“ಶಾಸಕಿ ಕಿರಣ್ ಚೌಧರಿ ಅವರು “ಮೋದಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂಬ ಆರೋಪವು ತಮ್ಮ ಪಕ್ಷದಿಂದ ಪ್ರಾರಂಭಿಸಿದ ಚುನಾವಣ ಪ್ರಚಾರ” ಎಂದು ಒಪ್ಪಿಕೊಂಡಿದ್ದಾರೆ. ಇದು ಅವರು ಕಾಂಗ್ರೆಸ್‌ನಲ್ಲಿ ಇರುವಾಗಲೇ ಹೇಳಿದ್ದಾರೆ. ಕಾಂಗ್ರೆಸ್‌ನ ಅಸಲಿ ಮುಖವನ್ನು ಕಾಂಗ್ರೆಸ್‌ನ ಶಾಸಕಿಯೇ ಬಹಿರಂಗ ಪಡಿಸಿದ್ದರು.” ಎಂಬ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಸಾಕಷ್ಟು ಮಂದಿ ಕಾಂಗ್ರೆಸ್ ವಿರೋದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ.
https://www.youtube.com/watch?v=WZKVv9Pxbfo
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋದಲ್ಲಿ ಶಾಸಕಿ ಕಿರಣ್ ಚೌಧರಿ ಅವರೇ ಈ ಹೇಳಿಕೆಯನ್ನು ನೀಡಿರುವುದನ್ನು ಕಾಣಬಹುದಾಗಿದೆ. ಹೀಗಾಗಿಯೇ ಹಲವು ಮಂದಿ ಈ ವೈರಲ್ ವಿಡಿಯೋವನ್ನು ನಿಜವಾದ ವಿಡಿಯೋ ಎಂದು ನಂಬಿ ಶೇರ್ ಮಾಡುತ್ತಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಕಿರಣ್ ಚೌಧರಿ ಅವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೆಲವೊಂದು ಪ್ರಶ್ನೆಗಳು ಕೂಡ ಮೂಡುತ್ತವೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಪಂಜಾಬ್ ಕೇಸರಿ ಹರಿಯಾಣ ಎಂಬ ಸುದ್ದಿ ಸಂಸ್ಥೆ ತನ್ನ ಯುಟ್ಯೂಬ್ ಚಾನಲ್‌ನಲ್ಲಿ 25 ಜೂನ್ 2024ರಂದು “ನಿಜ ಹೇಳಬೇಕೆಂದರೆ ಚುನಾವಣೆಯಲ್ಲಿ ಸಂವಿಧಾನದ ಬಗ್ಗೆ ಸುಳ್ಳು ಹೇಳಿದ್ದೆವು, ಕಾರ್ಯಕರ್ತರಲ್ಲಿ ಕಿರಣ್ ಯುಟರ್ನ್” ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡು ಕೊಂಡಿದ್ದೇವೆ.
https://www.youtube.com/watch?v=66HnKgrJFVo
ಇನ್ನು, ಈ ವರದಿಯಲ್ಲಿ ಕಿರಣ್ ಚೌಧರಿ ಅವರು ಬಿಜೆಪಿ ಸೇರಿದ ನಂತರ “ಮೋದಿ ಅವರು ಸಂವಿಧಾನದ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿದ್ದು ಚುನಾವಣ ಪ್ರಚಾರದ ಉದ್ದೇಶದಿಂದ” ಎಂದು ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ. ಅಲ್ಲಿಗೆ ಕಿರಣ್ ಚೌಧರಿ ಅವರು ಕಾಂಗ್ರೆಸ್‌ನಲ್ಲಿರುವಾಗ ಈ ಹೇಳಿಕೆಯನ್ನು ನೀಡಿಲ್ಲ. ಬದಲಾಗಿ ಬಿಜೆಪಿ ಸೇರಿದ ನಂತರ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಹೊಗಳುವ ಕಾರ್ಯದಲ್ಲಿ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
ಇನ್ನು ಇದೇ 18 ಜೂನ್ 2024ರಂದು ಕಿರಣ್ ಚೌಧರಿ ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದರು ಮತ್ತು 19 ಜೂನ್ 2024 ರಂದು ಬಿಜೆಪಿ ಸೇರಿದ್ದರು ಎಂಬುದು ತಿಳಿದು ಬಂದಿದ್ದು, ಅವರು ತಮ್ಮ ಅಧಿಕೃತ ಎಕ್ಸ್ (ಈ ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಹಂಚಿಕೊಂಡಿರುವುದು ಕೂಡ ಕಂಡು ಬಂದಿದೆ. ಈ ಮೂಲಕ ಕಿರಣ್ ಚೌಧರಿ ಅವರು ನೀಡಿದ ಹೇಳಿಕೆಯ ದಿನಾಂಕ ಮತ್ತು ಅವರು ಬಿಜೆಪಿ ಸೇರಿದ ದಿನಾಂಕವನ್ನು ಪರಿಶೀಲಿಸಿದಾಗ, ಅವರು ಬಿಜೆಪಿ ಸೇರಿದ ನಂತರವೇ ಕಾಂಗ್ರೆಸ್ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಖಚಿತವಾಗಿದೆ.
https://twitter.com/officekiran/status/1803300194399977983
ಒಟ್ಟಾರೆಯಾಗಿ ಹೇಳುವುದಾದರೆ.. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ “ಮೊದಿ ಅವರು ಸಂವಿಧಾನ ಬದಲಾಯಿಸುತ್ತಾರೆ ಎಂಬುದು ಕೇವಲ ಕಾಂಗ್ರೆಸ್‌ನ ಚುನಾವಣ ಪ್ರಚಾರ” ಎಂಬ ಹೇಳಿಕೆಯನ್ನು ಕಿರಣ್ ಚೌಧರಿ ಅವರು ಬಿಜೆಪಿ ಸೇರಿದ ನಂತರ ನೀಡಿದ್ದಾರೆಯೇ ಹೊರತು ಕಾಂಗ್ರೆಸ್‌ನಲ್ಲಿದ್ದಾಗ ಅಲ್ಲ ಎಂಬುದು ಹಲವು ನಿಖರ ಮಾಹಿತಿಗಳಿಂದ ಸ್ಪಷ್ಟವಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ಕೇರಳದಲ್ಲಿ ಯುಪಿ ಪೇಂಟರ್ ಕೊಲೆ ಎಂಬ ವಿಡಿಯೋ ಭಾರತದ್ದದಲ್ಲ, ಬ್ರೆಜಿಲ್‌ನದ್ದು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ