“ಭಾರತದಲ್ಲಿ ಮುಸ್ಲಿಮರು ಶಾಸ್ತ್ರಾಸ್ತ್ರಗಳನ್ನು ಹೇಗೆ ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಇದೇ ಕಾರಣಕ್ಕಾಗಿ ಭಾರತದಲ್ಲಿ ಬುರ್ಖಾವನ್ನು ನಿಷೇಧಿಸಬೇಕು ಎಂದು ಹೇಳುವುದು. ಇನ್ನೂ ನೀವು ಎಷ್ಟು ದಿನಗಳ ಕಾಲ ಇವರನ್ನು ನಂಬುತ್ತೀರಿ?, ಈ ವಿಡಿಯೋದಲ್ಲಿರುವ ವ್ಯಕ್ತಿ ಬುರ್ಖಾವನ್ನು ಧರಿಸಿ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ವೈರಲ್ ಮಾಡಲಾಗುತ್ತಿದೆ.
https://twitter.com/Modified_Hindu9/status/1816174286194766261
ಈ ವಿಡಿಯೋದಲ್ಲಿ ಬುರ್ಖಾ ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಪರಿಶೀಲನೆ ನಡೆಸುವುದು, ಮತ್ತು ಆತನ ಬುರ್ಖಾದ ಒಳಗೆ ಕೆಲವೊಂದು ವಸ್ತುಗಳು ಅಸ್ಪಷ್ಟವಾದ ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋವನ್ನು ನೋಡಿದ ಹಲವಾರು ಮಂದಿ, ವೈರಲ್ ಪ್ರತಿಪಾದನೆಯನ್ನು ನಿಜವೆಂದು ನಂಬಿಕೊಂಡಿದ್ದಾರೆ ಮತ್ತು ಶೇರ್ ಮಾಡುತ್ತಿದ್ದಾರೆ. ಹಾಗಾಗಿ ವೈರಲ್ ವಿಡಿಯೋದ ಅಸಲಿಯತ್ತು ಏನು ಎಂಬುದರ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಜೊತೆಗಿನ ಪ್ರತಿಪಾದನೆಯ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕಿ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ಹುಡುಕಾಟವು 11 ಮಾರ್ಚ್ 2021 ರಂದು ಸ್ಮೈಲ್ ಟಿವಿ ಬಾಂಗ್ಲಾ ಅಪ್ಲೋಡ್ ಮಾಡಿದ ವಿಡಿಯೋ ಸುದ್ದಿ ವರದಿಯೊಂದು ಪತ್ತೆಯಾಗುವಂತೆ ಮಾಡಿತು. ಈ ವರದಿಯ ಪ್ರಕಾರ ಚಿತ್ತಗಾಂಗ್‌ನ ರೌಜಾನ್‌ನಲ್ಲಿ ಪೊಲೀಸರು ಗರ್ಭಿಣಿ ಮಹಿಳೆಯ ಸೋಗಿನಲ್ಲಿ ಮಾದಕ ದ್ರವ್ಯಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ ಎಂದು ಸುದ್ದಿಯನ್ನು ಬಿತ್ತರಿಸಲಾಗಿತ್ತು.
ಇನ್ನು ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ರೌಜಾನ್ ಪ್ರದೇಶ ಬಾಂಗ್ಲಾದೇಶದಲ್ಲಿದೆಯೇ ಹೊರತು ಭಾರತದಲ್ಲಿ ಅಲ್ಲ ಎಂಬುದು ಖಚಿತವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ಇದೇ ರೀತಿಯ ಹಲವು ವರದಿಗಳು ಬಾಂಗ್ಲಾದೇಶದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವುದು ಪತ್ತೆಯಾಗಿದೆ. ಮೂಲಗಳ ಪ್ರಕಾರ ಈ ಘಟನೆ 09 ಮಾರ್ಚ್ 2021 ರಂದು ನಡೆದಿದೆ.
ಇಬ್ಬರು ಮಾದಕವಸ್ತು ಕಳ್ಳಸಾಗಣೆದಾರರ ಬಗ್ಗೆ ರಹಸ್ಯ ಮಾಹಿತಿ ಪಡೆದ ರೌಜಾನ್ ಪೊಲೀಸರು ಚಿತ್ತಗಾಂಗ್-ರಂಗಮತಿ ರಸ್ತೆಯ ಜಲೀಲ್ ನಗರ ಪ್ರದೇಶದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ, ಸಾಗರ್ (20) ಮತ್ತು ಅಮೀನಾ ಬೇಗಂ (19) ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳು ಬುರ್ಖಾ ಧರಿಸಿ ಗರ್ಭಿಣಿ ಎಂಬ ನೆಪದಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದರು.ಇದಲ್ಲದೆ, ರೌಜಾನ್ ಪೊಲೀಸ್ ಠಾಣೆಯು ತಮ್ಮ ಫೇಸ್‌ಬುಕ್ ಪುಟದಲ್ಲಿ ‘ರೋಜನ್ ಟಿವಿ’ ಪ್ರಕಟಿಸಿದ ಸುದ್ದಿ ವರದಿಯನ್ನು ಸಹ ಹಂಚಿಕೊಂಡಿದೆ .
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಯ ವೀಡಿಯೊವನ್ನು ಮುಸ್ಲಿಮರು ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುವ ದೃಶ್ಯಗಳನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದೆ. ಹಾಗಾಗಿ ವೈರಲ್ ವಿಡಿಯೋ ಶೇರ್ ಮಾಡುವ ಮುನ್ನ ಎಚ್ಚರ ವಹಿಸಿ
ಇದನ್ನೂ ಓದಿ : Fact Check | TRAI 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದೆ ಎಂಬುದು ಸುಳ್ಳು..!
ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ