Fact Check: ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದ ಬಿಕ್ಕಟ್ಟು ದಿನದಿಂದ ದಿನಕ್ಕೆ ಇನ್ನಷ್ಟು ಹದಗೆಡುತ್ತಿದೆ. ದೀರ್ಘಕಾಲದ ರಾಷ್ಟ್ರವ್ಯಾಪಿ ವಿದ್ಯಾರ್ಥಿ ವಿರೋಧಿ ಪ್ರತಿಭಟನೆಯ ನಂತರ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವನ್ನು ನೆನ್ನೆ, ಆಗಸ್ಟ್ 5 ರ ಸೋಮವಾರ ಅಧಿಕಾರದಿಂದ ಹೊರಹಾಕಲಾಯಿತು. ಪ್ರತಿಭಟನೆಯ ವಿರುದ್ಧದ ಕ್ರಮದಿಂದ ಕನಿಷ್ಠ 32 ಅಪ್ರಾಪ್ತರು ಸೇರಿದಂತೆ 300 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಆದಾಗ್ಯೂ, ಅಧಿಕೃತ ಸಾವಿನ ಸಂಖ್ಯೆ 150 ಆಗಿದೆ.

ಹಸೀನಾ ದೇಶದಿಂದ ಪಲಾಯನ ಮಾಡುತ್ತಿದ್ದಂತೆ ದೇಶದ ಸೇನೆಯು ಅವರ ರಾಜೀನಾಮೆಯನ್ನು ಘೋಷಿಸಿತು, ಮಿಲಿಟರಿ ಮಧ್ಯಂತರ ಸರ್ಕಾರವನ್ನು ರಚಿಸುತ್ತದೆ ಎಂದು ಘೋಷಿಸಿದೆ. ಆದರೆ ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಅಲ್ಲಿನ ಸೈನ್ಯ ವಿಫಲವಾಗಿದೆ. ನೆನ್ನೆ ಬಾಂಗ್ಲಾದೇಶದ ಪ್ರಧಾನಿ ನಿವಾಸಕ್ಕೆ ದಾಳಿ ಮಾಡಿದ ಪ್ರತಿಭಟನಾಕಾರರು  ಬಾಂಗ್ಲಾದೇಶದ ಪ್ರಧಾನಿಯ ಅಧಿಕೃತ ನಿವಾಸವಾದ “ಗಣಭಬನ್” ಅನ್ನು ಧ್ವಂಸಗೊಳಿಸಿದ್ದಾರೆ. 

ನಂತರ ಅನೇಕ ಸರ್ಕಾರಿ ಕಚೇರಿಗಳು ಅಲ್ಲದೆ ಬಾಂಗ್ಲಾದೇಶದ ರಾಷ್ಟ್ರಪಿತ ಎಂದು ಕರೆಯುವ “ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್” ಅವರ ಪ್ರತಿಮೆ ಮತ್ತು ಅವರ ಸ್ಮರಣಾರ್ಥ ನಿರ್ಮಿಸಿದ ಮ್ಯೂಸಿಯಂ ಸಹ ಧ್ವಂಸಗೊಳಿಸಿದ್ದಾರೆ.

ಆದರೆ ಈಗ, ಬಾಂಗ್ಲಾದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಬೆಂಕಿ ಹಚ್ಚಿರುವ ವರದಿಗಳ ನಡುವೆ, ಹಿಂದೂ ಮನೆಗಳು ಮತ್ತು ದೇವಾಲಯಗಳನ್ನು ಸುಡುವ ಕುರಿತು ಟ್ವೀಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭಿಸಿವೆ. ಆ ಟ್ವೀಟ್‌ಗಳಲ್ಲಿ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಕುರಿತು ಅನೇಕರು ಪೋಸ್ಟ್‌ಗಳನ್ನು, ಸಂದೇಶಗಳನ್ನು ಹಂಚಿಕೊಂಡು ಮುಸ್ಲಿಮರ ಗೆಳೆತನ ಮಾಡಬೇಡಿ ಎಂದು ಹಿಂದುಗಳಿಗೆ ಎಚ್ಚರಿಸುತ್ತಿದ್ದಾರೆ. ಅಂತಹ ಪೋಸ್ಟ್‌ಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ನಾವು ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರ ಲಿಟನ್ ದಾಸ್ ಮನೆಗೆ ದಾಳಿಯಾದ ಕುರಿತು ಹುಡುಕಿದಾಗ, ಹಂಚಿಕೊಳ್ಳಲಾಗುತ್ತಿರುವ ಮಾಹಿತಿ ಸುಳ್ಳು ಎಂಬುದು ಖಚಿತವಾಗಿದೆ. ದುಷ್ಕರ್ಮಿಗಳು ಲಿಟನ್ ದಾಸ್ ಮನೆಯನ್ನು ಧ್ವಂಸಗೊಳಿಸಿಲ್ಲ, ಬದಲಾಗಿ ಬಂಗ್ಲಾದೇಶದ ಮಾಜಿ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಮಶ್ರಫೆ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. 

ಮಶ್ರಫೆ ಮೊರ್ತಾಜಾ ಸಂಸದರಾಗಿದ್ದು, ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಮೊರ್ತಾಜಾ ಅವರು ಪ್ರತಿಭಟನಾನಿರತ ವಿಧ್ಯಾರ್ಥಿಗಳನ್ನು ಏಕೆ ಬೆಂಬಲಿಸುತ್ತಿಲ್ಲ ಎಂದು ಉದ್ರಿಕ್ತ ಯುವಕರಲ್ಲಿ ಕೋಪವಿತ್ತು. ಪ್ರಧಾನಿ ದೇಶದಿಂದ ಪಲಾಯನ ಮಾಡಿರುವುದರಿಂದ, ದುಷ್ಕರ್ಮಿಗಳು ಅವರ ಮನೆಯನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿದ್ದಾರೆ ಎಂದು ಫಸ್ಟ್‌ಪೋಸ್ಟ್‌, ಎಕನಾಮಿಕ್ಸ್‌ ಟೈಮ್ಸ್‌ ವರದಿ ಮಾಡಿವೆ.

ಹಾಗೆಯೇ ಬಾಂಗ್ಲಾದೇಶದ ಮಾಧ್ಯಮಗಳಾದ ಢಾಕಾ ಪೋಸ್ಟ್‌, ಪ್ರೋತೋಮಾಲೋ ವರದಿ ಮಾಡಿವೆ. ಈ ವರದಿಗಳಲ್ಲಿ “ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶವನ್ನು ತೊರೆಯುವ ಸುದ್ದಿಯ ನಂತರ, ನರೈಲ್ ಜಿಲ್ಲೆಯ ಸಾಮಾನ್ಯ ಜನರು ವಿಜಯಕ್ಕೆ ಬಂದರು. ಸೋಮವಾರ ಮಧ್ಯಾಹ್ನ ನಗರದ ಚೌರಸ್ತಾದಲ್ಲಿ ವಿಜಯೋತ್ಸವ ಆಚರಿಸಿದ ನಂತರ ಅವರು ನರೈಲ್‌ನಲ್ಲಿರುವ ಜತಿಯಾ ಸಂಸದ ಸಚೇತಕ ಮತ್ತು ನರೈಲ್ -2 ಕ್ಷೇತ್ರದ ಸಂಸದ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದರು. ಸ್ವಲ್ಪ ಸಮಯದ ನಂತರ, ಮನೆಗೆ ಬೆಂಕಿ ಹಚ್ಚಲಾಯಿತು.

ಮಶ್ರಾಫೆ ಅವರ ಮನೆಯ ಪಶ್ಚಿಮ ಭಾಗದಲ್ಲಿರುವ ನರೈಲ್ ಜಿಲ್ಲಾ ಅವಾಮಿ ಲೀಗ್ ಅಧ್ಯಕ್ಷ ಸುಭಾಷ್ ಚಂದ್ರ ಬೋಸ್ ಅವರ ಮನೆಯ ಮೇಲೂ ಇದೇ ರೀತಿ ದಾಳಿ ನಡೆಸಲಾಗಿದೆ. ನಂತರ, ಜಿಲ್ಲಾ ಅವಾಮಿ ಲೀಗ್ ಕಚೇರಿ ಮತ್ತು ಸಿಟಿ ಟರ್ಮಿನಲ್‌ನಲ್ಲಿರುವ ಬಂಗಬಂಧು ಅವರ ಭಿತ್ತಿಚಿತ್ರವನ್ನು ಧ್ವಂಸಗೊಳಿಸಲಾಯಿತು.” ಎಂದು ತಮ್ಮ ವರದಿಯಲ್ಲಿ ತಿಳಿಸಿವೆ.

ವೈರಲ್ ಚಿತ್ರದಲ್ಲಿರುವ ಮನೆ ಮತ್ತು ಮಶ್ರಫೆ ಮೊರ್ತಾಜಾ ಅವರ ಮನೆ ಒಂದೇ ಚಿತ್ರ ಎಂದು ನೀವು ಗಮನಿಸಬಹುದು.

ಆದ್ದರಿಂದ ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟ್ ತಂಡದ ಆಟಗಾರ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂಬುದು ಸುಳ್ಳಾಗಿದೆ. 


ಇದನ್ನು ಓದಿ: ಲುಪೋ ಚಾಕೊಲೇಟ್ ಕೇಕ್‌ನಲ್ಲಿ ಡ್ರಗ್ಸ್‌ ಪತ್ತೆಯಾಗಿದೆ ಎಂಬುದು ಸುಳ್ಳು


ವೀಡಿಯೋ ನೋಡಿ: ಟಿಪ್ಪುವಿನ ಖಡ್ಗದ ಮೇಲೆ ಹಿಂದೂ ವಿರೋಧಿ ಬರಹವಿಲ್ಲ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *