Fact Check | 2013 ರಲ್ಲಿ ಲಾಭ ಗಳಿಸಿದ್ದ BSNL 2023 ರಲ್ಲಿ ದೊಡ್ಡ ನಷ್ಟ ಅನುಭವಿಸಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( BSNL ) 2013 ರಲ್ಲಿ 10,183 ಕೋಟಿ ರೂಪಾಯಿಗಳ ಲಾಭವನ್ನು ವರದಿ ಮಾಡಿದೆ, ಆದರೆ 2023 ರಲ್ಲಿ 13,356 ಕೋಟಿ ರೂಪಾಯಿಗಳ ದೊಡ್ಡ ನಷ್ಟವನ್ನು ಅನುಭವಿಸಿದೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ವಿಡಿಯೋದಲ್ಲಿ 2023-24ರಲ್ಲಿ ಬಿಎಸ್‌ಎನ್‌ಎಲ್‌ ನಷ್ಟದ ಹಾದಿಯನ್ನು ಹಿಡಿಯುತ್ತಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಬಿಎಸ್‌ಎನ್‌ಎಲ್‌ ಸಿಮ್‌ ಖರೀದಿದಾರರಲ್ಲಿ ಸಂಸ್ಥೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಲಾಗುತ್ತಿದೆ.

ಇನ್ನು ಹಲವರು ಈ ವಿಡಿಯೋವನ್ನು ಹಂಚಿಕೊಂಡು ” ಈ ಕುಸಿತಕ್ಕೆ ಯಾರನ್ನು ಹೊಣೆ ಮಾಡುವುದು?” ಎಂದು ಪ್ರಶ್ನಿಸಿದ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದು,” 2013ರಲ್ಲಿ ಬಿಎಸ್‌ಎನ್‌ಎಲ್‌ನ ಲಾಭ 10183 ಕೋಟಿಯಾಗಿದ್ದರೆ, 2023ರಲ್ಲಿ ನಷ್ಟವು 13356 ಕೋಟಿಗೆ ಏರಿಕೆಯಾಗಿದೆ, ಸ್ನೇಹಿತರೇ, ಬಿಎಸ್‌ಎನ್‌ಎಲ್ ಅನ್ನು ಹಾಳು ಮಾಡಿದವರು ಯಾರು?” ಎಂದು ಪ್ರಶ್ನಾರ್ಥಕವಾಗಿ ಕೂಡ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.  ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಹೇಳಲಾದ ಅಂಕಿ ಅಂಶಗಳು ನಿಜವೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದಲ್ಲಿ ಹಂಚಿಕೊಳ್ಳಲಾದ ಕೆಲವೊಂದು ದತ್ತಾಂಶಗಳನ್ನು ಬಳಸಿಕೊಂಡು, ಕೀ ವರ್ಡ್‌ಗಳ ಮೂಲಕ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 2012-13 ರ ಹಣಕಾಸು ವರ್ಷದ ಟೆಲಿಕಾಂ ಕಂಪನಿಯ ವಾರ್ಷಿಕ ವರದಿ ಕಂಡು ಬಂದಿದೆ. ಇನ್ನು ಈ ವರದಿಯನ್ನು ಆಧಾರವಾಗಿ ಇರಿಸಿಕೊಂಡು ಹಲವರು ವೈರಲ್‌ ಪೋಸ್ಟ್‌ ಸುಳ್ಳು ಎಂದು ಕೂಡ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ.

ಆ ವರದಿಯ ಪ್ರಕಾರ BSNL ಕಂಪನಿಯು ತನ್ನ  2012-2013ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿರುವಂತೆ ಈ ಆರ್ಥಿಕ ವರ್ಷದಲ್ಲಿ ಕಂಪನಿಯು 7,884.44 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಹೆಚ್ಚುವರಿಯಾಗಿ, ಇದು EBIDTA ಕ್ಕಿಂತ ಮೊದಲು ಸುಮಾರು 915.36 ಕೋಟಿ ಲಾಭವನ್ನು ತೋರಿಸಿದೆ. 2013-14ರಲ್ಲಿ ಕಂಪನಿಯು 7,019.76 ಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿದೆ.ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಸೇವೆಗಳ ಆದಾಯದಲ್ಲಿ ಶೇಕಡಾ 1.94 ರಷ್ಟು ಹೆಚ್ಚಳವಾಗಿದೆ. ಆರ್ಥಿಕ ವರ್ಷದಲ್ಲಿ BSNL EBIDTA ಗಿಂತ ಮೊದಲು 690.44 ಕೋಟಿ ಲಾಭ ಗಳಿಸಿದೆ.

ಇನ್ನು 2022-23ರ BSNL ವಾರ್ಷಿಕ ವರದಿಯ ಪ್ರಕಾರ 8,161.56 ಕೋಟಿ ನಷ್ಟವನ್ನು ಅನುಭವಿಸಿದೆ. ಇದು ಹಿಂದಿನ ಅಂದರೆ 2021-2022ರ ವಾರ್ಷಿಕ ವರದಿ 6,981.62 ನಷ್ಟಕ್ಕಿಂತ ಹೆಚ್ಚಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ BSNL ವರದಿ ಮಾಡಿದ ಒಟ್ಟು ಆದಾಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ 8.64 ಪ್ರತಿಶತದಷ್ಟು ಹೆಚ್ಚಾಗಿದೆ.  BSNL 1,558.79 ಕೋಟಿಗೆ EBIDTA (Earnings Before Interest, Toss, Depreciation, and Amortization) ಧನಾತ್ಮಕವಾಗಿ ಉಳಿದಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ. ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದಾಗ ವೈರಲ್‌ ವಿಡಿಯೋದಲ್ಲಿ ಹೇಳಿರುವ ಎಲ್ಲಾ ದತ್ತಾಂಶಗಳು ಸುಳ್ಳಿನಿಂದ ಕೂಡಿದೆ. BSNL ಸಂಸ್ಥೆಯ ನಿಜವಾದ ಲಾಭ-ನಷ್ಟದ ಮಾಹಿತಿ ಈ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಆಸಕ್ತರು ಈ ವೆಬ್‌ಸೈಟನಲ್ಲೇ ಪರಿಶೀಲನೆ ನಡೆಸಬಹುದಾಗಿದೆ.


ಇದನ್ನೂ ಓದಿ : Fact Check: ಟೈಮ್ ಮ್ಯಾಗಜೀನ್ ಡೊನಾಲ್ಡ್ ಟ್ರಂಪ್ ಅವರನ್ನು ‘ಕಿವಿಯ ಮನುಷ್ಯ’ ಎಂದು ಕರೆದಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *