” ಈ ವಿಡಿಯೋ ನೋಡಿ ಈಕೆ ಯಾರು ಎಂದು ತಿಳಿಯಿತೆ.? ಈಕೆ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಆ ವಿಡಿಯೋವಿನ ಒಂದು ಭಾಗದಲ್ಲಿ ಸ್ಮೃತಿ ಸಿಂಗ್ ರಾಷ್ಟ್ರಪತಿಗಳಿಂದ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದನ್ನು ನೋಡಬಹುದಾಗಿದ್ದು, ಮತ್ತೊಂದು ಭಾಗದಲ್ಲಿ, ಮಹಿಳೆಯೊಬ್ಬರು ವಿಡಿಯೋಗೆ ಪೋಸ್ ನೀಡುವುದನ್ನು ನೋಡಬಹುದಾಗಿದೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಇಬ್ಬರೂ ಕೂಡ ಒಬ್ಬರೆ ಅವರು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್, ಒಂದು ಕಡೆ ಶೋಕಭರಿತವಾಗಿದ್ದು, ಮತ್ತೊಮ್ಮೆ ಸಂತೋಷದಿಂದ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ಕೆಲವರು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ವಿಡಿಯೋವನ್ನು ಹಂಚಿಕೊಂಡು ಸ್ಮೃತಿ ಸಿಂಗ್ ವಿರುದ್ಧ ಕ್ಯಾಪ್ಟನ್ ಸಿಂಗ್ ಅವರ ಪೋಷಕರು ಮಾಡಿದ್ದ ಆರೋಪಕ್ಕೆ ಹೋಲಿಕೆ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
https://www.youtube.com/watch?v=TNwIWJndJos
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ವಿಡಿಯೋಗಳನ್ನು ಹೊಂದಿರುವ ಖಾತೆಯೊಂದು ಪತ್ತೆಯಾಗಿದೆ. ಆ ಖಾತೆಯ ಬಳಕೆದಾರರ ಹೆಸರು ರೇಷ್ಮಾ ಸೆಬಾಸ್ಟಿಯನ್ ಎಂದು ಕಂಡು ಬಂದಿದೆ.
View this post on Instagram
ಇನ್ನು ವೈರಲ್ ವಿಡಿಯೋವನ್ನು 24 ಏಪ್ರಿಲ್ 2024 ರಂದು ಈಕೆಯ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಕೆಯ ಕೆಲವೊಂದು ವಿಡಿಯೋಗಳಲ್ಲಿನ ಕೇಶ ವಿನ್ಯಾಸ ಮತ್ತು ಮುಖ ಚಹರೆ ಕೊಂಚ ಸ್ಮೃತಿ ಸಿಂಗ್ ಅವರಿಗೆ ಹೋಲಿಕೆಯಾಗುತ್ತಿದೆ. ಆದರೆ ಈಕೆ ಸ್ಮೃತಿ ಸಿಂಗ್ ಅಲ್ಲ ಎಂಬುದು ಸಾಬೀತಾಗಿದೆ. 14 ನವೆಂಬರ್ 2022 ರಲ್ಲಿ ಟೆಡ್‌ಎಕ್ಸ್‌ನ ಕಾರ್ಯಕ್ರಮವೊಂದರ ಭಾಷಣದಲ್ಲಿ ಈಕೆ, “ಇಲ್ಲಿ ಹಲವರಿಗೆ ನನ್ನ ಪರಿಚಯವಿರಬಹುದು, ಕೆಲವರಿಗೆ ನನ್ನ ಪರಿಚಯವಿರುವುದಿಲ್ಲ. ನಾನು ರೇಷ್ಟಾ ಸೆಬಾಸ್ಟಿಯನ್, ಇಂಜಿನಿಯರ್, ಮಾಡೆಲ್, ಎರಡು ಮಕ್ಕಳ ತಾಯಿ, ಯಾಕೆ ಅಂತ ಗೊತ್ತಿಲ್ಲ ಕೆಲವರು ನನ್ನನ್ನು ಪ್ರಭಾವಿ ಅಂತಲೂ ಕರೆಯುತ್ತಾರೆ” ಎಂದು ಹೇಳಿದ್ದಾರೆ. ಈ ವಿಡಿಯೋ ಮೂಲಕ ಇವರ ಪೂರ್ಣ ಮಾಹಿತಿ ಲಭ್ಯವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ರೇಷ್ಮಾ ಸೆಬಾಸ್ಟಿಯನ್ ಅವರ ವಿಡಿಯೋವನ್ನು ಹಂಚಿಕೊಂಡು ಸಾಕಷ್ಟು ಮಂದಿ ಇವರೇ ಸ್ಮೃತಿ ಸಿಂಗ್ ಎಂದು ಹಂಚಿಕೊಳ್ಳುತ್ತಿದ್ದಂತೆ, ಹಲವರು ರೇಷ್ಮಾ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಭೇಟಿ ನೀಡಿದ್ದಾರೆ. ಈ ಕುರಿತು ಅವರ ಗಮನಕ್ಕೆ ಬರುತ್ತಿದ್ದಂತೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ” ಇದು ಸ್ಮೃತಿ ಸಿಂಗ್ (ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ) ಅವರ ಖಾತೆಯಲ್ಲ, ಮೊದಲು ಬಯೋವನ್ನು ಓದಿ, ಸುಳ್ಳು ಸುದ್ದಿ ಹರಡುವುದನ್ನು ದಯವಿಟ್ಟು ತಡೆಯಿರಿ ಎಂದು ಪೋಸ್ಟ್ ಕೂಡ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರದ್ದು ಎಂಬುದು ಸುಳ್ಳು. ವೈರಲ್ ವಿಡಿಯೋ ರೇಷ್ಮಾ ಸೆಬಸ್ಟಿಯನ್ ಅವರದ್ದಾಗಿದೆ. ಹಾಗಾಗಿ ವೈರಲ್ ವಿಡಿಯೋದೊಂದಿಗೆ ಹಂಚಿಕೊಳ್ಳುತ್ತಿರುವ ಮಾಹಿತಿ ಮತ್ತು ಸುದ್ದಿಗಳು ಕೂಡ ಸಂಪೂರ್ಣವಾಗಿ ಸುಳ್ಳಾಗಿದೆ.
ಇದನ್ನೂ ಓದಿ : Fact Check: ಡೊನಾಲ್ಡ್ ಟ್ರಂಪ್ ಹತ್ಯೆಗೆ ಪ್ರಯತ್ನಿಸಿದ ಶೂಟರ್ ಎಂದು ಬೇರೊಬ್ಬ ವ್ಯಕ್ತಿಯ ಪೋಟೋ ವೈರಲ್