ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರುನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಮೊಬೈಲ್ ಸ್ವಿಚ್ ಆನ್ ಆಗಿರುವ ಲಾರಿ ಚಾಲಕ ಅರ್ಜುನ ಸೇರಿದಂತೆ ಇತರರಿಗಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆಯನ್ನು 10ನೇ ದಿನವೂ ಮುಂದುವರಿಸಲಾಗಿದೆ. ಈವರೆಗೆ ಒಟ್ಟು ಎಂಟು ಮಂದಿಯ ಕಳೆಬರ ಸಿಕ್ಕಿದ್ದು, ಉಳಿದ ಮೂವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಈ ಕಾರ್ಯಾಚರಣೆ ದಿನೇ ದಿನೇ ಸವಾಲಾಗುತ್ತಿದೆ. ದೆಹಲಿಯಿಂದ ಬಂದ ತಂಡದಿಂದ ಅಂಡರ್ ಗ್ರೌಂಡ್ ಡಿಟೆಕ್ಟ್ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿ, 3 ಜಾಗಗಳನ್ನು ಪತ್ತೆ ಮಾಡಲಾಗಿದೆ. ನದಿಯಲ್ಲಿ ಕೊಚ್ಚಿ ಹೋಗಿದ್ದರ ಪೈಕಿ ರೆಲಿಂಗ್, ಟವರ್, ಲಾರಿ, ಟ್ಯಾಂಕರ್ ಕ್ಯಾಬಿನ್ ಸಿಗಬೇಕಿತ್ತು. ಆದರೆ ಡ್ರೋನ್ನಲ್ಲಿ 3 ಸ್ಪಾಟ್ಗಳು ಪತ್ತೆಯಾಗಿದ್ದು, ಇದರಲ್ಲಿ ಅರ್ಜುನ್ ಲಾರಿ ಯಾವುದು ಅನ್ನುವುದರ ಪತ್ತೆ ಸವಾಲಾಗಿದೆ.
ಇದರ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನನ ಶವ ಪತ್ತೆಯಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್ಗಳಲ್ಲಿ ಇದೇ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ನಾವು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಚಾಲಕ ಅರ್ಜುನ್ ಅವರ ಶವ ದೊರಕಿದ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎನ್ಡಿಆರ್ ಎಫ್ ಎಕ್ಸ್ ಖಾತೆಯನ್ನೂ ಪರಿಶೀಲಿಸಲಾಗಿದ್ದು, ಯಾವುದೇ ಮಾಹಿತಿಗಳು ಕಂಡುಬಂದಿಲ್ಲ.
ಆ ಬಳಿಕ ಕಾರವಾರ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಕಚೇರಿ ಹೇಳಿಕೆ ಪ್ರಕಾರ, ಅರ್ಜುನ್ ಅವರ ಶವ ದೊರಕಿದೆ ಎನ್ನುವುದು ತಪ್ಪು ಮಾಹಿತಿಯಾಗಿದೆ. ಅಂಕೋಲಾದ ಗುಡ್ಡ ಕುಸಿತ ಸ್ಥಳ, ಪಕ್ಕದ ಗಂಗಾವಳಿ ನದಿಯಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದ್ದು, ಚಾಲಕ ಅರ್ಜುನ್ ಅವರೂ ಸೇರಿದಂತೆ ನಾಪತ್ತೆಯಾದ ಮೂವರಿಗೆ ಹುಡುಕಾಟ ನಡೆಯುತ್ತಿದೆ. ಸ್ಥಳದಲ್ಲಿ ಸೇನೆ, ಎನ್ಡಿಆರ್ ಎಫ್, ರಕ್ಷಣಾ ತಂಡಗಳು ಇವೆ ಎಂದು ತಿಳಿಸಿದ್ದಾರೆ.
ಇದುವರೆಗೆ ಅರ್ಜುನ್ ಮತ್ತವರ ಲಾರಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸಧ್ಯ ಗಂಗಾವಳಿ ನದಿಯ ಒಳಭಾಗದಲ್ಲಿ ಮೂರು ಕಡೆಗಳಲ್ಲಿ ಮೆಟಲ್ ತಂತ್ರಜ್ಞಾನ ನೆರವಿನಿಂದ ಲೋಕದ ವಸ್ತುಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಶೋಧ ನಡೆಯಬೇಕಿದೆ. ಇದಕ್ಕೆ ಮಲ್ಪೆಯಿಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡ ಆಗಮಿಸಿದ್ದು ಶೋಧ ನಡೆಸಲಿದೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತಂತೆ ನಾವು ತನಿಖೆ ನಡೆಸಿದಾಗ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ವಾರ್ತಾಭಾರತಿ ಜೊತೆಗೆ ಮಾತನಾಡಿದ ಆಡಿಯೋ ಲಭ್ಯವಾಗಿದೆ. ಜುಲೈ 26, 2024ರಂದು ವಾರ್ತಾಭಾರತಿ ವರದಿಯಲ್ಲಿ, ಈಶ್ವರ್ ಮಲ್ಪೆ ಅವರು 6 ಜನರ ತಂಡ ಅಂಕೋಲಾಕ್ಕೆ ತೆರಳಿ ಅರ್ಜುನ್ ಅವರ ಹುಡುಕಾಟ ನಡೆಸುವುದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೇರಳ ಲಾರಿ ಚಾಲಕ ಅರ್ಜುನ್ ಅವರ ಶವ ದೊರೆತಿದೆ ಎಂಬ ಸಂದೇಶದೊಂದಿಗೆ ಹಂಚಿಕೊಳ್ಳುತ್ತಿರುವ ಪೋಟೋ ತಪ್ಪಾಗಿದೆ. ಅಂತಹ ನಾಪತ್ತೆಯಾದ ಶವ ಪತ್ತೆಯಾದ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನು ಓದಿ: 2023 ರ ಇಸ್ರೇಲ್ ತಂಡದ ಫೋಟೋವನ್ನು ಪ್ಯಾರಿಸ್ 2024ರ ಒಲಿಂಪಿಕ್ಸ್ನ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
ವೀಡಿಯೋ ನೋಡಿ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ