Fact Check | ಉತ್ತರಪ್ರದೇಶದಲ್ಲಿ ಕೋರ್ಟ್‌ನ ಮುಸ್ಲಿಂ ಉದ್ಯೋಗಿಯೊಬ್ಬ ನೀರಿನ ಕಪ್‌ಗೆ ಉಗುಳಿದ್ದಾನೆ ಎಂಬುದು ಸುಳ್ಳು

“ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ನ್ಯಾಯಾಧೀಶರ ಕೊಠಡಿಯಲ್ಲಿ ಮುಸ್ಲಿಂ ಉದ್ಯೋಗಿಯೊಬ್ಬರು ಒಂದು ಲೋಟದ ನೀರಿಗೆ ಉಗಳುತ್ತಿದ್ದಾರೆ ಹಿಂದುಗಳೇ ಈ ವಿಡಿಯೋವನ್ನು ನೋಡಿ.. ಈಗಲಾದರೂ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಸಾಕಷ್ಟು ಮಂದಿ ಇದು ಮುಸಲ್ಮಾನರ ಜಿಹಾದ್‌ನ ಒಂದು ಭಾಗ ಎಂದು ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ

ಇನ್ನೂ ಕೆಲವು ಸಾಮಾಜಿಕ ಜಾಲತಾಣದ ಬಳಕೆದಾರರು “ಆಲಿಘಡ ನ್ಯಾಯಾಲಯದಿಂದ ಉಗುಳುವ ಜಿಹಾದ್‌ನ ಹೊಚ್ಚ ಹೊಸ ವಿಡಿಯೋ ಬಿಡುಗಡೆಯಾಗಿದೆ. ನ್ಯಾಯಾಲಯದ ನ್ಯಾಯಾಧೀಶರು ಸಹ ಸ್ಪಿಟ್ ಜಿಹಾದ್‌ಗೆ ಬಲಿಯಾದರು” ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಈ ಪ್ಯಾಕ್ಟ್‌ಚೆಕ್ ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಕಿ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜಿನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಈ ವಿಡಿಯೋ 2018ಕ್ಕೂ ಹಿಂದಿನದ್ದು ಎಂಬುದು ನಮಗೆ ತಿಳಿದು ಬಂದಿದೆ. ಈ ಕುರಿತು 29 ಮೇ 2018 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ.

ಆ ವರದಿಯ ಪ್ರಕಾರ, ವಿಕಾಸ್ ಗುಪ್ತಾ ಎಂಬ ನಾಲ್ಕನೇ ದರ್ಜೆಯ ಉದ್ಯೋಗಿ, ಉತ್ತರ ಪ್ರದೇಶದ ಅಲಿಗಢದಲ್ಲಿ ತನ್ನ ಜೊಲ್ಲು  ನೀರಿನಲ್ಲಿ ಬೆರೆಸಿ ಮಹಿಳಾ ನ್ಯಾಯಾಧೀಶರಿಗೆ ನೀಡುತ್ತಿರುವುದು ಕಂಡುಬಂದಿದೆ. ವೀಡಿಯೋ ಬಹಿರಂಗವಾದ ನಂತರ, ಗುಪ್ತಾ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಮತ್ತು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಿ.ಕೆ ಸಿಂಗ್ ಘಟನೆಯನ್ನು ದೃಢಪಡಿಸಿದ್ದರ ವರದಿಗಳು ಬಂದಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ನೀರಿನ ಲೊಟಕ್ಕೆ ಉಗುಳಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಲ್ಲ ಮತ್ತು ಆತ ಹಿಂದೂ ಎಂಬುದು ಸಾಬೀತಾಗಿದೆ. ಈ ಕುರಿತು ಎಬಿಪಿ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ಕೂಡ ವರದಿ ಮಾಡಿರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಉತ್ತರ ಪ್ರದೇಶದ ನ್ಯಾಯಾಲಯದಲ್ಲಿ, ನ್ಯಾಯಾಧೀಶರು ಕುಡಿಯುವ ನೀರಿನ ಲೋಟಕ್ಕೆ ಉಗುಳಿರುವ ವ್ಯಕ್ತಿ ಮುಸ್ಲಿಂ ಅಲ್ಲ ಮತ್ತು ಆತ ಹಿಂದೂ ಎಂಬುದು ತಿಳಿದು ಬಂದಿದೆ. ಈ ವಿಡಿಯೋವನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಿ


ಇದನ್ನೂ ಓದಿ : Fact Check: ಏಷ್ಯನ್ ದಾಖಲೆ ಮುರಿದ ಭಾರತೀಯ ಪುರುಷರ ರಿಲೇ ತಂಡದ 2023ರ ವಿಡಿಯೋ ಇತ್ತೀಚಿನದು ಎಂದು ವೈರಲ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *