ವ್ಯಕ್ತಿಯೊಬ್ಬ ತನ್ನ ನಾಲಿಗೆಯನ್ನು ಹೊರ ಚಾಚುತ್ತಾ, ಮೈ ಮೇಲೆ ದೇವರು ಬಂದವರಂತೆ ವರ್ತಿಸುತ್ತಾ, ಗುಲಾಬಿ ದಳಗಳ ರಾಶಿಯ ನಡುವೆ ಕುಳಿತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೊವನ್ನು ಹಂಚಿಕೊಂಡಿರುವ ಬಳಕೆದಾರರು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತದಲ್ಲಿ 121 ಜನರ ಸಾವಿಗೆ ಕಾರಣವಾದ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಭೋಲೆ ಬಾಬಾ’ ಎಂದು ಕರೆಯಲ್ಪಡುವ ಸ್ವಯಂ ಘೋಷಿತ ದೇವಮಾನವ ಈತ ಎಂದು ಹೇಳುತ್ತಿದ್ದಾರೆ.
ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ‘ವಿಂಧ್ಯಾ ಭಾರತ್ ಲೈವ್’ ಎಂಬ ಚಾನೆಲ್ ಹಂಚಿಕೊಂಡ ಯೂಟ್ಯೂಬ್ ವೀಡಿಯೊವನ್ನು ನಾವು ನೋಡಿದ್ದೇವೆ. ಈ ವ್ಯಕ್ತಿಯನ್ನು ‘ವೈಬ್ರೇಷನ್ ಬಾಬಾ’ ಎಂದು ಕರೆಯಲಾಗುತ್ತದೆ ಎಂದು ಶೀರ್ಷಿಕೆ ಹೇಳಿದೆ.
ನಾವು ‘ವೈಬ್ರೇಷನ್ ಬಾಬಾ ಗುಜರಾತ್’ ಬಳಸಿ ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಈ ವ್ಯಕ್ತಿಯ ಬಗ್ಗೆ ಹಲವಾರು ವರದಿಗಳು ಲಭ್ಯವಾಗಿವೆ. ಜೀ ಉತ್ತರ ಪ್ರದೇಶ ಉತ್ತರಾಖಂಡ್ ಹಂಚಿಕೊಂಡ ವೀಡಿಯೊ ವರದಿಯೂ ವೈರಲ್ ವೀಡಿಯೊವನ್ನು ಹೊಂದಿದೆ.
ಗುಜರಾತ್‌ನ ಪಂಚಮಹಲ್ ಜಿಲ್ಲೆಯಲ್ಲಿ ಈ ವ್ಯಕ್ತಿ ‘ಬಾಬಾ ಭರತ್ಮಡಿ’ ಎಂದು ಪ್ರಸಿದ್ಧರಾಗಿದ್ದಾರೆ ಎಂದು ವರದಿ ಹೇಳಿದೆ. ತನಗೆ ಹಿಂದೂ ದೇವತೆಯ ಶಕ್ತಿ ಇದೆ ಮತ್ತು ಕುದಿಯುವ ಎಣ್ಣೆಯಿಂದ ತೊಂದರೆಗಳು ಮತ್ತು ನೋವನ್ನು ನಿವಾರಿಸಬಹುದು ಎಂದು ಅವರು ಹೇಳುತ್ತಾರೆ.
ಹತ್ರಾಸ್ ಕಾಲ್ತುಳಿತಕ್ಕೆ ಕಾರಣವಾದ ‘ಬಾಬಾ’ ಕುರಿತು:
ಜುಲೈ 2 ರಂದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 121 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಧಾರ್ಮಿಕ ಬೋಧಕ ಸಕರ್ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾಗಾಗಿ ಆಯೋಜಿಸಿದ್ದ ಸತ್ಸಂಗದಲ್ಲಿ ಈ ದುರಂತ ಸಂಭವಿಸಿದೆ. ದಿ ಕ್ವಿಂಟ್, ಇಂಡಿಯಾ ಟುಡೇ ಮತ್ತು ರಾಜಸ್ಥಾನ್ ತಕ್ ನ ಹಲವಾರು ವರದಿಗಳನ್ನು ನಾವು ಪರಿಶೀಲಿಸಿದ್ದೇವೆ, ಅದರಲ್ಲಿ ‘ಭೋಲೆ ಬಾಬಾ’ ಅವರ ಚಿತ್ರಗಳು ಇದ್ದವು.
ಈ ಚಿತ್ರಗಳನ್ನು ವೈರಲ್ ವೀಡಿಯೊದಲ್ಲಿ ಕಂಡುಬರುವ ಚಿತ್ರದೊಂದಿಗೆ ಹೋಲಿಸಿದಾಗ, ಇವರು ಇಬ್ಬರೂ ಬೇರೆ ಬೇರೆ ಎಂದು ನಾವು ಗಮನಿಸಬಹುದು.
ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಇಂತಹ ಅನೇಕ ನಕಲಿ ಬಾಬಾಗಳ ಜಾಲವೇ ಇದ್ದು, ಇವರು ತಾವು ಸ್ವಯಂ ಘೋಷಿತ ದೇವಮಾನವರೆಂದು ಅಲ್ಲಿನ ಜನಗಳಿಗೆ ಮೌಢ್ಯ ಬಿತ್ತುತ್ತಾ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವವನ್ನು ಸೃಷ್ಟಿಸಿಕೊಂಡಿರುತ್ತಾರೆ. ಆಗಾಗ್ಗೆ ಇವರ ಕಾರ್ಯಕ್ರಮಗಳಲ್ಲಿ ಕಳ್ಳತನ, ಕಾಲ್ತುಣಿತದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
ಆದ್ದರಿಂದ, ಹತ್ರಾಸ್ ಕಾಲ್ತುಳಿತಕ್ಕೆ ಕಾರಣರಾದವರು ಎಂದು ಗುಜರಾತ್‌ನ ಮತ್ತೊಬ್ಬ ಸ್ವಯಂ ಘೋಷಿತ ದೇವಮಾನವನನ್ನು ‘ಭೋಲೆ ಬಾಬಾ’ ಎಂದು ತಪ್ಪಾಗಿ ಗುರುತಿಸಲಾಗುತ್ತಿದೆ.
ಇದನ್ನು ಓದಿ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಲಾರಿ ಚಾಲಕ ಅರ್ಜನ್ ಶವ ಪತ್ತೆಯಾಗಿದೆ ಎಂಬುದು ಸುಳ್ಳು
ವೀಡಿಯೋ ನೋಡಿ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ