Fact Check | ಅಮೆರಿಕ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆಸರಿದ ಬೈಡನ್‌ ಟೀಕಾಕಾರರನ್ನು ನಿಂದಿಸಿದ್ದಾರೆ ಎಂಬ ವಿಡಿಯೋ ಡೀಪ್‌ ಫೇಕ್‌

“2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಿಂದ ಬೈಡೆನ್‌ ಅವರು ಅಧಿಕೃತವಾಗಿ ಹೊರಬಿದ್ದ ನಂತರ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡೆನ್ ಅವರು ಟೀಕಾಕಾರರ ವಿರುದ್ಧ ಅಶ್ಲೀಲ ಭಾಷೆಯನ್ನು ಬಳಸಿ ಟೀಕೆ ಮಾಡಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಗಾದಿಯಲ್ಲಿರುವವರು ಈ ರೀತಿಯ ಕೊಳಕು ಭಾಷೆಯನ್ನು ಬಳಸಿ ಟೀಕೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅಮೆರಿಕದ ಜನರು ಡೆಮೊಕ್ರೆಟಿಕ್ಸ್‌ ಪಾರ್ಟಿಗೆ ಬುದ್ದಿ ಕಲಿಸಲಿದ್ದಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. 

ಈ ವಿಡಿಯೋದಲ್ಲಿ ಸ್ವತಃ ಜೋ ಬೈಡನ್‌ ಅವರೇ ಟೀಕೆ ಮಾಡುತ್ತಿರುವುದು ಕಂಡು ಬಂದಿದ್ದು, ಅವರ ಧ್ವನಿ ಕೂಡ ಸ್ಪಷ್ಟವಾಗಿದೆ. ಹೀಗಾಗಿ ಈ ವಿಡಿಯೋ ನೋಡಿದ ಬಹುತೇಕರು, ಅಮೆರಿಕದ ಅಧ್ಯಕ್ಷ ಅಶ್ಲೀಲ ಭಾಷೆಯನ್ನು ಬಳಸದ್ದಾರೆ. ಟೀಕಾಕಾರರ ವಿರುದ್ಧ ಮಾತನಾಡುವಾಗ ನಾಲಗೆ ಹರಿಬಿಟ್ಟಿದ್ದಾರೆ ಎಂದು ಹಂಚಿಕೊಳ್ಳಿತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಡಿಯೋದಲ್ಲಿ ಬೈಡನ್‌ ಅವರ ಧ್ವನಿ ಮತ್ತು ಅವರ ತುಟಿಯ ನಡುವೆ ಹೊಂದಿಕೆಯಾಗದಿರುವುದು ಕಂಡು ಬಂದಿದೆ. ಇದು ಹಲವು ಅನುಮಾನಗಳನ್ನು ಕೂಡ ಹುಟ್ಟು ಹಾಕಿತ್ತು ಈ ಹಿನ್ನೆಲೆಯಲ್ಲಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು.

ಈ ವೇಳೆ ನಮಗೆ ವೈಟ್‌ಹೌಸ್‌ನ ಅಧಿಕೃತ ಯೂಟ್ಯುಬ್‌ ಚಾನಲ್‌ ಆದ “ದ ವೈಟ್‌ ಹೌಸ್‌”ನಲ್ಲಿ 15 ಜುಲೈ 2024ರಂದು ಅಮೆರಿಕಾದ ಅಧ್ಯಕ್ಷರಾದ ಜೋ ಬೈಡೆನ್‌ ಅವರು ಅಮೆರಿಕವನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವೊಂದು ಕಂಡು ಬಂದಿದೆ. ಆ ವಿಡಿಯೋದಲ್ಲಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆ ಯತ್ನವನ್ನು ಖಂಡಿಸಿ ಮಾತನಾಡಿರುವುದು ಕಂಡು ಬಂದಿದೆ. ಈ ವಿಡಿಯೋಗೂ ವೈರಲ್‌ ವಿಡಿಯೋಗೂ ಸಾಕಷ್ಟು ಹೋಲಿಕೆ ಇರುವುದು ಕಂಡು ಬಂದಿದೆ. ಇನ್ನು ವೈರಲ್‌ ವಿಡಿಯೋದಲ್ಲಿ PBS ನ್ಯೂಸ್‌ ಎಂಬ ಲೋಗೋವೊಂದು ಕಂಡು ಬಂದಿದೆ.

ಈ ಲೋಗೋದ ಆಧಾರದ ಮೇಲೆ ಕೆಲವೊಂದು ಕೀ ವರ್ಡ್ಸ್‌ ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದಾಗ 22 ಜುಲೈ 2024 ರಂದು ಪಿಬಿಎಸ್‌ ಸುದ್ದಿ ಸಂಸ್ಥೆ ತನ್ನ ಅಧಿಕೃತ ಎಕ್ಸ್‌ ( ಹಿಂದಿನ ಟ್ವಿಟರ್‌) ಖಾತೆಯಲ್ಲಿ ಮಾಡಿದ್ದ ಪೋಸ್ಟ್‌ವೊಂದು ಕಂಡು ಬಂದಿದೆ. ಅದರಲ್ಲಿ ಅವರು “ನಮ್ಮ ಲೋಗೋವನ್ನು ಹೊಂದಿರುವ ಅಧ್ಯಕ್ಷ ಜೋ ಬೈಡನ್ ಅವರ ಡೀಪ್‌ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬೈಡೆನ್ ಈ ಹೇಳಿಕೆಯನ್ನು ನೀಡಿಲ್ಲ. PBS ನ್ಯೂಸ್ ಈ ವೀಡಿಯೊದ ಬಳಕೆಯನ್ನು ಅಧಿಕೃತ ಎಂದು ಹೇಳಿಲ್ಲ ಮತ್ತು ತಪ್ಪುದಾರಿಗೆಳೆಯುವ ಯಾವುದೇ ರೀತಿಯಲ್ಲಿ ಸುದ್ದಿ ವೀಡಿಯೊ ಅಥವಾ ಆಡಿಯೊವನ್ನು ಬದಲಾಯಿಸುವುದನ್ನು ನಾವು ಹಾಗೂ ಪ್ರೇಕ್ಷಕರು ಕ್ಷಮಿಸುವುದಿಲ್ಲ” ಎಂದು ಪಿಬಿಎಸ್ ನ್ಯೂಸ್ ಟ್ವೀಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಜೋ ಬೈಡನ್‌ ಹಿಂದೆ ಸರಿಯುತ್ತಿದ್ದಂತೆ ಅಮೆರಿಕವನ್ನು ಉದ್ದೇಶಿಸಿ ಮಾತನಾಡುವಾಗ ಟೀಕಾಕಾರರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂಬ ವಿಡಿಯೋ ಡೀಪ್‌ ಫೇಕ್‌ ಆಗಿದೆ. ಹಾಗಾಗಿ ಇಂತಹ ವಿಡಿಯೋವನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ :Fact Check | ಚೀನಾ ಅಧ್ಯಕ್ಷ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *