“ಈ ವಿಡಿಯೋ ನೋಡಿ ಆಂಧ್ರಪ್ರದೇಶದ ಗುಡೂರಿನಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಂಧ್ರಪ್ರದೇಶದಲ್ಲಿ ಈಗ ಪೊಲೀಸರಿಗೂ ರಕ್ಷಣೆ ಇಲ್ಲ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡ ಇನ್ನೂ ಕೆಲವರು ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ಕೂಡ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
https://www.youtube.com/watch?v=B8uqcFeaPiI
ಇನ್ನು ವಿಡಿಯೋ ನೋಡಿದ ಹಲವರು ಪೊಲೀಸ್ ಕಾನ್ಸ್ಟೇಬಲ್ ಮೇಲೆ ನಿಜವಾಗಿಯೂ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರೇ ದಾಳಿ ಮಾಡಿದ್ದಾರೆ ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ಕೂಡ ಕಾನ್ಸ್‌ಟೇಬಲ್ ಒಬ್ಬರ ಮೇಲೆ ವ್ಯಕ್ತಿಯೊಬ್ಬ ದೊಣ್ಣೆಯಿಂದ ಹಲ್ಲೆ ಮಾಡಿರುವುದನ್ನು ನೋಡಬಹುದಾಗಿದೆ. ಆದರೆ ಆತ ಯಾರು ಎಂಬ ಸ್ಪಷ್ಟತೆ ವಿಡಿಯೋದಲ್ಲಿ ಕಂಡು ಬರುವುದಿಲ್ಲ. ಹೀಗಾಗಿ ವೈರಲ್ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕೀ ವರ್ಡ್ಸ್ ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 19 ಜುಲೈ 2024 ರಂದು ಟಿವಿ 9 ತೆಲುಗು ಸುದ್ದಿ ವಾಹಿನಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಆ ವರದಿಯ ಪ್ರಕಾರ ಮಾನಸಿಕ ಅಸ್ವಸ್ಥನೊಬ್ಬ, ಗುಡೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಕಾನ್‌ಸ್ಟೇಬಲ್ ಸ್ವಾಮಿ ದಾಸ್ ಹಲ್ಲೆಗೊಳಗಾದ ಪೊಲೀಸ್ ಎಂದು ತಿಳಿದು ಬಂದಿದೆ.
ಇದೇ ಘಟನೆಯ ಕುರಿತು ಡೆಕ್ಕನ್ ಕ್ರೋನಿಕಲ್ ಕೂಡ ವರದಿಯನ್ನು ಮಾಡಿದ್ದು, ಆ ವರದಿಯ ಪ್ರಕಾರ ದಾಳಿಕೋರ ಲಾಲ್ತು ಕಾಳಿಂದಿ ಪಶ್ಚಿಮ ಬಂಗಾಳದವರಾಗಿದ್ದು, ಸಮವಸ್ತ್ರ ಧರಿಸಿದ್ದ ಪೊಲೀಸರನ್ನು ನೋಡಿದ ಮೇಲೆ ಮಾನಸಿಕ ಅಸ್ವಸ್ತನಂತೆ ವರ್ತಿಸುತ್ತಾರೆ ಎಂದು ತಿಳಿಸಲಾಗಿದೆ. ಇನ್ನು ಹಲ್ಲೆಗೊಳಗಾದ . ಪೊಲೀಸ್ ಅಧಿಕಾರಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಗುಡೂರು ಏರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿ ಜಿಲ್ಲೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಆಂಧ್ರಪ್ರದೇಶದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು ಎಂಬುದು ಸುಳ್ಳು . ಈ ಘಟನೆಗೂ ವೈಎಸ್‌ಆರ್‌ಸಿಪಿ ಪಕ್ಷಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ಉಯ್ಘರ್ ಮುಸ್ಲಿಂ ವ್ಯಕ್ತಿಯ ಮೇಲೆ ಚೀನಾ ಸೈನಿಕನ ದರ್ಪ ಎಂದು ಇಂಡೋನೇಷ್ಯಾ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.