“ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ರಷ್ಯಾಗೆ ಭೇಟಿ ನೀಡಿದ ಸಮಯದಲ್ಲಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಚೀನಾದ ಅಧ್ಯಕ್ಷರನ್ನು ಆತ್ಮೀಯವಾಗಿ ಬರ ಮಾಡಿಕೊಂಡಿದ್ದಾರೆ. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ರಷ್ಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್ ಅವರು ಸ್ವಾಗತಿಸಲಿಲ್ಲ. ಇದು ರಷ್ಯಾ ಭಾರತವನ್ನು ನಡೆಸಿಕೊಳ್ಳುವ ರೀತಿ” ಎಂದು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಈ ಪೋಸ್ಟ್ ನೋಡಿದ ಹಲವರು ಇದು ನಿಜವಿರಬಹುದು ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ವಿಪರ್ಯಾಸ ಎಂದರೆ ಇದೇ ಪೋಸ್ಟ್ ಅನ್ನು ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಕೂಡ ಹಂಚಿಕೊಂಡಿದ್ದು “ಮೋದಿ ಅವರನ್ನು ಸ್ವಾಗತಿಸಲು ಪುಟಿನ್ ವಿಮಾನ ನಿಲ್ದಾಣಕ್ಕೆ ಬಂದಿಲ್ಲ, ಪುಟಿನ್ ಕ್ಸಿ ಅವರನ್ನು ಸ್ವಾಗತಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ನಿಜಕ್ಕೂ ಪುಟಿನ್ ಅವರು ಚೀನಾ ಅಧ್ಯಕ್ಷರನ್ನು ಸ್ವಾಗತಿಸಿ, ಭಾರತದ ಪ್ರಧಾನಿಯನ್ನು ಸ್ವಾಗತಿಸದೆ ಅವಮಾನಿಸಿದ್ರಾ? ಎಂಬುದರ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ಫೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು ಈ ವೇಳೆ ನಮಗೆ 8 ಜುಲೈ 2024 ರಂದು ಟೈಮ್ಸ್ ಆಪ್ ಇಂಡಿಯಾದಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದೆ.
ಈ ವರದಿಯಲ್ಲಿ ಮಾಸ್ಕೋಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಂಟುರೊವ್ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು ಎಂದು ಉಲ್ಲೇಖಿಸಲಾಗಿದೆ, ಇದರ ಜೊತೆಗೆ ಪ್ರಧಾನಿ ಮೋದಿ ಅವರಿಗೆ 2019ರಲ್ಲಿ ಘೋಷಿಸಲಾದ ರಷ್ಯಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ “ದಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ಟಲ್” ಅನ್ನು ಪ್ರಧಾನಿ ಮೋದಿ ಅವರಿಗೆ ನೀಡಿರುವ ಕುರಿತು ವರದಿಗಳು ಕೂಡ ಕಂಡು ಬಂದಿವೆ.
ಇನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಎಕ್ಸ್ ಹ್ಯಾಂಡಲ್ ಕೂಡ ಪ್ರಧಾನಿ ಮೋದಿಯವರ ಭೇಟಿಯ ದೃಶ್ಯಗಳನ್ನು ಹಂಚಿಕೊಂಡಿದೆ. ಇದರ ಶೀರ್ಷಿಕೆಯಲ್ಲಿ “ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾದ 1 ನೇ ಉಪ ಪ್ರಧಾನ ಮಂತ್ರಿ (1 ನೇ ಡಿಪಿಎಂ) ಶ್ರೀ ಡೆನಿಸ್ ಮಂಟುರೊವ್ ಅವರು ಬರಮಾಡಿಕೊಂಡರು. ಶ್ರೀ ಮಂಟುರೊವ್ ಅವರು ರಷ್ಯಾಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷರನ್ನು ಸ್ವಾಗತಿಸಿದ ಉಪ ಪ್ರಧಾನ ಮಂತ್ರಿಗಿಂತ ಹಿರಿಯರು…” ಎಂಬುದನ್ನು ಉಲ್ಲೇಖಿಸಿದೆ.
PM @narendramodi landed in Moscow, Russia for the 22nd India-Russia Annual Summit.
PM Narendra Modi was warmly received by First Deputy PM Denis Manturov of Russia at the airport and was accorded a ceremonial welcome upon his arrival.#PMModiInRussia #PMModiRussiaVisit… pic.twitter.com/nV7znla3YB
— Ministry of Information and Broadcasting (@MIB_India) July 8, 2024
ಚೀನಾದ ಸುದ್ದಿ ಸಂಸ್ಥೆಯಾದ ಕ್ಸಿನ್‌ಹುವಾದಲ್ಲಿ ಪ್ರಕಟವಾದ ವರದಿಯ ಪ್ರಕಾರ , ಚೀನಾದ ಅಧ್ಯಕ್ಷರು ಮಾರ್ಚ್ 2023 ರಲ್ಲಿ ರಷ್ಯಾಗೆ ಭೇಟಿ ನೀಡಿದ್ದರು. ಅಧ್ಯಕ್ಷ ಕ್ಸಿ ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ರಷ್ಯಾದ ಉಪ ಪ್ರಧಾನಿ ಡಿಮಿಟ್ರಿ ಚೆರ್ನಿಶೆಂಕೊ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ರಷ್ಯಾ ಅಧ್ಯಕ್ಷ ಪುಟಿನ್ ಅವರು ರಷ್ಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಭಾರತದ ಪ್ರಧಾನಿ ಹಾಗೂ ರಷ್ಯಾದ ಅಧ್ಯಕ್ಷ ಇಬ್ಬರನ್ನೂ ಸ್ವಾಗತಿಸಿಲ್ಲ ಎಂಬುದು ಖಚಿತವಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check: ಸೋನಿಯಾ ಗಾಂಧಿಯವರ AI ರಚಿತ ಪೋಟೋವನ್ನು ನಿಜವೆಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ