ಕೀರ್ತಿಚಕ್ರ ಪ್ರಶಸ್ತಿ ಪುರಸ್ಕೃತ, ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರ ಕುರಿತು ಸಾಮಾಜಿಕ ಜಾಲತಾಣದ ಬಳಕೆದಾರನಾದ ಅಹ್ಮದ್.ಕೆ ಎಂಬ ವ್ಯಕ್ತಿ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್ ಮಾಡಿದ್ದು, ಇದು ದೇಶಾದ್ಯಂತ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು. ಜೊತೆಗೆ ಆ ಪ್ರೊಫೈಲ್ ಹೊಂದಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹ ಸಾರ್ವಜನಿಕ ವಲಯದಿಂದ ಕೂಡ ಬಂದಿದ್ದು, ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಮುಖವಾಡ ಧರಿಸಿದ ವ್ಯಕ್ತಿಯನ್ನು ಹೊಂದಿರುವ ಚಿತ್ರವನ್ನು ಬಳಸಿಕೊಂಡು ಕೆಲವರು “ದೆಹಲಿ ಪೊಲೀಸರು ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ಫೋಟೋವನ್ನು ಸಾಕಷ್ಟು ಮಂದಿ ಇದು ನಿಜವಾದ ಫೊಟೋ, ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ನಿಜವಾಗಿಯೂ ಕೂಡ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆಯೇ ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ನಾವು ಪರಿಶೀಲನೆ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ, 06 ಜುಲೈ 2024 ರಂದು ‘ಡಿಸಿಪಿ ಸೆಂಟ್ರಲ್ ದೆಹಲಿ’ X ಖಾತೆಯಲ್ಲಿ ಅಪ್ಲೋಡ್ ಮಾಡಲಾದ ಫೋಟೋವೊಂದು ಕಂಡು ಬಂದಿದ್ದು, ಇದು ವೈರಲ್ ಫೋಟೋಗೆ ಸಂಪೂರ್ಣವಾಗಿ ಹೋಲಿಕೆಯಾಗುತ್ತಿತ್ತು. ಈ ಎಕ್ಸ್ ಖಾತೆಯ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ಪೋಟೋದಲ್ಲಿನ ವ್ಯಕ್ತಿ ಮೊಹಮ್ಮದ್ ಕಾಸಿಮ್ ಎಂದು ತಿಳಿದು ಬಂದಿದೆ.
Mohd Kasim, a proclaimed offender evading trial in a snatching case, has been apprehended by the diligent efforts of team of PS Hauz Qazi staff. This arrest, based on local intelligence and surveillance, highlights the ongoing commitment to justice and… pic.twitter.com/IkorIelLmW
— DCP Central Delhi (@DCPCentralDelhi) July 6, 2024
ಈ ಕುರಿತು ಇನ್ನಷ್ಟು ಮಾಹಿತಿನ್ನು ಪಡೆಯಲು ಕೆಲವೊಂದು ಕೀ ವರ್ಡ್ಸ್ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ISD ಕ್ರೈಮ್ 24×7 ಮತ್ತು ಕಾಪ್ ನ್ಯೂಸ್ ಎಂಬ ಎರಡು ಯುಟ್ಯುಬ್ ಚಾನಲ್ಗಳಲ್ಲಿ 05 ಜುಲೈ 2024 ರಂದು ವೈರಲ್ ಫೋಟೋಗೆ ಸಂಬಂಧಿಸಿದ ವಿಡಿಯೋಗಳು ಪತ್ತೆಯಾಗಿವೆ. ಈ ಯುಟ್ಯುಬ್ ಚಾನಲ್ಗಳ ವರದಿಯ ಪ್ರಕಾರ ಆರೋಪಿ ಮೊಹಮ್ಮದ್ ಕಾಸಿಂ 2018 ರಿಂದ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 02 ಜುಲೈ 2024 ರಂದು, ಹೌಜ್ ಖಾಜಿ ಪೊಲೀಸ್ ಠಾಣೆಯ ತಂಡವು ಕಾಸಿಂನನ್ನು ದೆಹಲಿಯಲ್ಲಿ ಆರೋಪಿಯ ನಿವಾಸದಿಂದಲೇ ಆತನನ್ನು ಬಂಧಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ವೈರಲ್ ಫೋಟೋ ಸ್ಮೃತಿ ಸಿಂಗ್ ಅವರಿಗೆ ಅಶ್ಲೀಲ ಕಮೆಂಟ್ ಮಾಡಿದ ವ್ಯಕ್ತಿಯದ್ದಲ್ಲ ಎಂಬುದು ತಿಳಿದು ಬಂದಿದೆ.
ಸ್ಮೃತಿ ಸಿಂಗ್ ಯಾರು? ಏನಿದು ಪ್ರಕರಣ?
ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್. ಇವರು ತಮ್ಮ ಪತಿಗೆ ಮರಣೋತ್ತರವಾಗಿ ಬಂದ ಕೀರ್ತಿಚಕ್ರ ಪ್ರಶಸ್ತಿಯನ್ನು ಪಡೆಯಲು ರಾಷ್ಟ್ರಪತಿ ಭವನಕ್ಕೆ ಬಂದಿದ್ದರು. ತಮ್ಮ ಪತಿಯ ಹೆಸರನ್ನು ಘೋಷಿಸುತ್ತಿದ್ದಂತೆ ಪ್ರಶಸ್ತಿ ಸ್ವೀಕರಿಸಲು ಬಂದ ಸ್ಮೃತಿ ಸಿಂಗ್ ಭಾವುಕರಾಗಿ ನಿಂತಿದ್ದರು. ಈ ವೇಳೆ ಇವರ ಫೋಟೋವನ್ನು ತೆಗೆದು ಸಾಕಷ್ಟು ಸಾಮಾಜಿಕ ಜಾಲತಾಣದ ಬಳಕೆದಾರರು ಸ್ಮೃತಿ ಸಿಂಗ್ ಅವರ ಬಗ್ಗೆ ಕರುಣೆ ವ್ಯಕ್ತ ಪಡಿಸಿ, ಅವರ ಪತಿ ದಿವಂಗತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತ್ಯಾಗ ಬಲಿದಾನದ ಬಗ್ಗೆ ಹಮ್ಮೆಯ ಮಾತುಗಳನ್ನು ಆಡಿದರು.
ಆದರೆ ಹೀಗೆ ಈ ಫೋಟೋವನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದ ಬಳಕೆ ದಾರರ ಪೋಸ್ಟ್ಗೆ ಅಹ್ಮದ್ ಕೆ ಎಂಬ ಪ್ರೊಫೈಲ್ ಹೊಂದಿದ್ದ ದುರುಳನೊಬ್ಬ ಅಶ್ಲೀಲವಾಗಿ ಕಮೆಂಟ್ವೊಂದನ್ನು ಮಾಡಿದ್ದ, ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುಕೃತ್ಯ ಎಸಗಿದವನನ್ನು ಬಂಧಿಸುವಂತೆ ಆಗ್ರಹಗಳು ಹೆಚ್ಚಾಗಿದ್ದವು.
ಇನ್ನು ಸ್ಮೃತಿ ಸಿಂಗ್ ಅವರ ಫೋಟೋದ ಮೇಲೆ ‘ಅಹ್ಮದ್ ಕೆ’ ಎಂಬ ಪ್ರೊಫೈಲ್ನಿಂದ ಮಾಡಿದ ಅವಹೇಳನಕಾರಿ ಕಾಮೆಂಟ್ ಬಗ್ಗೆ ತಿಳಿದ ನಂತರ, ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ಶೀಘ್ರ ಕ್ರಮಕ್ಕೆ ವಿನಂತಿಸಿತ್ತು. ಕಿಡಿಗೇಡಿಯ ವಿರುದ್ಧ ಎಫ್ಐಆರ್ ದಾಖಲಿಸಿ ಅಪರಾಧಿಯನ್ನು ಬಂಧಿಸುವಂತೆ ಕೋರಿತ್ತು. ಆಯೋಗವು ಈ ವಿಷಯದ ಬಗ್ಗೆ ನ್ಯಾಯಯುತ ಮತ್ತು ಸಮಯೋಚಿತ ತನಿಖೆಗೆ ಒತ್ತಾಯಿಸಿದ್ದು, ಮೂರು ದಿನಗಳಲ್ಲಿ ವಿವರವಾದ ಕ್ರಮ ತೆಗೆದುಕೊಂಡ ವರದಿ ಸಲ್ಲಿಸುವಂತೆ ಕೋರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿ ಇರುವುದರಿಂದ ಯಾವುದೇ ಅಧಿಕೃತ ಮಾಹಿತಿಯನ್ನು ಪೊಲೀಸರು ನೀಡಿಲ್ಲ.
National Commission for Women (NCW) has identified a lewd and derogatory comment made by Ahmad K. from Delhi on a photo of a Kirt Chakra Captain Anshuman Singh's widow. This act violates Section 79 of the Bharatiya Nyaya Sanhita, 2023, and Section 67 of the Information Technology… pic.twitter.com/h2zvqfKGgy
— NCW (@NCWIndia) July 8, 2024
ಒಟ್ಟಾರೆಯಾಗಿ ಹೇಳುವುದಾದರೆ, ಸ್ಮೃತಿ ಸಿಂಗ್ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸಂಬಂಧವಿಲ್ಲದ ಬೇರೋಂದು ಪ್ರಕರಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಹಾಗಾಗಿ ಇಂತಹ ಸುಳ್ಳು ಮಾಹಿತಿಯುಳ್ಳ ಫೋಟೋಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ಖ್ಯಾತ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.