ಖ್ಯಾತ ಕುಸ್ತಿಪಟು ದಲಿಪ್ ಸಿಂಗ್ ರಾಣಾ ಎಂದೂ ಕರೆಯಲ್ಪಡುವ ದಿ ಗ್ರೇಟ್ ಖಲಿ ಮುಸ್ಲಿಂ ಮಾರಾಟಗಾರರ ಗಾಡಿಯಿಂದ ಮಾವಿನ ಹಣ್ಣುಗಳನ್ನು ತಿನ್ನುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಂಗಡಿಗಳ ಮೇಲೆ ನಾಮಫಲಕಗಳನ್ನು ಕಡ್ಡಾಯಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರದ ವಿರುದ್ಧ ಖಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲವು ಪೋಸ್ಟ್ಗಳು ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ರಾಜಕೀಯದಲ್ಲಿ ಅಂಗಡಿಗಳ ಮೇಲೆ ನಾಮಫಲಕದ ವಿಚಾರವಾಗಿ ಬಹುದೊಡ್ಡ ರಾಜಕೀಯ ಸಮರವೇ ಆರಂಭವಾಗಿದೆ. ಈ ನಡುವೆ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲವು ಸುದ್ದಿಗಳು ವೈರಲ್ ಆಗುತ್ತಿದ್ದು, ಇದರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಎಂಬ ಅನುಮಾನ ಕಾಡುವುದಕ್ಕೆ ಆರಂಭವಾಗಿದೆ. ಈ ಮಧ್ಯೆ ಇದೀಗ ದ ಗ್ರೇಟ್ ಖಲಿ ಕೂಡ ಉತ್ತರ ಪ್ರದೇಶದ ಈ ಹೊಸ ಕಾನೂನಿಗೆ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ ಎಂಬ ಸುದ್ದಿಯೊಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ಬಗೆಗಿನ ಸತ್ಯಾಸತ್ಯತೆಯನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೊಣ.
ಫ್ಯಾಕ್ಟ್ಚೆಕ್
ಬಹಳ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ವಿರೋಧಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಹೀಗಾಗಿ ಈ ಬಗ್ಗೆ ಕನ್ನಡ ಫ್ಯಾಕ್ಟ್ಚೆಕ್ ತಂಡ ಸಂಪೂರ್ಣವಾಗಿ ಪರಿಶೀಲನೆಯನ್ನು ನಡೆಸಿದೆ. ಇದಕ್ಕಾಗಿ ಮೊದಲು ನಾವು ಈ ಬಗ್ಗೆ ಯಾವುದಾದರು ಸುದ್ದಿ ಪ್ರಕಟವಾಗಿದೆಯೇ ಎಂದು ಕಂಡುಕೊಳ್ಳಲು ಕೆಲವೊಂದು ಕೀ ವರ್ಡ್ಸ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಒಂದು ವೇಳೆ ಖಲಿ ಪ್ರತಿಭಟನೆ ನಡೆಸಿದ್ದು ನಿಜವೇ ಆಗಿದ್ದರೆ ಈ ಬಗ್ಗೆ ಹಲವು ವರದಿಗಳು ಕಂಡು ಬರಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಖಲಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ ವಿಡಿಯೋವೊಂದನ್ನು ಶೀರ್ಷಿಕೆಯಿಲ್ಲದೆ 11 ಜುಲೈ 2024 ರಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಹಾಗಾಗಿ ಈ ವಿಡಿಯೋ ಉತ್ತರ ಪ್ರದೇಶ ಸರ್ಕಾರದ ನಾಮಫಲಕ ಆದೇಶಕ್ಕೆ ಮುಂಚಿತವಾಗಿ ಹಂಚಿಕೊಂಡಿರುವುದು ಪತ್ತೆಯಾಗಿದೆ. ಅಸಲಿಗೆ 19 ಜುಲೈ 2024ರಂದು ಯೋಗಿ ಆದಿತ್ಯನಾಥ್ ಅವರು ಅಂಗಡಿಗಳಲ್ಲಿ ನಾಮಫಲಕ ಪ್ರದರ್ಶನದ ಆದೇಶವನ್ನು ಹೊರಡಿಸಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಸುದ್ದಿಗೆ ಹುರುಳಿಲ್ಲ ಎಂಬುದು ಸಾಬಿತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ದಿ ಗ್ರೇಟ್ ಖಲಿ ಮುಸ್ಲಿಂ ಮಾರಾಟಗಾರರ ಗಾಡಿಯಿಂದ ಮಾವಿನ ಹಣ್ಣುಗಳನ್ನು ತಿನ್ನುವ ವೀಡಿಯೊ ಯುಪಿ ಸರ್ಕಾರದ ನಾಮಫಲಕ ನಿರ್ದೇಶನ ವಿರುದ್ಧ ಎಂಬುದು ಸುಳ್ಳು. 2022ರಲ್ಲಿ ದಿ ಗ್ರೇಟ್ ಖಲಿ ಅವರು ಬಿಜೆಪಿಗೆ ಸೇರಿದ್ದರು, ಹಾಗಾಗಿ ಯುಪಿ ಸರ್ಕಾರದ ಹೊಸ ಆದೇಶವನ್ನು ಅವರು ವಿರೋಧಿಸಿ ಪ್ರತಿಭಟಿಸುವ ಸಾಧ್ಯತೆ ಕೂಡ ಕಡಿಮೆಯೇ ಇದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸುವುದು ಉತ್ತಮ.
ಇದನ್ನೂ ಓದಿ : Fact Check: ದೆಹಲಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಯಾವುದೇ ಪೂಜಾ ಸ್ಥಳಗಳಿಗೆ ವಿದ್ಯುತ್ ಶುಲ್ಕ ಹೆಚ್ಚಿಸಿಲ್ಲ
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ