Fact Check | ಕೊಲ್ಹಾಪುರದಲ್ಲಿ ಕಾಂಗ್ರೆಸ್‌ ಸಂಸದ ಮುಸ್ಲಿಂ ಮಹಿಳೆಯ ಬಳಿ ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು

ಈ ಫೋಟೋ ನೋಡಿ “ಮಹಾರಾಷ್ಟ್ರದ ಕೊಲ್ಹಾಪುರದ ಕಾಂಗ್ರೆಸ್ ಸಂಸದ ಛತ್ರಪತಿ ಶಾಹು ಶಾಹಜಿ ಅವರು ತಮ್ಮ ಎರಡೂ ಕಿವಿಗಳನ್ನು ಹಿಡಿದು ಮುಸ್ಲಿಂ ಮಹಿಳೆಯ ಬಳಿ ಕ್ಷಮೆ ಕೇಳಿದ್ದಾರೆ. ಕಾಂಗ್ರೆಸಿಗರು ಎಂದಿಗೂ ಕೂಡ ಹೀಗೆ  ಹಿಂದೂಗಳ ಬಳಿ ಕ್ಷಮೆ ಕೇಳುವುದಿಲ್ಲ. ಆದರೆ ಬೇರೆ ಸಮುದಾಯದ ಬಳಿ ವೋಟಿಗಾಗಿ ಏನು ಬೇಕಾದರು ಮಾಡುತ್ತಾರೆ” ಎಂಬ ಬರಹಗಳೊಂದಿಗೆ ಕಾಂಗ್ರೆಸ್ ಸಂಸದ ಛತ್ರಪತಿ ಶಾಹು ಶಾಹಜಿ  ಅವರ ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಈ ಫೋಟೋ ನೋಡಿದ ಹಲವರು ಕಾಂಗ್ರೆಸ್‌ ಸಂಸದ ನಿಜಕ್ಕೂ ಕ್ಷಮೆ ಕೇಳಿದ್ದಾರೆ ಎಂದೇ ಭಾವಿಸಿದ್ದಾರೆ.”ವಿಶಾಲಗಡದಲ್ಲಿ ಅತಿಕ್ರಮಣ ವಿರೋಧಿ ಡ್ರೈವ್‌ಗಳಿಗಾಗಿ ಸಂಸದರು ಸ್ಥಳೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಕ್ಷಮೆಯಾಚಿಸುತ್ತಿದ್ದಾರೆ” ಎಂದು ಎಕ್ಸ್‌ ಖಾತೆಯ ಬಳಕೆದಾರರೊಬ್ಬರು ಬರೆದುಕೊಂಡು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿರುವ ರೀತಿಯಲ್ಲಿ ನಿಜಕ್ಕೂ ಕೂಡ ಕಾಂಗ್ರೆಸ್ ಸಂಸದ ಛತ್ರಪತಿ ಶಾಹು ಶಾಹಜಿ  ಅವರು ಮುಸಲ್ಮಾನ ಮಹಿಳೆಯ ಬಳಿ ಕ್ಷಮೆ ಕೇಳಿದ್ದಾರೆಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಫೊಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ಕೂಡ ನಡೆಸಿತು. ಈ ವೇಳೆ ನಮಗೆ ಆನಂದ್ ದಾಸ ಎಂಬ ಬಳಕೆದಾರರು ಹಂಚಿಕೊಂಡ X  ಪೋಸ್ಟ್‌ನಲ್ಲಿ ವೈರಲ್‌ ಪೊಸ್ಟ್‌ಗೆ ಸಂಬಂಧ ಪಟ್ಟಂತೆ ಮಾಹಿತಿ ನೀಡಿದ್ದು, ಅವರು ನೀಡಿದ ಮಾಹಿತಿಯ ಪ್ರಕಾರ ವೀಡಿಯೊದಲ್ಲಿ ಕಂಡುಬರುವ ಮಹಿಳೆಯರು ಕಿವಿಯೋಲೆಗಳ ಕಳ್ಳತನದ ಬಗ್ಗೆ ಕಾಂಗ್ರೆಸ್ ಸಂಸದರಿಗೆ ದೂರು ನೀಡಿದ್ದಾರೆ. ಈ ವೇಳೆ ಅವರು ಕಿವಿಯಿಂದ ಹೀಗೆ ಕದ್ದಿದ್ದಾನಾ? ಎಂದು ಮಹಿಳೆಯರಿಗೆ ತಮ್ಮ ಕಿವಿಯನ್ನು ಹಿಡಿಯುವ ರೀತಿ ಕೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 16 ಜುಲೈ 2024 ರಂದು ಮುಂಬೈ ತಕ್‌ ” ಶಾಹು ಛತ್ರಪತಿಯನ್ನು ಹೆಂಗಸರು ಸುತ್ತುವರಿದು, ವಿಶಾಲಗಡ, ಗಜಾಪುರ, ಕುರಿತು ಮಾಹಿತಿ ನೀಡಿದರು” ಎಂಬ ಶೀರ್ಷಿಕೆಯ ಅಡಿಯಲ್ಲಿ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಮಹಿಳೆಯರು ಕಳ್ಳರು ಹೇಗೆ ತಮ್ಮ ಆಭರಣಗಳನ್ನು ಅಪಹರಿಸಿದರು ಎಂಬುದನ್ನು ವಿವರಿಸಿರುವುದನ್ನು ಕಾಣಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ಕಾಂಗ್ರೆಸ್ ಸಂಸದ ಛತ್ರಪತಿ ಶಾಹು ಶಾಹಜಿ ಅವರು ಮುಸ್ಲಿಂ ಮಹಿಳೆಯರ ಬಳಿ ಕ್ಷಮೆ ಕೇಳಿದ್ದಾರೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಇಂತಹ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ ಹಾಗೂ ವೈರಲ್‌ ಸುದ್ದಿಗಳನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.


ಇದನ್ನೂ ಓದಿ : Fact Check | IPS ಅಧಿಕಾರಿ ಅನು ಬೆನಿವಾಲ್ ತಂದೆ ಕೂಡ IPS ಅಧಿಕಾರಿಯಾಗಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *