Fact Check | ಉಯ್ಘರ್‌ ಮುಸ್ಲಿಂ ವ್ಯಕ್ತಿಯ ಮೇಲೆ ಚೀನಾ ಸೈನಿಕನ ದರ್ಪ‌ ಎಂದು ಇಂಡೋನೇಷ್ಯಾ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ.. ಇದು ಚೀನಾದಲ್ಲಿನ ಉಯ್ಘರ್‌ಮುಸ್ಲಿಂ ಜನರ ಇಂದಿನ ಪರಿಸ್ಥಿತಿ. ಇಂದು ಚೀನಾದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಕುರಾನ್ ಹೊಂದಿದ್ದ ಕಾರಣಕ್ಕೆ ಅಲ್ಲಿನ ಸೈನಿಕರು ಆ ವ್ಯಕ್ತಿಯನ್ನು ಥಳಿಸಿದ್ದಾರೆ. ಒಬ್ಬ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯವನ್ನು ತಡೆದು ಅಲ್ಲಿನ ಮೂಲ ಧರ್ಮವನ್ನು ಮಾತ್ರ ಅನುಸರಿಸುವಂತೆ ಚೀನಾ ನೋಡಿಕೊಳ್ಳುತ್ತಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವು ಮಂದಿ ಈ ಘಟನೆ ಚೀನಾದಲ್ಲೇ ನಡೆದಿದೆ ಎಂದು ಭಾವಿಸಿದ್ದಾರೆ, ಹೀಗಾಗಿ ಸಾಕಷ್ಟು ಮಂದಿ  ತಮ್ಮ ವೈಯಕ್ತಿಕ ಸಾಮಾಜಿಕ‌‌ ಜಾಲತಾಣದ ವಿವಿಧ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ವೈರಲ್ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು‌ ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ‌ ನಡೆಸಲು‌ ಮುಂದಾಯಿತು.‌ ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ಫ್ರೆಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಈ ವಿಡಿಯೋವನ್ನು 2017 ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬ ಮಹಿತಿ ಲಭ್ಯವಾಯಿತು. ಇಲ್ಲಿಗೆ ಈ ವಿಡಿಯೋ 7 ವರ್ಷಗಳಷ್ಟು ಹಳೆಯದು ಎಂಬುದು ನಮಗೆ ಖಚಿತವಾಯಿತು.

ಇನ್ನು ಇದೇ ವಿಡಿಯೋವನ್ನು ಹಲವು ಯೂಟ್ಯೂಬ್ ಚಾನಲ್‌ಗಳು ಕೂಡ ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಅದರಲ್ಲಿ ಒಂದು ಯೂಟ್ಯೂಬ್ ಚಾನಲ್ “ಬೇಗಲ್ ಅನ್ನು TNI ಸೆರೆ ಹಿಡಿದಿದೆ” ಎಂಬರ್ಥದಲ್ಲಿ ಶೀರ್ಷಿಕೆಯನ್ನು ನೀಡಿದೆ. ಇದರ ಆಧಾರದ ಮೇಲೆ TNI ಎಂಬ ಅಕ್ಷರಗಳ ಆಧಾರದ ಮೇಲೆ ಕೀ ವರ್ಡ್ ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಇಂಡೋನೇಷ್ಯಾಯನ್ ನ್ಯಾಷನಲ್ ಆರ್ಮ್ಡ್‌ ಫೋರ್ಸ್ ಅನ್ನು Tentara Nasional Indonesia (TNI) ಎಂದು ಕರೆಯಲಾಗುತ್ತದೆ ಎಂದು ತಿಳಿದು ಬಂದಿದೆ.

ಅಲ್ಲಿಗೆ ಈ ವಿಡಿಯೋ ಚೀನಾದಲ್ಲ ಇಂಡೋನೇಷ್ಯಾಗೆ ಸಂಬಂಧ ಪಟ್ಟಿದ್ದು ಎಂಬುದು ಖಚಿತವಾಗಿದೆ. ಇನ್ನು ಆ ಅಧಿಕಾರಿಗಳು ಧರಿಸಿದ್ದ ಸಮವಸ್ತ್ರವನ್ನು ಗಮನಿಸಿದಾಗ ಅದು ಚೀನಾದ ಸೇನೆಯ ಸಮವಸ್ತ್ರಕ್ಕೆ ಹೋಲಿಕೆಯಾಗದಿರುವುದು ಹಾಗೂ ವಿಡಿಯೋದಲ್ಲಿ ಬಳಸಲಾದ ಭಾಷೆ ಇಂಡೋನೇಷ್ಯಾಗೆ ಹೋಲಿಕೆಯಾಗಿರುವುದನ್ನು ಗಮನಿಸದಾಗ‌, ಈ ವಿಡಿಯೋಗೂ ಚೀನಾಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಸಾಬಿತಾಗಿದೆ. ಅಲ್ಲದೆ, ಜನವರಿ 3, 2019 ರಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಹಿತಿ ಇಲಾಖೆ ಡೆಪ್ಯುಟಿ ಡೈರೆಕ್ಟರ್-ಜನರಲ್ ಲಿಜಿಯಾನ್ ಝಾವೋ ಅವರು ಎಕ್ಸ್‌ನಲ್ಲಿ  ಪೋಸ್ಟ್‌ (ಟ್ವೀಟ್) ಮಾಡಿದ್ದು, ವೀಡಿಯೊ ಚೀನಾದದಲ್ಲ ಎಂದು ಉಲ್ಲೇಖಿಸಿದ್ದಾರೆ

ಒಟ್ಟಾರೆಯಾಗಿ ಹೇಳುವುದಾದರೆ ಉಯ್ಘರ್‌ ಮುಸಲ್ಮಾನ ವ್ಯಕ್ತಿಗೆ‌‌ ಚೀನಾ ಸೇನೆ ಥಳಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ವಿಡಿಯೋ ಸುಳ್ಳು ಅಪಾದನೆಯೊಂದಿಗೆ ಕೂಡಿದೆ. ಈ ವೈರಲ್ ವಿಡಿಯೋ ಇಂಡೋನೇಷ್ಯಾಗೆ ಸಂಬಂಧಿಸಿದ್ದಾಗಿದ್ದು ಇದಕ್ಕೂ ಚೀನಾಗೂ ಯಾವುದೇ ರೀತಿಯ ಸಂಬಂಧವಿಲ್ಲ. ಹಾಗಾಗಿ ವೈರಲ್ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ..


ಇದನ್ನೂ ಓದಿ : Fact Check: ರಾಹುಲ್ ಗಾಂಧಿಯವರು ನಕಲಿ ಲೋಕೋ-ಪೈಲಟ್ ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *