ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಇತರ ಎಂಟು ಜನರೊಂದಿಗೆ ಭದ್ರತಾ ಸಭೆಯಲ್ಲಿ ಭಾಗವಹಿಸುತ್ತಿರುವುದನ್ನು ತೋರಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಂಗ್ಲಾದೇಶದ ಭದ್ರತಾ ಸಭೆಯಲ್ಲಿ ‘ಭಾರತೀಯ ಹೈಕಮಿಷನರ್’ ಕೂಡ ಭಾಗವಹಿಸಿದ್ದರು ಎಂದು ಫೋಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಬಾಂಗ್ಲಾದ ಭದ್ರತೆಯ ವಿಚಾರದಲ್ಲಿ ಭಾರತೀಯ ಹೈಕಮಿಷನ್ ಕಾರ್ಯವನ್ನು ನಿರ್ವಹಿಸುತ್ತಿದೆ ಎಂಬ ರೀತಿಯಲ್ಲಿ ಕೂಡ ಈ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.
ಕೇವಲ ಇಷ್ಟು ಮಾತ್ರವಲ್ಲದ ಕೇಂದ್ರ ಸರ್ಕಾರ ಯಾವುದೋ ಅಕ್ರಮದಲ್ಲಿ ತೊಡಗಿಸಿಕೊಂಡಿರಬಹುದು ಎಂದು ಕೂಡ ಹಲವರು ಈ ಫೋಟೋವನ್ನು ಹಂಚಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಹೀಗೆ ಪೋಸ್ಟ್ ಮಾಡಲಾಗುತ್ತಿರುವ ಫೋಟೋ ಕುರಿತು ಪರಿಶೀಲನೆ ನಡೆಸದೇ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ಬಾಂಗ್ಲಾದೇಶ ಅವಾಮಿ ಲೀಗ್‌ನ ಅಧಿಕೃತ ಖಾತೆಯಿಂದ ಹಂಚಿಕೊಂಡ ಫೇಸ್‌ಬುಕ್ ಪೋಸ್ಟ್ ಕಂಡು ಬಂದಿದೆ. ಈ ಫೋಟೋವನ್ನು 21 ಜುಲೈ 2024ರಂದು ಅಪ್‌ಲೋಡ್ ಮಾಡಲಾಗಿದ್ದು, ಇದೇ ರೀತಿ ಹಲವು ಫೋಟೋಗಳನ್ನು ವಿವಿಧ ಆಯಾಮಗಳಲ್ಲಿ ತೆಗೆದಿರುವುದು ಕಂಡು ಬಂದಿದೆ.
ಈ ಪೋಸ್ಟ್‌ನ ಟಿಪ್ಪಣಿಯಲ್ಲಿ ಭದ್ರತಾ ಸಲಹೆಗಾರರು, ಮೂರು ಪಡೆಗಳ ಮುಖ್ಯಸ್ಥರು, ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಸಶಸ್ತ್ರ ಪಡೆಗಳ ಪ್ರಧಾನ ಸಿಬ್ಬಂದಿ ಅಧಿಕಾರಿಯೊಂದಿಗೆ ಬಾಂಗ್ಲಾದೇಶದ ಪ್ರಧಾನಿ ಭದ್ರತಾ ಪರಿಸ್ಥಿತಿಯ ಕುರಿತು ಚರ್ಚಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇನ್ನು ವೈರಲ್ ಫೋಟೋದಲ್ಲಿ ಭಾರತೀಯ ಹೈ ಕಮಿಷನ್ ಎಂದು ಉಲ್ಲೇಖಿಸಿರುವ ವ್ಯಕ್ತಿ ಯಾರು ಎಂದು ಪರಿಶೀಲನೆ ನಡೆಸಿದಾಗ ಅವರು ಬಾಂಗ್ಲಾದೇಶದ ಪ್ರಧಾನಿಯ ಭದ್ರತಾ ಸಲಹೆಗಾರ ತಾರಿಕ್ ಅಹ್ಮದ್ ಸಿದ್ದಿಕ್ ಎಂದು ತಿಳಿದು ಬಂದಿದೆ. ಈ ಹಿಂದೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕೂಡ ಭೇಟಿ ಮಾಡಿದ್ದ ಫೋಟೋ ಕೂಡ ಕಂಡು ಬಂದಿದೆ
Had a good meeting with Major General Tarique Ahmed Siddique, the Security Advisor to Bangladesh PM, on the sidelines of #DefenceExpo2022 pic.twitter.com/W2PHU0ivij
— Rajnath Singh (@rajnathsingh) October 19, 2022
ಅಲಾಮಿ ಮತ್ತು ಯುಎನ್ ನ್ಯೂಸ್‌ನ ವೆಬ್‌ಸೈಟ್‌ಗಳಲ್ಲಿ ಸಿದ್ದಿಕ್ ಅವರ ಛಾಯಾಚಿತ್ರಗಳು ಪತ್ತೆಯಾಗಿದೆ. ಇನ್ನು ಭಾರತದಿಂದ ಬಾಂಗ್ಲಾದೇಶದ ಹೈ ಕಮಿಷನರ್ ಪ್ರಣಯ್ ವರ್ಮಾ ಅವರಿದ್ದು 21 ಸೆಪ್ಟೆಂಬರ್ 2022 ರಂದು ಬಾಂಗ್ಲಾದೇಶದ ಭಾರತೀಯ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಬಾಂಗ್ಲಾದೇಶದ ಭದ್ರತಾ ವಿಚಾರದ ಚರ್ಚೆಯಲ್ಲಿ ಭಾರತೀಯ ಹೈಕಮಿಷನರ್ ಭಾಗಿಯಾಗಿದ್ದಾರೆ ಎಂಬುದು ಸುಳ್ಳು. ಭಾರತೀಯ ಹೈಕಮಿಷನರ್ ಎಂದು ಹಂಚಿಕೊಳ್ಳಲಾದ ಫೋಟೋ ಬಾಂಗ್ಲಾದೇಶದ ಪ್ರಧಾನಿಯ ಭದ್ರತಾ ಸಲಹೆಗಾರ ತಾರಿಕ್ ಅಹ್ಮದ್ ಸಿದ್ದಿಕ್ ಅವರದ್ದಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check: ನಿತಿನ್ ಗಡ್ಕರಿಯವರು ಮನೆಯಿಂದ 60 ಕಿ.ಮೀ. ದೂರದೊಳಗೆ ಟೋಲ್ ಬೂತ್ ಇದ್ದರೆ ಟೋಲ್ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ