ಶಿಥಿಲಗೊಂಡ ಸೇತುವೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, “ಇದು ಪ್ರಧಾನಿ ಮೋದಿವರು ಗುಜರಾತ್ ಮಾಡಲ್, ಗುಜರಾತ್‌ನಲ್ಲಿ ಮಾತ್ರ ಇಂತಹ ಸೇತುವೆಗಳನ್ನು ನೋಡಲು ಸಾಧ್ಯ, ಈ ರೀತಿಯ ಸೇತುವೆಗಳನ್ನು ಮೋದಿ ಸರ್ಕಾರ ಮಾತ್ರ ನಿರ್ಮಿಸಲು ಸಾಧ್ಯವಾಗಿದೆ. ಇದು ನವ ಭಾರತ” ಎಂದು ಹಲವರು ಈ ಫೋಟೋವನ್ನು ಹಂಚಿಕೊಂಡು ವ್ಯಂಗ್ಯವಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ಬಳಸಿಕೊಂಡು ಇನ್ನು ಕೆಲವರು ಇದು ಕೇರಳದ ಫೋಟೋ ಎಂದು ಹಂಚಿಕೊಂಡಿರೆ ಹಲವರು ಇದು ಬಿಹಾರದ ಫೋಟೋ ಎಂದು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿರುವ ಈ ಫೋಟೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 01 ಜುಲೈ 2024 ರಂದು ಅದೇ ಸೇತುವೆಯನ್ನು ಒಳಗೊಂಡಿರುವ ಬಾಂಗ್ಲಾದೇಶದ ಮಾಧ್ಯಮ ಔಟ್ಲೆಟ್ ‘ BTC ನ್ಯೂಸ್‘ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ ಈ ಫೋಟೋಗೂ ಭಾರತದ ಯಾವ ರಾಜ್ಯಕ್ಕೂ ಯಾವುದೇ ರೀತಿಯಾದ ಸಂಬಂಧವೇ ಇಲ್ಲ.
ಮೂಲ ವರದಿಯ ಪ್ರಕಾರ ದಕ್ಷಿಣ ಬಾಂಗ್ಲಾದೇಶದ ಬರ್ಗುನಾ ಜಿಲ್ಲೆಯ ಅಮ್ಟಾಲಿ ಉಪ ಜಿಲ್ಲೆಯ ತೇಪುರ ಗ್ರಾಮದಲ್ಲಿ ಸೇತುವೆ ಇದೆ. ಅಮ್ತಾಳಿ ಉಪಜಿಲ್ಲಾ ಎಂಜಿನಿಯರಿಂಗ್ ವಿಭಾಗದವರು ಪರಿಶೀಲನೆ ನಡೆಸಿದಾಗ 26 ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. 22 ಜೂನ್ 2024 ರಂದು, ಬಸ್‌ವೊಂದು ಈ ಸೇತುವೆಗಳಲ್ಲಿ ಒಂದರಿಂದ ಕಾಲುವೆಗೆ ಬಿದ್ದು ಒಂಬತ್ತು ಜನರು ಸಾವನ್ನಪ್ಪಿದರು. ಈ ಘಟನೆಯ ನಂತರ ಅಧಿಕಾರಿಗಳು ಸೇತುವೆಗಳ ಸುರಕ್ಷತಾ ತಪಾಸಣೆ ನಡೆಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾವು ಈ ಫೋಟೊದೊಂದಿಗೆ ಹಂಚಿಕೊಂಡ ಇದೇ ರೀತಿಯ ಇನ್ನೂ ಹಲವು ವರದಿಗಳನ್ನು ಕೂಡ ಪತ್ತೆ ಹಚ್ಚಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದಲ್ಲಿ ಶಿಥಿಲಗೊಂಡಿರುವ ಸೇತುವೆಯ ಫೋಟೋವನ್ನು ಬಳಸಿಕೊಂಡು, ಇದು ಗುಜರಾತ್‌ನಲ್ಲಿರುವ ಸೇತುವೆ ಎಂದು ಹಂಚಿಕೊಳ್ಳಲಾಗುತ್ತಿದ್ದು, ಇನ್ನೂ ಕೆಲವರು ಇತರ ರಾಜ್ಯಗಳಿಗೆ ಈ ಸೇತುವೆ ಸೇರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಸುದ್ದಿ ಸುಳ್ಳಿನಿಂದ ಕೂಡಿದೆ. ಮತ್ತು ಈ ವೈರಲ್ ಫೋಟೋ ಬಾಂಗ್ಲಾದೇಶಕ್ಕೆ ಸಂಬಂಧಿಸಿದಾಗಿದ್ದು, ಇಂತಹ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಿ.
ಇದನ್ನೂ ಓದಿ : Fact Check | ಹಮಾಸ್ ನಾಯಕನನ್ನು ಕೊಂದ ನಂತರ ಮೊಸಾದ್ ಮುಖ್ಯಸ್ಥರು ನೃತ್ಯ ಮಾಡಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ