” ಮುಸ್ಲಿಂ ಹುಡುಗನೊಂದಿಗೆ ಸಂಬಂಧ ಹೊಂದಿದ್ದ ಕಾಜಲ್ ಎಂಬ ಹುಡುಗಿಯನ್ನು ಅಸ್ಸಾಂನಲ್ಲಿ ಏಳು ಮುಸ್ಲಿಂ ಹುಡುಗರು ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ. ಅತ್ಯಾಚಾರದ ನಂತರ ಆಕೆ ಪ್ರಜ್ಞೆ ಕಳೆದುಕೊಂಡಾಗ ಅವಳನ್ನು ಫ್ರೀಜರ್ನಲ್ಲಿ ಇರಿಸಲಾಯಿತು, ಅದು ಅವಳ ಸಾವಿಗೆ ಕಾರಣವಾಯಿತು. ಹುಡುಗರು ಪ್ರತಿದಿನ ಹುಡುಗಿಯ ದೇಹವನ್ನು ಫ್ರೀಜರ್ನಿಂದ ಹೊರತೆಗೆದು ಎಂಟು ದಿನಗಳ ಕಾಲ ಅತ್ಯಾಚಾರ ಮಾಡಿದರು ಮತ್ತು ನಂತರ ಅದನ್ನು ಫ್ರೀಜರ್ನಲ್ಲಿ ಮರು ಪ್ಯಾಕ್ ಮಾಡಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದಿಗೆ ಪೋಸ್ಟ್ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಈ ಫೋಟೋವೊಂದಿಗೆ ಟಿಪ್ಪಣಿ ನೋಡಿದ ಹಲವರು ಇದು ನಿಜವಾಗಿಯೂ ನಡೆದ ಘಟನೆ ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ಪೋಸ್ಟ್ ಕೋಮು ಆಯಾಮವನ್ನು ನೀಡಿರುವುದರಿಂದ, ಅನ್ಯ ಕೋಮಿನ ವಿರುದ್ಧ ಹಲವು ಮಂದಿ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಈ ಈ ಪೋಸ್ಟ್ ಸಾಕಷ್ಟು ವೈರಲ್ ಕೂಡ ಆಗಿದೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಹಾಗೂ ಟಿಪ್ಪಣಿಯ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಫೋಟೋ ಹಾಗೂ ಟಿಪ್ಪಣಿಯ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್ನ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಆದರೆ ಈ ರೀತಿಯ ಘಟನೆ ನಡೆದಿರುವ ಕುರಿತು ಯಾವುದೇ ರೀತಿಯ ವರದಿಗಳು ನಮಗೆ ಕಂಡು ಬಂದಿಲ್ಲ. ಒಂದು ವೇಳೆ ಇಂತಹ ಘಟನೆ ನಡೆದಿರುವುದು ನಿಜವೇ ಆಗಿದ್ದರೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು, ಆದರೆ ಅಂತಹ ವರದಿಗಳು ಕಂಡು ಬಂದಿಲ್ಲ.
ಈ ಹಿನ್ನೆಲೆಯಲ್ಲಿ ವೈರಲ್ ಫೋಟೋವಿನ ಕೀ ಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ನಲ್ಲಿ ಪರಿಶೀಲನೆಯನ್ನು ಕೂಡ ನಡೆಸಲಾಯಿತು. ಈ ವೇಳೆ ನಮಗೆ 2010 ರಲ್ಲಿ ‘ಡಾಕ್ಯುಮೆಂಟಿಂಗ್ ರಿಯಾಲಿಟಿ’ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದ್ದು. ಆ ವರದಿಯಲ್ಲಿನ ಅಂಶಕ್ಕೂ ವೈರಲ್ ಪೋಸ್ಟ್ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಈ ವರದಿಯ ಪ್ರಕಾರ ಬ್ರೆಜಿಲ್ನ ಗ್ರೇಟರ್ ಸಾವೊ ಪಾಲೊ ಪ್ರದೇಶದಲ್ಲಿ, ಒಸಾಸ್ಕೊದ 45 ವರ್ಷದ ವ್ಯಕ್ತಿ ಅವರ ಪತ್ನಿಯನ್ನು ಹತ್ಯೆ ಮಾಡಿ, ಆಕೆಯನ್ನು ಕೊಂದ ಬಳಿಕ ಶವವನ್ನು ಫ್ರೀಜರ್ನಲ್ಲಿ ಬಚ್ಚಿಟ್ಟಿದ್ದಾನೆ. ಈ ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2022ರಲ್ಲೂ ಕೂಡ ಇದೇ ಸುದ್ದಿ ವೈರಲ್ ಆಗಿತ್ತು, ಆಗ ಅಸ್ಸಾಂ ಪೊಲೀಸರು ಮ್ಮ ಅಧಿಕೃತ X (ಹಿಂದೆ ಟ್ವಿಟರ್) ಖಾತೆಯಲ್ಲಿ 08 ಡಿಸೆಂಬರ್ 2022 ರಂದು “ಈ ಫೋಟೋವನ್ನು ಮೂಲತಃ ಪೋರ್ಚುಗೀಸ್ ಬ್ಲಾಗ್ನಿಂದ 2010 ರಲ್ಲಿ ಪ್ರಕಟಿಸಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುಳ್ಳು ಪೋಸ್ಟ್ಗಳನ್ನು ಶೇರ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಮ್ಮ ಟ್ವೀಟ್ನಲ್ಲಿ ಎಚ್ಚರಿಸಿದ್ದಾರೆ ಅಸ್ಸಾಂ ಪೊಲೀಸರು ಈ ಟ್ವೀಟ್ ಕುರಿತು ಹಲವು ಮಾಧ್ಯಮಗಳು ಕೂಡ ಅಂದು ವರದಿಯನ್ನು ಮಾಡಿದ್ದವು.
An image from a Portuguese blog of 2010 is being shared with a completely false context on Social Media.
Appropriate action will be taken against those found sharing such messages.
Original source of image: https://t.co/XXRwBjiKve pic.twitter.com/r6dcGnIXAK
— Assam Police (@assampolice) December 7, 2022
ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ಮತ್ತು ಸಂಬಂಧವಿಲ್ಲದ ಫೋಟೋವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ. ಇಂತಹ ಸುಳ್ಳು ಸುದ್ದಿಗಳು ಶೇರ್ ಮಾಡುವುದು ಶಿಕ್ಷಾರ್ಹ ಅಪರಾಧ ಕೂಡ ಆಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.