ಸಾಮಾಜಿಕ ಜಾಲತಾಣದಲ್ಲಿ ನಕಲಿ ಅಂಗವಿಕಲತೆ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಗ್ಗೆ ತರಬೇತಿ ಪಡೆದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧದ ಆರೋಪಗಳು ಹೆಚ್ಚಾಗುತ್ತಿವೆ. ಇದೇ ರೀತಿಯಲ್ಲಿ ” ಮಧ್ಯಪ್ರದೇಶ ಕೇಡರ್ನ 2022 ರ ಬ್ಯಾಚ್ ಐಪಿಎಸ್ ಅಧಿಕಾರಿ ಅನು ಬೇನಿವಾಲ್ ಅವರು ಐಪಿಎಸ್ ಅಧಿಕಾರಿಯ ಮಗಳಾಗಿದ್ದರೂ ಕೇಂದ್ರ ಸಾರ್ವಜನಿಕ ಸೇವೆಗಳಿಗೆ ಆಯ್ಕೆ ಮಾಡಲು EWS (ಆರ್ಥಿಕವಾಗಿ ದುರ್ಬಲ ವಿಭಾಗ) ಕೋಟಾವನ್ನು ಬಳಸಿದ್ದಾರೆ” ಎಂದು ಆರೋಪಿಸಲಾಗುತ್ತಿದೆ.
Wasn't EWS quota introduced in 2019 fir inke pitaji kese EWS quota use karke IPS ban gaye? https://t.co/cGsU7lSN8P
— 🌌 (@yedwise) July 16, 2024
ಇಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವ ಅಂಶ ಎಂದರೆ ಐಪಿಎಸ್ ಅಧಿಕಾರಿ ಅನು ಬೇನಿವಾಲ್ ಅವರು ಐಪಿಎಸ್ ಅಧಿಕಾರಿಯ ಮಗಳಾಗಿದ್ದಾರೆ ಎಂಬುದು. ಇದಕ್ಕೆ ಸಂಬಂಧ ಪಟ್ಟಂತೆ ಹಲವಾರು ಮಂದಿ ಪೊಲೀಸ್ ಅಧಿಕಾರಿಯೊಬ್ಬರ ಫೋಟೋವನ್ನು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವರೇ ಐಪಿಎಸ್ ಅಧಿಕಾರಿ ಅನು ಬೇನಿವಾಲ್ ಅವರ ತಂದೆ ಎಂದು ಹೇಳುತ್ತಿದ್ದಾರೆ. ಹೀಗೆ ಪೋಟೋ ಹಂಚಿಕೊಳ್ಳಲಾಗುತ್ತಿರುವ ವ್ಯಕ್ತಿ ನಿಜಕ್ಕೂ ಐಪಿಎಸ್ ಅಧಿಕಾರಿ ಅನು ಅವರ ತಂದೆಯೇ? ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಫೊಸ್ಟ್ಗಳ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್ಗೆ ಸಂಬಂಧ ಪಟ್ಟಂತೆ ಐಪಿಎಸ್ ಅಧಿಕಾರಿ ಅನು ಬೆನಿವಾಲ್ ಅವರ ಸಾಮಾಜಿಕ ಜಾಲತಾಣದ ವಿವಿಧ ಖಾತೆಗಳನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ 14 ಜುಲೈ 2024ರಂದು ಹಂಚಿಕೊಳ್ಳಲಾದ ಫೋಟೋವೊಂದು ಕಂಡು ಬಂದಿದೆ. ಅದರಲ್ಲಿ ಅವರು “ಮಮ್ಮಿ ಅಪ್ಪಾ, ನಿನ್ನನ್ನು ನನ್ನ ತಂದೆ ತಾಯಿಯಾಗಿ ಪಡೆದಿರುವುದು ನನ್ನ ಅದೃಷ್ಟ. ನಿಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗದಿದ್ದರೂ, ನನ್ನ ಕನಸನ್ನು ನನಸಾಗಿಸಲು ನೀವು ನನ್ನನ್ನು ಮುನ್ನಡೆಸಿದೀರಿ” ಎಂದು ಬರೆದುಕೊಂಡಿರುವುದು ಕಂಡು ಬಂದಿದೆ.
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಆಕೆಯ ತಂದೆಯ ಚಿತ್ರ ಮತ್ತು ಐಪಿಎಸ್ ಸಂಜಯ್ ಬೆನಿವಾಲ್ ಅವರ ಚಿತ್ರಗಳ ಹೋಲಿಕೆ ಮಾಡಿ ನೋಡಿದಾಗ ಈ ಇಬ್ಬರು ವ್ಯಕ್ತಿಗಳು ಬೇರೆ ಬೇರೆಯವರು ಎಂಬುದು ತಿಳಿದು ಬಂದಿದೆ. ಆದರೂ ಸಾಕಷ್ಟು ಮಂದಿ ಸಂಜಯ್ ಬೆನಿವಾಲ್ ಅವರು ಅನು ಬನಿವಾಲ ಅವರ ತಂದೆ ಎಂದೇ ಪೋಸ್ಟ್ ಮಾಡುತ್ತಿದ್ದಾರೆ. ಈ ಕುರಿತ ಹುಡುಕಾಟ ನಡೆಸಿದಾಗ IPS ಸಂಜಯ್ ಬೆನಿವಾಲ್ ತಿಹಾರ್ ಜೈಲಿನಲ್ಲಿ ಮಹಾನಿರ್ದೇಶಕ ಆಗಿದ್ದರು ಮತ್ತು ಈ ವರ್ಷದ ಆರಂಭದಲ್ಲಿ ಸೇವೆಯಿಂದ ನಿವೃತ್ತರಾದರು ಎಂಬುದು ತಿಳಿದು ಬಂದಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಗೂಗಲ್ನಲ್ಲಿ ವಿವಿಧ ಕೀ ವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ MP ಬ್ರೇಕಿಂಗ್ ನ್ಯೂಸ್ಗೆ ಅನು ಬೆನಿವಾಲ್ ಅವರು ನೀಡದ ಸಂದರ್ಶನದಲ್ಲಿ ” ಸಂಜಯ್ ಬನಿವಾಲ್ ಅವರು ನನ್ನ ತಂದೆ ಅಲ್ಲ. ಅವರು ನಮ್ಮದೇ ಊರಿನವರು ಅವರನ್ನು ನಮ್ಮ ಊರಿನಲ್ಲಿ ಎಲ್ಲರೂ ಚಿಕ್ಕಪ್ಪ ಎಂದು ಕರೆಯುತ್ತಾರೆ. ಅದೇ ಕಾರಣದಿಂದ ನಾನು ಅವರನ್ನು ಚಿಕ್ಕಪ್ಪ ಎಂದೇ ಕರೆಯುತ್ತೇನೆ. ಹಾಗಂತ ಅವರು ನನ್ನ ರಕ್ತ ಸಂಬಂಧಿ ಅಲ್ಲ. ಆದರೆ ಅವರು ನನಗೆ ಎಂದಿಗೂ ಆದರ್ಶ ಪ್ರಾಯರು” ಎಂದು ಹೇಳಿಕೆ ನೀಡಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅನು ಬೆನಿವಾಲ್ ಅವರ ತಂದೆ ಐಪಿಎಸ್ ಅಧಿಕಾರಿ ಎಂಬುದು ಸುಳ್ಳು. ಅವರ ತಂದೆ ರೈತರಾಗಿದ್ದು ಅವರಿಗೆ ಹಲವು ಆರೋಗ್ಯದ ಸಮಸ್ಯೆಗಳು ಕೂಡ ಇವೆ ಎಂಬುದು ತಿಳಿದು ಬಂದಿದೆ. ಹಾಗಾಗಿ ವೈರಲ್ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check | 2013 ರಲ್ಲಿ ಲಾಭ ಗಳಿಸಿದ್ದ BSNL 2023 ರಲ್ಲಿ ದೊಡ್ಡ ನಷ್ಟ ಅನುಭವಿಸಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.