Fact Check | ಚೀನಾ ಅಧ್ಯಕ್ಷ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ” ಈ ಫೋಟೋ ನೋಡಿ  ಬೀಜಿಂಗ್‌ನಲ್ಲಿ ಜುಲೈ 15 ರಿಂದ 18 ರವರೆಗೆ ನಡೆದ 20 ನೇ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಕೇಂದ್ರ ಸಮಿತಿಯ, ಮೂರನೇ ಪೂರ್ಣ ಪ್ರಮಾಣದ ಅಧಿವೇಶನದಲ್ಲಿ ಚೀನಾದ ಅಧ್ಯಕ್ಷರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ.” ಎಂಬ ಬರಹದೊಂದಿಗೆ ವ್ಯಾಪಕವಾಗಿ ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಹಲವು ಮಾಧ್ಯಮಗಳು ಕೂಡ ಚೀನಾದ ಅಧ್ಯಕ್ಷರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ ಎಂಬ ವರದಿ ಪ್ರಸಾರ ಮಾಡಿದ್ದರಿಂದ ಇದೇ ಫೋಟೋವನ್ನು ನಿಜವಾದ ಫೋಟೋವೆಂದು ಹಲವರು ನಂಬಿದ್ದಾರೆ.

ಈ ವೈರಲ್‌ ಫೋಟೋದಲ್ಲಿ ಕೂಡ ಚೀನಾ ಅಧ್ಯಕ್ಷರು ಬಿಸಿ ಪಾನಿಯ ( ಕಾಫಿ ಅಥವಾ ಟೀ) ಸೇವನೆಯ ನಂತರ ತಮ್ಮ ಮುಖದ ಚಹರೆಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಈ ಫೋಟೋದ ಜೊತಗೆ ಇನ್ನೂ ಕೆಲವು ಫೋಟೋಗಳಲ್ಲಿ ಅಲ್ಲಿನ ಸಿಬ್ಬಂಧಿಗಳು ಚೀನಾ ಅಧ್ಯಕ್ಷರ ನೆರವಿಗೆ ಬರುವುದನ್ನು ಕೂಡ ಕಾಣಬಹುದಾಗಿದೆ. ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಫೋಟೋ ಕುರಿತು ಸತ್ಯಾಸತ್ಯತೆಯನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿತು. ಈ ವೇಳೆ ನಮಗೆ  11 ಮಾರ್ಚ್‌ 2024ರಂದು AP ಸುದ್ದಿ ಸಂಸ್ಥೆ ಹಂಚಿಕೊಂಡ, ಫೋಟೋವೊಂದು ಕಂಡು ಬಂದಿದೆ. ಈ ಫೋಟೋವು ವೈರಲ್‌ ಫೋಟೋಗೆ ಸಂಪೂರ್ಣವಾಗಿ ಹೋಲಿಕೆಯಾಗುವುದು ಕೂಡ ಕಂಡು ಬಂದಿದೆ. ಇದರಲ್ಲಿ ಒಂದು ಕಪ್‌ ಚಹಾ ಕುಡಿದ ನಂತರ  ಕ್ಸಿ ಜಿನ್‌ಪಿಂಗ್‌ ಅವರ ಪ್ರತಿಕ್ರಿಯೆ ಎಂದು ಶೀರ್ಷಿಕೆಯನ್ನು ನೀಡಲಾಗಿರುವುದನ್ನು ನಾವು ಕಂಡು ಕೊಂಡಿದ್ದೇವೆ.

ಬಳಿಕ ಇದೇ ಶೀರ್ಷಿಕೆಯನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಇದೇ AP ಸುದ್ದಿ ಸಂಸ್ಥೆ ತನ್ನ ಯುಟ್ಯುಬ್‌ ಚಾನಲ್‌ನಲ್ಲಿ China’s congress ends with a show of unity behind Xi’s vision for national greatness ಎಂಬ ಶೀರ್ಷಿಕೆಯ ಅಡಿಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಕಂಡು ಬಂದಿದ್ದು. ಇದರಲ್ಲಿ ಕ್ಸಿ ಜಿನ್‌ಪಿಂಗ್‌ ಅವರು ಯಶಸ್ವಿಯಾಗಿ ಕಾರ್ಯಕ್ರಮ ಮುಗಿಸಿ ತೆರಳುವುದನ್ನು ಕಾಣಬಹುದಾಗಿದೆ. ಆದರೆ ಈ ವಿಡಿಯೋದಲ್ಲಿ ವೈರಲ್‌ ಫೋಟೋದೊಂದಿಗೆ ಹೇಳಲಾದಂತೆ ಚೀನಾದ ಅಧ್ಯಕ್ಷರು ಪಾರ್ಶ್ವವಾಯುಗೆ ಸಿಲುಕಿಕೊಂಡಿದ್ದು ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಫೋಟೋ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪಾರ್ಶ್ವವಾಯುಗೆ ತುತ್ತಾದಾಗ ತೆಗೆದದ್ದು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಾಗಿ ಇದೊಂದು ಸುಳ್ಳು ಮಾಹಿತಿಯಾಗಿದೆ. ಇಂತಹ ವೈರಲ್‌ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ


ಇದನ್ನೂ ಓದಿ : Fact Check: 1951ರಲ್ಲಿ ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ಶೇ.14ರಷ್ಟಿತ್ತು ಎಂದು ಸುಳ್ಳು ಹರಡಿದ ಹಿಮಂತ ಬಿಸ್ವಾ ಶರ್ಮಾ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *