Fact Check | ಕಮಲಾ ಹ್ಯಾರಿಸ್‌ ಪೋಷಕರು ಎಂದು ಬೇರೆಯವರ ಫೋಟೋ ಹಂಚಿಕೆ

“ಜೋ ಬೈಡೆನ್ ಸ್ಪರ್ಧೆಯಿಂದ ಹಿಂದೆ ಸರಿಯುವುದರೊಂದಿಗೆ, ಕಮಲಾ ಹ್ಯಾರಿಸ್ ಈಗ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಪರಿಗಣಿಸಲ್ಪಡುತ್ತಿದ್ದಾರೆ. ಇದರ ನಡುವೆ ಕಮಲಾ ಹ್ಯಾರಿಸ್‌ ಅವರ ಕುರಿತು ದಿನಕ್ಕೊಂದು ಸುದ್ದಿಗಳು, ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲೂ ಇತ್ತೀಚೆಗೆ ಅಮೆರಿಕದಲ್ಲಿ ಕಮಲಾ ಹ್ಯಾರಿಸ್‌ ಅವರ ಮೂಲದ ಕುರಿತು ಕೆಲ ಸಾಮಾಜಿಕ ಜಾಲತಾಣದ ಬಳಕೆದಾರರು ಚರ್ಚೆಯನ್ನು ಆರಂಭಿಸಿದ್ದಾರೆ.

ಅದರಲ್ಲಿ ಪ್ರಮುಖವಾಗಿ,  ಕಮಲಾ ಹ್ಯಾರಿಸ್‌ ಅವರ ಪೋಷಕರ ವರ್ಣ ಮತ್ತು ಅವರ ಮೂಲದ ಕುರಿತು ಅಮೆರಿಕದ ನಾಗರಿಕರಲ್ಲಿ ಗೊಂದಲ ಮೂಡಿಸುವಂತಹ ಕೆಲವೊಂದು ಸುದ್ದಿಗಳನ್ನು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಅದರಂತೆ ಇತ್ತೀಚೆಗೆ ಕಮಲಾ ಹ್ಯಾರಿಸ್‌ ಅವರು ಭಾರತೀಯ ಮೂಲದಂತೆ ಕಂಡು ಬರುವ ಇಬ್ಬರೊಂದಿಗಿರುವ ಫೋಟೋವೊಂದು ವೈರಲ್‌ ಆಗುತ್ತಿದ್ದು, ಇವರೇ ಕಮಲಾ ಹ್ಯಾರಿಸ್‌ ಅವರ ತಂದೆ, ತಾಯಿ ಇವರು ಕಪ್ಪು ವರ್ಣಕ್ಕೆ  ಸೇರಿದವರಲ್ಲ ಎಂದು ಸಾಕಷ್ಟು ಜನ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳುತ್ತಿರುವ ಫೋಟೋದಲ್ಲಿರುವವರು ನಿಜಕ್ಕೂ ಕಮಲಾ ಹ್ಯಾರಿಸ್‌ ಅವರ ಪೋಷಕರೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಫೋಟೋ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಕಮಲಾ ಹ್ಯಾರಿಸ್‌ ಅವರ ಬಾಲ್ಯದ ವಿವರಗಳ ಕುರಿತು ವಾಷಿಂಗ್‌ಟನ್‌ ಪೋಸ್ಟ್‌ ಮಾಡಿದ್ದ ವರದಿಯೊಂದು ಕಂಡು ಬಂದಿದೆ.

ಈ ವರದಿಯನಲ್ಲಿ “ಕಮಲಾ ಹ್ಯಾರಿಸ್ 1964 ರಲ್ಲಿ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್‌ನಲ್ಲಿ ಜನಿಸಿದರು. ಆಕೆಯ ಪೋಷಕರು, ಭಾರತದ ಕ್ಯಾನ್ಸರ್ ಸಂಶೋಧಕರಾದ ಶ್ಯಾಮಲಾ ಗೋಪಾಲನ್ ಮತ್ತು ಜಮೈಕಾದ ಅರ್ಥಶಾಸ್ತ್ರಜ್ಞ ಡೊನಾಲ್ಡ್ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದರು  ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 23 ಜುಲೈ 2024 ರಂದು ಪೀಪಲ್‌ ಸದ್ದಿತಾಣ “Kamala Harris’ Parents: All About Her Mom Shyamala Gopalan and Dad Donald J. Harris” ಎಂಬ ಶೀರ್ಷಿಕೆಯಡಿಯಲ್ಲಿ ಕಮಲಾ ಹ್ಯಾರಿಸ್‌ ಅವರ ಪೋಷಕರು ಯಾರು ಎಂಬುದನ್ನು ವಿವರಿಸುವುದರ ಜೊತೆಗೆ ಕಮಲಾ ಹ್ಯಾರಿಸ್‌ ಅವರ ನಿಜವಾದ ಪೋಷಕರ ಫೋಟೋವನ್ನು ಕೂಡ ಪ್ರಕಟ ಮಾಡಿರುವುದನ್ನು ಕಂಡು ಕೊಂಡಿದ್ದೇವೆ. ಹಾಗಾಗಿ ವೈರಲ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವ್ಯಕ್ತಿಗಳು ಕಮಲಾ ಹ್ಯಾರಿಸ್‌ ಅವರ ಪೋಷಕರಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಫೋಟೋಗೂ ಕಮಲಾ ಹ್ಯಾರಿಸ್‌ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಜೊತೆಗೆ ಕಮಲಾ ಹ್ಯಾರಿಸ್‌ ಅವರ ತಾಯಿ 2009ರಲ್ಲಿ ತೀರಿಕೊಂಡಿರುವ ಕುರಿತು ಕೂಡ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ


ಇದನ್ನೂ ಓದಿ : Fact Check: ಮಣಿಪುರದಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯ ಮೇಲೆ ಹಿಂದೂಗಳು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *