Fact Check | ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯ ಅತ್ಯಾಚಾರ ಎಂದು ಬೆಂಗಳೂರಿನ ವಿಡಿಯೋ ಹಂಚಿಕೆ

“ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವನ್ನು ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿರುವ ಹಿಂದೂ ಹೆಣ್ಣು ಮಕ್ಕಳು ಪ್ರತಿನಿತ್ಯ ಈ ರೀತಿಯಾದ ನರಕಗಳನ್ನು ಎದುರಿಸಬೇಕಾಗಿದೆ. ಬಾಂಗ್ಲಾದೇಶಕ್ಕೆ ನಿಮ್ಮ ಹೆಣ್ಣು ಮಕ್ಕಳನ್ನು ಕಳುಹಿಸುವ ಮುನ್ನ ಎಚ್ಚರ ವಹಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದೊಂದಿಗೆ ಟಿಪ್ಪಣಿಯನ್ನು ಓದಿದ ಹಲವರು ಬಾಂಗ್ಲಾದೇಶದಲ್ಲಿ ನಿಜಕ್ಕೂ ಹಿಂದೂ ಹುಡುಗಿಯ ಮೇಲೆ ಮುಸ್ಲಿಂ ಯುವಕರು ಅತ್ಯಾಚಾರ ಮಾಡಿದ್ದಾರೆ ಎಂದುಕೊಂಡಿದ್ದಾರೆ. ಹೀಗಾಗಿ ಈ ಕುರಿತು ಯಾವುದೇ ರೀತಿಯಾದ ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ನ್ಯೂಸ್‌ 24 ಬಾಂಗ್ಲಾದ ವರದಿಯೊಂದು ಕಂಡು ಬಂದಿದ್ದು, ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ವೈರಲ್‌ ಪೋಸ್ಟ್‌ ಮೂಲ ವಿಡಿಯೋಗೂ ಯಾವುದೇ ಸಂಬಂಧವೇ ಇಲ್ಲ ಎಂಬುದು ತಿಳಿದು ಬಂದಿದೆ.

ವರದಿಯ ಪ್ರಕಾರ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಕಾರ್ಯನಿರ್ವಹಿಸುತ್ತಿರುವ ಮಾನವ ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಅಶ್ರಫುಲ್ ಮೊಂಡಲ್ ಅಲಿಯಾಸ್ ಬಾಸ್ ರಫಿ ಮತ್ತು ಅಬ್ದುರ್ ರೆಹಮಾನ್ ಢಾಕಾದ ನ್ಯಾಯಾಲಯದಲ್ಲಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಐವರು ಪುರುಷರು ಮಹಿಳೆಯೊಬ್ಬರ ಬಟ್ಟೆ ತೆಗೆಸಿ ವಿಕೃತಿ ಮೆರೆದಿದ್ದು, ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಭಯಾನಕ ವಿಡಿಯೋ ವೈರಲ್‌ ಆಗಿದೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ ಈ ಘಟನೆಯು ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಮೇ, 2021 ರ ಮೊದಲ ವಾರದಲ್ಲಿ ಸಂಭವಿಸಿದೆ ಎನ್ನಲಾಗಿದೆ. 22 ವರ್ಷದ ಯುವತಿಯ ಮೇಲೆ ಹಲ್ಲೆ ಮತ್ತು ಅತ್ಯಾಚಾರಕ್ಕಾಗಿ ಮೂವರು ಮಹಿಳೆಯರು ಸೇರಿದಂತೆ 12 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದ, ಇದೇ ವಿಷಯಕ್ಕೆ ಸಂಬಂಧ ಪಟ್ಟಂತೆ 8 ಜುಲೈ 2021 ರಂದು ಅಂದಿನ ಬೆಂಗಳೂರು ಪೊಲೀಸ್‌ ಆಯುಕ್ತರು ಟ್ವೀಟ್‌ ಮಾಡಿ ಘಟನೆಯ ಕುರಿತು ಸ್ಪಷ್ಟನೆಯನ್ನು ಕೂಡ ನೀಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳುತ್ತಿರುವ ರೀತಿಯಲ್ಲಿ ಬಾಂಗ್ಲಾದೇಶದಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂಬುದು ಸುಳ್ಳು. ವೈರಲ್‌ ವಿಡಿಯೋ ಬೆಂಗಳೂರಿನ ಗುಂಪು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಾಗಿದೆ. ಈ ವಿಡಿಯೋವನ್ನು ಕೋಮು ದ್ವೇಷಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ನಿರೂಪಣೆಯೊಂದಿಗೆ ಶೇರ್‌ ಮಾಡಲಾಗುತ್ತಿದ್ದು, ಈ ವಿಡಿಯೋ ಕುರಿತು ಎಚ್ಚರವಹಿಸಿ.


ಇದನ್ನೂ ಓದಿ : Fact Check: ಥಾಯ್ ವ್ಯಕ್ತಿಯೊಬ್ಬರು ಹಿಮ್ಮುಖವಾಗಿ ಗುಂಡು ಹಾರಿಸುತ್ತಿರುವ ಈ ಫೋಟೋ 2024 ರ ಪ್ಯಾರಿಸ್ ಒಲಿಂಪಿಕ್ಸ್ ನದ್ದಲ್ಲ!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *