿಕಾರ ನೀಡಬೇಕು ಮತ್ತು ಅವರ ನೋವನ್ನು ಹಂಚಿಕೊಳ್ಳಬೇಕು” ಎಂದು ರಾಹುಲ್ ಗಾಂಧಿಯವರು ದೇಶದಲ್ಲಿ ಮಹಿಳೆಯ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳಿಗೆ ಪ್ರತಿಯಾಗಿ ಈ ಹೇಳಿಕೆ ನೀಡಿದ್ದರು.  ಈ ಕುರಿತು ಅನೇಕ ಮಾಧ್ಯಮಗಳು ವರದಿ ಮಾಡಿದ್ದು ಇಂಡಿಯಾ ಟಿವಿ ವರದಿಯನ್ನು ನೀವು ಓದಬಹುದು. 

ಹೇಳಿಕೆ ೨:

ರಾಹುಲ್ ಗಾಂಧೀಯವರು ಹಿಂದು ಅಥವಾ ಹಿಂದುತ್ವವನ್ನು ಬೆಂಬಲಿಸುವವರು ಭಯೋತ್ಪಾದಕರು ಎಂದು ಹೇಳಿರುವ ಕುರಿತು ಹುಡುಕಿದಾಗ ಯಾವುದೇ ವರದಿಗಳು ಕಂಡು ಬಂದಿಲ್ಲ. ರಾಹುಲ್ ಗಾಂಧಿಯವರು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದರು ದೇಶದ ಬಹುತೇಕ ಮಾಧ್ಯಮಗಳು ಇದನ್ನು ವರದಿಯನ್ನು ಮಾಡಿರುತ್ತಿದ್ದವು, ಆದರೆ ಈ ಕುರಿತು ಯಾವುದೇ ವರದಿಗಳು ಲಭ್ಯವಾಗದೇ ಇರುವುದರಿಂದ ರಾಹುಲ್ ಗಾಂಧಿಯವರು ಇಂತಹ ವಿವಾದಾತ್ಮಕ ಹೇಳಿಕೆಯನ್ನು ನೀಡಿಲ್ಲ ಎಂದು ಭಾವಿಸಬಹುದು.

ಹೇಳಿಕೆ ೩: 

ರಾಹುಲ್ ಗಾಂಧಿಯವರು ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, “ಹಿಂದಿಯಲ್ಲಿ ‘ಶಕ್ತಿ’ (ಶಕ್ತಿ) ಎಂಬ ಪದವಿದೆ. ನಾವು ‘ಶಕ್ತಿ’ (ರಾಜ್ಯದ ಶಕ್ತಿ) ವಿರುದ್ಧ ಹೋರಾಡುತ್ತಿದ್ದೇವೆ. ಪ್ರಶ್ನೆ ಏನೆಂದರೆ, ಆ ‘ಶಕ್ತಿ’ ಎಂದರೇನು ಮತ್ತು ಅದು ನಮಗೆ ಏನನ್ನು ನೀಡುತ್ತದೆ?” ಎಂದು ಹೇಳಿಕೆ ನೀಡಿದ್ದರು. ಅವರು ಭಾಷಣದ ಈ ಹೇಳಿಕೆಯ ತುಣುಕನ್ನು ಮಾತ್ರ ಸಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿತ್ತು, ಮತ್ತು ಅನೇಕರು ರಾಹುಲ್ ಗಾಂಧಿ ಶಕ್ತಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿಯವರು ” ನನ್ನ ಹೇಳಿಕೆಯನ್ನು ಸಂದರ್ಭದಿಂದ ಹೊರತೆಗೆಯಲಾಗಿದೆ. ನಾವು ಹೋರಾಡುತ್ತಿರುವ ‘ಶಕ್ತಿ’ ವ್ಯವಸ್ಥೆಯಲ್ಲಿ ಆಳವಾಗಿ ಆವರಿಸಿದೆ, ಪ್ರಧಾನಿ ಅದರ ಮುಖವಾಡ ಮಾತ್ರ, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸಿದ್ದು, ಸಿಬಿಐ, ಇಡಿಯಂತಹ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿಸಿ ಇಡೀ ಸಾಂವಿಧಾನಿಕ ವ್ಯವಸ್ಥೆಯನ್ನು ಮಜಾ ಮಾಡಿದ್ದು ‘ಶಕ್ತಿ’.

ಈ ಶಕ್ತಿಯಿಂದಾಗಿ ಬಡ ಮತ್ತು ಅಂಚಿನಲ್ಲಿರುವ ರೈತರು ಹೆಚ್ಚು ದಯನೀಯ ಪರಿಸ್ಥಿತಿಗಳಿಗೆ ತಳ್ಳಲ್ಪಡುತ್ತಿದ್ದಾರೆ, ಆದರೆ ದೊಡ್ಡ ಕಾರ್ಪೊರೇಟ್‌ಗಳು ನೂರಾರು ಸಾವಿರಾರು ಕೋಟಿಗಳ ಬ್ಯಾಂಕ್ ಸಾಲ ಮನ್ನಾವನ್ನು ಪಡೆಯುತ್ತಿದ್ದಾರೆ” ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಅವರ ಹೇಳಿಕೆ ವಿವಾದಕ್ಕೆ ತಿರುಗಿದ ಕುರಿತು ಸ್ಪಷ್ಟನೆ ನೀಡಿದ್ದರು. ಅವರು ಭಾಷಣದಲ್ಲಿ ಶಕ್ತಿ ಎಂಬ ಪದವನ್ನು “ದೇವಿ” ಎಂಬ ಅರ್ಥದಲ್ಲಿ ಬಳಸದೆ, “ದುಷ್ಟ ಶಕ್ತಿ” ಎನ್ನುವ ಅರ್ಥದಲ್ಲಿ ಮತ್ತು ಅದರ ವಿರುದ್ಧ ನಾವು ಹೋರಾಡಬೇಕಿದೆ ಎಂದಿದ್ದೇನೆ ಎಂದು ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ. ಮತ್ತು ತಮ್ಮ ಭಾಷಣವನ್ನು ತಿರುಚಿ ವರದಿ ಮಾಡಿದ್ದಕ್ಕಾಗಿ, “ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವು ಸತ್ಯಗಳನ್ನು ವರದಿ ಮಾಡುವುದನ್ನು ನಿಲ್ಲಿಸಿದೆ ಮತ್ತು ಈ ‘ಶಕ್ತಿ’ಗೆ ವಂದನೆ ಸಲ್ಲಿಸುತ್ತೇನೆ” ಎಂದು ಹೇಳಿದರು.

ಹೇಳಿಕೆ ೪: 

ರಾಹುಲ್ ಗಾಂಧಿಯವರು ವಿರೋಧ ಪಕ್ಷದ ನಾಯಕನಾಗಿ ಮಾಡಿದ ಮೊದಲ ಭಾಷಣದಲ್ಲಿ ಹಿಂದುಗಳ ವಿರುದ್ಧ ಮಾತನಾಡಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ.

ಅವರು ಸಂಸತ್ತಿನಲ್ಲಿ ಆಡಿದ ಮಾತುಗಳು ಹೀಗಿವೆ, “ಈ ದೇಶ ಅಹಿಂಸೆಯ ದೇಶ. ಈ ದೇಶ ಹೆದರಿಸುವ ದೇಶ ಅಲ್ಲ. ನಮ್ಮ ಎಲ್ಲಾ ಮಹಾಪುರುಷರು ಅಹಿಂಸೆಯ ಕುರಿತು ಮಾತನಾಡಿದ್ದಾರೆ. ಭಯ ದೂರವಾಗಿಸುವ ಬಗ್ಗೆ ಮಾತನಾಡಿದ್ದಾರೆ. ಹೆದರಬೇಡಿ, ಹೆದರಿಸಬೇಡಿ, ಭಗವಾನ್ ಶಿವ ಹೇಳುವುದೇನೆಂದರೆ ಹೆದರಬೇಡಿ, ಹೆದರಿಸಬೇಡಿ, ಅದಕ್ಕಾಗಿಯೇ ನಾವು ಅಭಯ ಮುದ್ರೆಯನ್ನು ತೋರಿಸುತ್ತೇವೆ. ಅಹಿಂಸೆಯ ಮಾತನಾಡುತ್ತಾರೆ, ತ್ರಿಶೂಲವನ್ನು ಭೂಮಿಯಲ್ಲಿ ಚುಚ್ಚಿ ಹೇಳುತ್ತಾರೆ. ಆದರೆ ಯಾವ ಜನರು ತಮ್ಮನ್ನು ತಾವು ಹಿಂದುಗಳು ಎಂದು ಕರೆದುಕೊಳ್ಳುತ್ತಿದ್ದಾರೆ ಅವರು 24 ಗಂಟೆ ಹಿಂಸೆ, ಹಿಂಸೆ, ಹಿಂಸೆ.. ದ್ವೇಷ, ದ್ವೇಷ, ದ್ವೇಷ, ಸುಳ್ಳು, ಸುಳ್ಳು.. ಸುಳ್ಳು . ಅಸಲಿಗೆ ನೀವು ಹಿಂದುಗಳೇ ಅಲ್ಲ” ಎಂದು ಆರೋಪಿಸಿದ್ದಾರೆ.

ಮುಂದುವರೆದು ” ಹಿಂದು ಧರ್ಮದಲ್ಲಿ ಸರಳವಾಗಿ ಬರೆದಿದ್ದಾರೆ. ಸತ್ಯದ ಪರವಾಗಿ ನಿಲ್ಲಬೇಕು, ಸತ್ಯಕ್ಕೆ ವಿಮುಖವಾಗಿರಬಾರದು, ಸತ್ಯಕ್ಕೆ ಹೆದರಿಕೊಳ್ಳಬಾರದು. ಅಹಿಂಸೆ ನಮ್ಮ ಪ್ರತೀಕವಾಗಿದೆ” ಎಂದು ಅಭಯ ಮುದ್ರೆಯನ್ನು ಬಿಜೆಪಿ ನಾಯಕರಿಗೆ ತೋರಿಸಿದ್ದಾರೆ.

ಇದಕ್ಕೆ ನರೇಂದ್ರ ಮೋದಿಯವರು ” ಹಿಂದುಗಳನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭಿರ ವಿಚಾರವಾಗಿದೆ” ಎಂದು ರಾಹುಲ್ ಗಾಂಧಿಯವರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಪ್ರತಿಕ್ರಯಿಸಿದ ರಾಹುಲ್ ಗಾಂಧಿಯವರು “ಇಲ್ಲ, ಇಲ್ಲ.. ನರೇಂದ್ರ ಮೋದಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ, ಕೇವಲ ಬಿಜೆಪಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ ಮತ್ತು ಆರ್‌ಎಸ್‌ಎಸ್‌ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ” ಎಂದು ತೀವ್ರ ಟೀಕೆ ಮಾಡಿದ್ದಾರೆ.

ರಾಹುಲ್ ಗಾಂಧಿ ಯಾರು ಹಿಂದು ಧರ್ಮದ, ಹಿಂದುತ್ವದ ಹೆಸರು ಹೇಳಿಕೊಂಡು ಹಿಂಸೆಗೆ ಇಳಿಯುತ್ತಾರೋ ಅವರು ನಿಜವಾಗಿಯೂ ಹಿಂದುಗಳಲ್ಲ ಎಂದು ಹೇಳಿದ್ದಾರೆ. ಅವರು ಸಂಸತ್ತಿನಲ್ಲಿ ಆಡಿರುವ ಮಾತುಗಳನ್ನು ಈ ಕೆಳಗೆ ಅನುವಾದದೊಂದಿಗೆ ನೋಡಬಹದು.

ಆದ್ದರಿಂದ ರಾಹುಲ್ ಗಾಂಧಿಯವರನ್ನು ಹಿಂದು ವಿರೋಧಿ ಎಂದು ಬಿಂಬಿಸಲು ಬೇಕಂತಲೇ ಅವರ ಹೇಳಿಕೆಗಳನ್ನು ತಿರುಚಿ, ಹಿಂದುಗಳಲ್ಲಿ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಕುರಿತು ದ್ವೇಷ ಬೆಳೆಯಲಿ ಎಂಬ ಕಾರಣಕ್ಕಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಎಡಿಟ್ ವೀಡಿಯೋ ಹಂಚಿಕೊಂಡ ನಿರ್ಮಲ ಸೀತಾರಾಮನ್


ವೀಡಿಯೋ ನೋಡಿ: ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *