Fact Check | ಟೆಲಿಫೋನ್‌ನ ಸಂಶೋಧಕ ಅಲೆಕ್ಸಾಂಡರ್ ಗ್ರಹಾಂ ಬೆಲ್ ಮೊದಲಿಗೆ “ಹಲೋ” ಎಂಬ ಪದವನ್ನು ಬಳಸಲಿಲ್ಲ..!

“ದೂರವಾಣಿಯ ಆವಿಷ್ಕಾರಕ ಗ್ರಹಾಂ ಬೆಲ್ ಅವರು ‘ಹಲೋ’ ಪದವನ್ನು ಸಾಮಾನ್ಯ ದೂರವಾಣಿ ಶುಭಾಶಯವಾಗಿ ಪರಿಚಯಿಸಿದರು. ಈ ಹೆಸರು ಗ್ರಹಂ ಬೆಲ್‌ ಅವರು ಮದುವೆಯಾಗಲು ನಿಶ್ಚಯವಾಗಿದ್ದು ಯುವತಿಯ ಹೆಸರು ಮಾರ್ಗರೇಟ್ ಹಲೋನಿಂದ ಹಲೋ ಎಂಬ ಪದವನ್ನು ತೆಗೆದುಕೊಳ್ಳಲಾಗಿದೆ. ನಾವು ಇಂದಿಗೂ ಕೂಡ ಇದೇ ಪದವನ್ನು  ನಾವು ಬಳಸುತ್ತಿದ್ದೇವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಹಲವಾರು ರೀಲ್ಸ್‌ ಹಾಗೂ ವಿವಿಧ ವಿಡಿಯೋ ಕಟೆಂಟ್‌ಗಳಾಗಿ ಕೂಡ ಬಳಸಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಂದ ಈ ಟಿಪ್ಪಣಿಗಳನ್ನು ನೋಡಿದ ಹಲವು ಮಂದಿ ಇದು ನಿಜವಿರಬಹುದು ಎಂದು ನಂಬಿಕೊಂಡಿದ್ದಾರೆ ಮತ್ತು ಹಲವರು ತಮಗೆ ಬಂದ ರೀಲ್ಸ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರನ್ನು ಬಹುಮುಖ್ಯವಾಗಿ ವಿದ್ಯಾರ್ಥಿಗಳ ದಾರಿ ತಪ್ಪಿಸುತ್ತಿದೆ ಎಂದು ಇನ್ನೂ ಕೆಲವರು ವೈರಲ್‌ ಪೋಸ್ಟ್‌ಗಳಿಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಹಾಗಿದ್ದರೆ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆಯ ಕುರಿತು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಹಲವು ವರದಿಗಳು ಕಂಡು ಬಂದಿದೆ. ಆ ವರದಿಗಳಲ್ಲಿ ಗ್ರಹಾಂ ಬೆಲ್‌ ಅವರು ಟೆಲಿಫೋನ್‌ ಸಂಪರ್ಕದ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಹಲೋ ಎಂಬ ಪದವನ್ನು ಬಳಸಿದ್ದಾರೆ ಎಂಬ ಉಲ್ಲೇಖ ಎಲ್ಲಿಯೂ ಪತ್ತೆಯಾಗಿಲ್ಲ.

ಈ ಕುರಿತು ಇನ್ನಷ್ಟ ಹುಡುಕಾಟವನ್ನು ನಡೆಸಿದಾಗ ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದ್ದ “Great ‘Hello’ Mystery Is Solved” ಎಂಬ ವರದಿ ಪತ್ತೆಯಾಗಿದ್ದು, ಈ ವರದಿಯ ಪ್ರಕಾರ “ಅಲೆಕ್ಸಾಂಡರ್ ಗ್ರಹಾಂ ಬೆಲ್ 1876 ರಲ್ಲಿ ಟೆಲಿಫೋನ್ ಅನ್ನು ಕಂಡುಹಿಡಿದರು ಮತ್ತು ಆರಂಭದಲ್ಲಿ ಟೆಲಿಫೋನ್ ಸಂಭಾಷಣೆಗಳಿಗಾಗಿ “ಅಹೋಯ್, ಆಹೋಯ್” ಎಂಬ ಶುಭಾಶಯವನ್ನು ಬಳಸಲು ಸಲಹೆ ನೀಡಿದರು. ಆದರೆ 1877 ರಲ್ಲಿ, ಥಾಮಸ್ ಎಡಿಸನ್ “ಹಲೋ” ಪದವನ್ನು ದೂರವಾಣಿ ಶುಭಾಶಯವಾಗಿ ಬಳಸಲು ಪ್ರಸ್ತಾಪಿಸಿದರು. ಅಂದಿನಿಂದ, “ಹಲೋ” ಎಂಬುದು ದೂರವಾಣಿ ಕರೆಗಳಿಗೆ ಪ್ರಮಾಣಿತ ಶುಭಾಶಯವಾಗಿದೆ.” ಎಂದು ತಿಳಿದು ಬಂದಿದೆ. ಇನ್ನು ಗ್ರಹಂ ಬೆಲ್‌ ಅವರ ಪತ್ನಿಯ ಕುರಿತು ಹುಡುಕಿದಾಗ ಅವರ ಹೆಸರು ಮಬೆಲ್‌ ಗಾರ್ಡಿನರ್‌ ಹಬಾರ್ಡ್ ಎಂಬುದು ಈ ವರದಿಯಿಂದ  ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, “ಹಲೋ” ಪದವನ್ನು ಮೊದಲು ಅಲೆಗ್ಸಾಂಡರ್‌ ಗ್ರಹಾಂ ಬೆಲ್‌ ಅವರು ಟೆಲಿಫೋನ್‌ ಪರೀಕ್ಷೆಯ ಪ್ರಯೋಗಕ್ಕೆ ಮೊದಲು ಬಳಸಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗೂ ಅವರ ಮಡದಿಯ ಹೆಸರು ಮಾರ್ಗರೇಟ್ ಹಲೋ ಎಂಬುದು ಕೂಡ ಸುಳ್ಳು ಎಂಬುದು ತಿಳಿದು ಬಂದಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಒಮ್ಮೆ ಪರಿಶೀಲನೆ ನಡೆಸುವುದು ಉತ್ತಮ.


ಇದನ್ನೂ ಓದಿ : Fact Check: ವಯನಾಡ್ ಭೂಕುಸಿತದ ದೃಶ್ಯಗಳೆಂದು ಚೀನಾದ ಪ್ರವಾಹ ಪೀಡಿತ ಪ್ರದೇಶದ ಹಳೆಯ ವೀಡಿಯೊ ವೈರಲ್ ಆಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *