Fact Check | ನಿರ್ಮಲಾ ಸೀತಾರಾಮನ್‌ ಅವರು ಪ್ರತಿನಿತ್ಯ ತಮ್ಮ ಕಚೇರಿಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಎಂಬುದು ಸುಳ್ಳು

” ಈ ವಿಡಿಯೋ ನೋಡಿ ಭಾರತದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರತಿನಿತ್ಯ ತಮ್ಮ ಕಚೇರಿಗೆ ದೆಹಲಿಯ ಮೆಟ್ರೋದಲ್ಲಿ ಓಡಾಡುತ್ತಾರೆ. ಹಾಗೆಯೆ ಅವರು ಈ ದಿನ ದೆಹಲಿಯ ಮೆಟ್ರೋದಲ್ಲಿ ಓಡಾಡುವಾಗ ಈ ವಿಡಿಯೋವನ್ನು ಚಿತ್ರಿಸಲಾಗಿದೆ. ಇದು ಮೋದಿ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ” ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೆಹಲಿಯ ಮೆಟ್ರೋದಲ್ಲಿ ಪ್ರಯಾಣಿಸಿದ ವಿಡಿಯೋವೊಂದನ್ನು ಹಂಚಿಕೊಂಡು ಸಾಕಷ್ಟು ಜನ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಹೀಗೆ ಹಂಚಿಕೊಳ್ಳುತ್ತಿರುವ ವಿಡಿಯೋದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ನಿಜವೆಂದು ಕಂಡು ಬಂದಿದೆ. ಆದರೆ ಅವರು ಪ್ರತಿನಿತ್ಯ ತಮ್ಮ ಕಚೇರಿಗೆ ತೆರಳಲು ದೆಹಲಿ ಮೆಟ್ರೋ ಬಳಸುತ್ತಿದ್ದಾರೆ ಎಂಬುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ವೈರಲ್‌ ಆಗುತ್ತಿರುವ ವಿಡಿಯೋದ ಹಿನ್ನೆಲೆ ಹಾಗೂ ಹೇಳಿಕೆಗಳ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಗಿದೆ. ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ ನಮಗೆ 17 ಮೇ 2024ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಎಕ್ಸ್‌ ( ಟ್ವಿಟರ್)ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ವೊಂದು ಕಂಡು ಬಂದಿದ್ದು, ಅದರಲ್ಲಿ ವೈರಲ್‌ ವಿಡಿಯೋಗೆ ಹೋಲಿಕೆಯಾಗುವ ಹಲವು ದೃಷ್ಯಗಳು ಮತ್ತು ಫೋಟೋಗಳು ಕಂಡು ಬಂದಿವೆ.

ಈ ಬಗ್ಗೆ ಇನ್ನಷ್ಟು ಹುಡುಕಿದಾಗ ಮತ್ತೆ ಮೇ 17ರಂದು ಟೈಮ್ಸ್‌ ಆಫ್‌ ಇಂಡಿಯಾ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಆ ವರದಿಯಲ್ಲಿ “ಪೂರ್ವ ದೆಹಲಿ ಬಿಜೆಪಿ ಅಭ್ಯರ್ಥಿ ಹರ್ಷ್ ಮಲ್ಹೋತ್ರಾ ಪರ ಪ್ರಚಾರ ಮಾಡಲು ಸೀತಾರಾಮನ್ ಮಂಡಿ ಹೌಸ್‌ನಿಂದ ಮೆಟ್ರೋವನ್ನು ತಲುಪಿದರು. ಪ್ರಯಾಣದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು ಎಂದು ಬಿಜೆಪಿ ಪದಾಧಿಕಾರಿಗಳು ಹೇಳಿದ್ದಾರೆ. ಬಳಿಕ ಹಣಕಾಸು ಸಚಿವರು ಸಮೀಪದ ಕೋಚಿಂಗ್ ಸೆಂಟರ್‌ಗೆ ಭೇಟಿ ನೀಡಿದರು, ಅಲ್ಲಿ ಅವರು ಪ್ರಾಥಮಿಕವಾಗಿ ಉದ್ಯೋಗಾವಕಾಶಗಳು, ಆರ್ಥಿಕತೆಯ ಸ್ಥಿತಿ ಮತ್ತು ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರಗಳ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಾವು  ಸಂಬಂಧಿತ ಕೀವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲಿ ಹುಡುಕಾಟ ನಡೆಸಿದ್ದೇವೆ. ಈ ವೇಳೆ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಹರ್ಷ್ ಮಲ್ಹೋತ್ರಾ ಅವರು ತಮ್ಮ ಪರಿಶೀಲಿಸಿದ X ಹ್ಯಾಂಡಲ್‌ನಿಂದ ಮೇ 17, 2024 ರಂದು ಲಕ್ಷ್ಮಿ ನಗರ ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿ ಸಭೆಯನ್ನು ನಡೆಸಿದ್ದಾರೆ ಎಂಬುದು ಕಂಡುಬಂದಿದೆ. ಈ ವರ್ಷ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಗೆ ಮಲ್ಹೋತ್ರಾ ಅವರ ಪ್ರಚಾರದಲ್ಲಿ ಭಾಗಿಯಾಗಲು ಸೀತಾರಾಮನ್ ಅವರು ಮೆಟ್ರೋ ನಿಲ್ದಾಣಕ್ಕೆ ಬರಲಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಕಚೇರಿ ಕೆಲಸಕ್ಕಾಗಿ ಪ್ರತಿನಿತ್ಯ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ ಎಂಬುದು ಸುಳ್ಳು. ಈ ಕುರಿತು ಯಾವುದೇ ವಿಶ್ವಾಸರ್ಹ ವರದಿಗಳು ಇದುವರೆಗೂ ಕಂಡು ಬಂದಿಲ್ಲ, ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸುವುದು ಉತ್ತಮವಾಗಿದೆ.


ಇದನ್ನೂ ಓದಿ : Fact Check: ಜಿಎಸ್‌ಟಿ ಕುರಿತು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ಡೀಪ್‌ಪೇಕ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *