ಜನಪ್ರಿಯ ಫಾಸ್ಟ್ ಫುಡ್ ತಯಾರಿಕಾ ಸಂಸ್ಥೆಯಾದ ಕೆಎಫ್‌ಸಿಯಿಂದ ಖರೀದಿಸಿದ ಚಿಕನ್ ಪೀಸ್, ಮೂಳೆಗಳು ಮತ್ತು ರೆಕ್ಕೆಗಳು ತೆವಳುವ, ಚಲಿಸುವ ರೀತಿಯ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಾಕಷ್ಟು ಬಳಕೆದಾರರು ‘ಬಿಗ್ ಬ್ರೇಕಿಂಗ್’ ಎಂದು ಬರೆದುಕೊಂಡು, ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಇದೇ ವೇಳೆ ಹಲವರು ಕೆಎಫ್‌ಸಿಯ ಗುಣ ಮಟ್ಟವನ್ನು ಕೂಡ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋವನ್ನು ನೋಡಿದ ಹಲವು ಮಂದಿ ಇದು ನಿಜವಾದ ವಿಡಿಯೋ ಎಂಬ ತಿರ್ಮಾನಕ್ಕೆ ಬಂದಿದ್ದಾರೆ. ಸಾಕಷ್ಟು ಮಂದಿ ಕೆಎಫ್‌ಸಿಯಿಂದ ಆಹಾರ ಖರೀದಿಸುವುದನ್ನು ನಿಲ್ಲಿಸಿ ಎಂದು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಈ ವಿಡಿಯೋವನ್ನೇ ಕಾರಣವಾಗಿ ನೀಡುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಅನುಮಾನವನ್ನು ಹುಟ್ಟು ಹಾಕಿರುವ ಈ ವಿಡಿಯೋವಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧ ಪಟ್ಟಂತೆ ಯಾವುದಾದರು ವಿಶ್ವಾಸಾರ್ಹ ವರದಿಗಳು ಇವೆಯೇ ಎಂದು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆದರೆ ಈ ವಿಡಿಯೋಗೆ ಸಂಬಂಧ ಪಟ್ಟಂತೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಈ ಘಟನೆ ನಿಜವೇ ಆಗಿದ್ದರೆ ಅಂತರಾಷ್ಟ್ರೀಯ ಮಾಧ್ಯಮಗಳಿಂದ ಹಿಡಿದು ಸ್ಥಳೀಯ ಮಾಧ್ಯಮಗಳು ಕೂಡ ವರದಿಯನ್ನು ಮಾಡಬೇಕಿತ್ತು. ಈ ಅಂಶ ವೈರಲ್ ವಿಡಿಯೋ ಬಗೆಗಿನ ಅನುಮಾನವನ್ನು ಇನ್ನಷ್ಟು ಹೆಚ್ಚು ಮಾಡಿದೆ.
ಹೀಗಾಗಿ ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ನಾವು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ದು ಮನರಂಜನಾ ವೆಬ್‌ಸೈಟ್ ‘ಡೆಕ್ಸೆರ್ಟೊ’ ಪ್ರಕಟಿಸಿದ ‘TikTok ಫ್ರೈಡ್ ಚಿಕನ್‌ನ ವೈರಲ್ ವೀಡಿಯೊದಿಂದ ಹರಿದಾಡುತ್ತಿದೆ’ ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಲಾದ ಲೇಖನವೊಂದು ಕಂಡು ಬಂದಿದೆ. ಈ ಲೇಖನದಲ್ಲಿ ಈ ವಿಡಿಯೋವನ್ನು ರಚಿಸಿದವರು ಮ್ಯಾಕ್ಸಿಮ್ ವೆರೆಹಿನ್ ಎಂಬ ಕಲಾವಿದರು ಎಂದು ತಿಳಿದು ಬಂದಿದೆ.
ಇದನ್ನು ಸುಳಿವಾಗಿ ತೆಗೆದುಕೊಂಡು, ನಾವು ಮಾಕ್ಸಿಮ್ ವೆರೆಹಿನ್ ಅವರ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್‌ಗಳನ್ನು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ನಮಗೆ ನವೆಂಬರ್ 2021 ರಲ್ಲಿ ವೆರೆಹಿನ್ ಅವರು ತಮ್ಮ Instagram ಮತ್ತು ‘X ‘ ಖಾತೆಗಳಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ. ಮ್ಯಾಕ್ಸಿಮ್‌ನ ಪ್ರೊಫೈಲ್‌ಗಳನ್ನು ನೋಡಿದ ನಂತರ, ಅವರು ಕಾನ್ಸೆಪ್ಟ್ ಆರ್ಟ್ , AI ಕಲೆ , ಅನಿಮೇಟೆಡ್ ಗೇಮಿಂಗ್ ಕಟ್‌ಸ್ಕ್ರೀನ್‌ಗಳು ಇತ್ಯಾದಿಗಳನ್ನು ರಚಿಸುತ್ತಾರೆ ಎಂಬುದು ತಿಳಿದು ಬಂದಿದೆ.
#kfc pic.twitter.com/ugNhMJDx6W
— Maxim Verehin (@mverehin) November 10, 2021
ಒಟ್ಟಾರೆಯಾಗಿ ಹೇಳುವುದಾದರೆ, ವಿಡಿಯೋ ಗೇಮ್ ಕಾನ್ಸೆಪ್ಟ್ ಕಲಾವಿದ ಮಾಡಿದ ವೀಡಿಯೊವನ್ನು ಕೆಎಫ್‌ಸಿ ಫ್ರೈಡ್ ಚಿಕನ್ ಚಲಿಸುವ ನೈಜ ವೀಡಿಯೊ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಲಾರಿ ಚಾಲಕ ಅರ್ಜನ್ ಶವ ಪತ್ತೆಯಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ