ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದ ( ಯುಎಸ್ಎ ) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯ ಪ್ರಯತ್ನದ ನಂತರ , ಸಾಮಾಜಿಕ ಜಾಲತಾಣದ ಬಳಕೆದಾರರು ಶೂಟರ್ ಬಗ್ಗೆ ಚಿತ್ರಗಳು ಮತ್ತು ಹಲವು ಮಾಹಿತಿಯನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಇಂತಹ ಹಲವು ಮಾಹಿತಿಗಳಲ್ಲಿ ಸಾಕಷ್ಟು ಸುಳ್ಳು ಹಾಗೂ ಊಹಾಪೋಹದ ಮಾಹಿತಿಗಳನ್ನು ಕೂಡ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿದ್ದು. ಇದರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಎಂಬ ಗೊಂದಲ ಜನ ಸಮಾನ್ಯರಲ್ಲಿ ಮೂಡಿಸುತ್ತಿದೆ.
ಈಗ ಇದೇ ರೀತಿಯಾಗಿ ಕೈಯಲ್ಲಿ ಗನ್ ಹಿಡಿದು ನಿಂತಿರುವ ವ್ಯಕ್ತಿಯನ್ನು ತೋರಿಸುವ ಚಿತ್ರವನ್ನು ಹಂಚಿಕೊಂಡು ಈತ ಟ್ರಂಪ್ರನ್ನು ಕೊಲ್ಲಲು ಯತ್ನಿಸಿದ ಶೂಟರ್ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಳ್ಳುಲಾಗುತ್ತಿದೆ. ಈ ವೈರಲ್ ವ್ಯಕ್ತಿಯನ್ನು “ಸ್ಯಾಮ್ಸನ್ ಹೈಡ್” ಎಂದು ಗುರುತಿಸಲಾಗಿದೆ. ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋದ ಕೀ ಫ್ರೇಮ್ ಬಳಸಿ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ನಮಗೆ , ಡಿಸೆಂಬರ್ 2020 ರಿಂದಲೂ ಈ ಫೋಟೋ ವಿವಿಧ ಮೀಮ್ಸ್ ( ವ್ಯಂಗ್ಯ ಬರಹಗಳಿಗೆ ಬಳಕೆಯಾಗುವ ಚಿತ್ರ)ಗಳಿಗೆ ಬಳಕೆಯಾಗಿರುವುದು ಕಂಡು ಬಂದಿದೆ. ಇನ್ನು ಈ ಬಗ್ಗೆ 26 ಡಿಸೆಂಬರ್ 2020 ರಲ್ಲಿ ‘ಕಾನ್ಸ್ಪಿರಾಡರ್ ನಾರ್ಟೆನೊ‘ ಎಂಬ ಹೆಸರಿನ ಎಕ್ಸ್ ಬಳಕೆದಾರರು ಕೂಡ ಈ ಬಗ್ಗೆ ಪೋಸ್ಟ್ವೊಂದನ್ನು ಮಾಡಿರುವುದು ಕೂಡ ಕಂಡು ಬಂದಿದೆ.
PSA: the person behind the Nashville RV explosion is almost certainly not Sam Hyde. The name "Sam Hyde", accompanied by these photos of a blond man, gets circulated as a suspect by 4chan users after pretty much every major act of public violence.
cc: @ZellaQuixote pic.twitter.com/WIe8FL4WUi
— Conspirador Norteño (@conspirator0) December 26, 2020
ಇನ್ನು ಅಮೆರಿಕದ ವಿವಿಧ ಭಾಗಗಳಲ್ಲಿ ನಡೆದ ಗುಂಡಿನ ದಾಳಿಗೆ ಕೂಡ ಇದೇ ಫೋಟೋವನ್ನು ಬಳಸಿಕೊಳ್ಳಲಾಗಿತ್ತು. ಈ ಫೋಟೋದಲ್ಲಿರುವ ವ್ಯಕ್ತಿ ಹಾಸ್ಯ ನಟ ಸ್ಯಾಮ್ ಹೈಡ್ ಎಂಬುದು ತಿಳಿದು ಬಂದಿದೆ. ಈ ಹಿಂದೆ ಹೆಸ್ಟನ್, ಮಿನ್ನಿಯಾಪೋಲಿಸ್, ಸ್ಯಾನ್ ಬರ್ನಾರ್ಡಿನೊ ಮತ್ತು ಕಲಾಮಜೂ ದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕೂಡ ಇವರ ಹೆಸರಿನಲ್ಲಿ ಹಲವು ಮೀಮ್ಸ್ಗಳನ್ನು ಹಂಚಿಕೊಳ್ಳಲಾಗಿತ್ತು. ಇನ್ನು ಈ ಬಗ್ಗೆ 2019ರಲ್ಲಿ ತಮ್ಮ ಅಭಿಪ್ರಾಯವನ್ನು ಯುಟ್ಯುಬ್ ಚಾನಲ್ನಲ್ಲಿ ಸ್ಯಾಮ್ ಹೈಡ್ ತಿಳಿಸಿದ್ದಾರೆ. ಇನ್ನು ಟ್ರಂಪ್ ಅವರನ್ನು ಕೊಲ್ಲಲು ಯತ್ನಿಸಿದ ವ್ಯಕ್ತಿ ಪೆನ್ಸಿಲ್ವೇನಿಯಾದ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಅಮೆರಿಕದ ತನಿಖಾ ಸಂಸ್ಥೆ ಸ್ಪಷ್ಟ ಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತೆ ಟ್ರಂಪ್ ಅವರನ್ನು ಕೊಲ್ಲಲು ಯತ್ನಿಸಿದ ವ್ಯಕ್ತಿ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋ ಸ್ಯಾಮ್ ಹೈಡ್ ಅವರದ್ದಾಗಿದೆ. ಇವರು ಹಾಸ್ಯನಟರಾಗಿದ್ದು, ವೈರಲ್ ಫೋಟೋದಲ್ಲಿನ ಪ್ರತಿಪಾದನೆ ಸುಳ್ಳಾಗಿದೆ. ಹಾಗೂ ಟ್ರಂಪ್ ಅವರನ್ನು ಕೊಲ್ಲಲು ಯತ್ನಿಸಿದ ವ್ಯಕ್ತಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ತಿಳಿದು ಬಂದಿದೆ. ವೈರಲ್ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check: ರಸ್ತೆಯಲ್ಲಿ ನಮಾಜ್ ಮಾಡುತ್ತಿರುವ ವೈರಲ್ ವಿಡಿಯೋ ರಷ್ಯಾದ್ದೇ ಹೊರತು ಫ್ರಾನ್ಸ್ನದ್ದಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.