“ದುರಂತ ವಿಡಿಯೋ – ಹೃದಯ ವಿದ್ರಾವಕ, ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿಯ ಭಯೋತ್ಪಾದಕರು ಒಬ್ಬ ವೃದ್ಧ ಹಿಂದೂ ವ್ಯಕ್ತಿಯನ್ನು ಹತ್ಯೆಗೈದು ಪ್ರತಿಮೆಯ ಮೇಲೆ ನೇತು ಹಾಕಿದ್ದಾರೆ. ಇಸ್ಲಾಮಿಸ್ಟ್‌ಗಳು ಅವನ ಸುತ್ತಲೂ ಅಲ್ಲಾ ಹು ಅಕ್ಬರ್ ಘೋಷಣೆಗಳನ್ನು ಎತ್ತುತ್ತಿರುವುದು ಕಂಡುಬಂದಿತು… ನಿಜಗುಣಾನಂದ ಸ್ವಾಮಿ ಎಲ್ಲಿ ಇದ್ದಿಯೋ ಮುಟ್ಟಾಳ. ಭಾರತದಲ್ಲಿರುವ ರೋಹಿಂಗ್ಯ ಮತ್ತು ಬಾಂಗ್ಲ ವಲಸಿಗರನ್ನು ಪಬ್ಲಿಕೆ ಓಡಿಸಬೇಕಾಗುತ್ತದೆ” ಎಂದು ಸಂಬಂಧವೇ ಇಲ್ಲದೇ ವಿಡಿಯೋವೊಂದರ ಜೊತೆ ಕೋಮು ದ್ವೇಷವನ್ನು ಹರಡುವ ಟಿಪ್ಪಣಿಯನ್ನು ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇನ್ನು ಈ ಬರಹವನ್ನು ಪರಿಶೀಲನೆ ನಡೆಸದೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಮುಸ್ಲಿಂ ಸಮುದಾಯದ ಬಗ್ಗೆ ಆಕ್ರೋಶವನ್ನು ಕೂಡ ವ್ಯಕ್ತಪಡಿಸಲಾಗುತ್ತಿದೆ. ಕೇವಲ ಇಷ್ಟು ಮಾತ್ರವಲ್ಲದೆ ಮುಸ್ಲಿಂ ಸಮುದಾಯದಿಂದ ಭಾರತಕ್ಕೆ ಅಪಾಯ ಎಂಬಂತೆ ಬಿಂಭಿಸಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಸತ್ಯಾಸತ್ಯತೆಯ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ ಡಾಕಾ ಪೋಸ್ಟ್ ವೆಬ್‌ತಾಣದಲ್ಲಿ “ಚರ್ಚಿತ ಅಧ್ಯಕ್ಷರು ಹಿರೋನ್ ಗುಂಡು ಹಾರಿಸಿದ ನಂತರವೂ ಬದುಕಲು ಸಾಧ್ಯವಾಗಲಿಲ್ಲ” ( ಬಾಂಗ್ಲಾದಿಂದ ಕನ್ನಡಕ್ಕೆ ಭಾಷಾಂತರಗೊಳಿಸಲಾಗಿದೆ) ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿತ್ತು.
ಈ ವರದಿಯ ಪ್ರಕಾರ ಆಗಸ್ಟ್ 5 ರಂದು ಮಧ್ಯಾಹ್ನದ ಸುಮಾರಿಗೆ ಉದ್ರಿಕ್ತರ ಗುಂಪು ಹಿರೋನ್ ಅವರ ಮನೆಯನ್ನು ಧ್ವಂಸಗೊಳಿಸಿತು, ಈ ವೇಳೆ ಸ್ವತಃ ಹಿರೋನ್ ಗುಂಪಿನ ಮೇಲೆ ಗುಂಡು ಹಾರಿಸಿದ್ದರು, ಆಗ ಹಲವಾರು ಜನ ಗಾಯಗೊಂಡಿದ್ದರು. ಇದರಿಂದ ಆಕ್ರೋಶಗೊಂಡ ಕಿಡಿಗೇಡಿಗಳು ಹೀರೋನ್‌ರ ಮನೆಗೆ ಬೆಂಕಿ ಹಚ್ಚಿತು ಮತ್ತು ಅವರ ವೈಯಕ್ತಿಕ ಚಾಲಕ ಅಖ್ತರ್ ಅವರ ಮೇಲೆ ಭೀಕರ ದಾಳಿಯನ್ನು ನಡೆಸಿತು. ಬಳಿಕ ಅಖ್ತರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಅಖ್ತರ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಮತ್ತೊಂದೆಡೆ, ಮನೆಯ ಮೂರನೇ ಮಹಡಿಯಲ್ಲಿ ಸಿಲುಕಿಕೊಂಡಿದ್ದ ಹಿರೋನ್ ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ. ಮನೆಯೊಳಗೆ ನುಗ್ಗಿದ ಗುಂಪು ಅವರ ಶವವನ್ನು ಹೊರತೆಗೆದು ನಗರದ ಮಧ್ಯಭಾಗದಲ್ಲಿರುವ ಪೈರಾ ಚಟ್ಟರ್‌ನಲ್ಲಿ ನೇಣು ಹಾಕಿತು. ಅಲ್ಲಿಂದ ಅವರ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಕೆಲವೊಂದು ವಿಡಿಯೋಗಳು ಯೂಟ್ಯುಬ್‌ನಲ್ಲಿ ಕೂಡ ಕಂಡು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದಲ್ಲಿ ಜಮಾತ್-ಎ-ಇಸ್ಲಾಮಿಯ ಭಯೋತ್ಪಾದಕರು ಒಬ್ಬ ವೃದ್ಧ ಹಿಂದೂ ವ್ಯಕ್ತಿಯನ್ನು ಹತ್ಯೆಗೈದು ಪ್ರತಿಮೆಯ ಮೇಲೆ ನೇತು ಹಾಕಿದ್ದಾರೆ ಎಂಬುದು ಸುಳ್ಳಾಗಿದ್ದು, ವಿಡಿಯೋದಲ್ಲಿ ವೈರಲ್ ಆಗಿರುವ ವ್ಯಕ್ತಿ ಶವ ಅವಾಮಿ ಲೀಗ್ ನಾಯಕ ಶಾಹಿದುಲ್ ಇಸ್ಲಾಂ ಹಿರೋನ್ ಎಂಬುವವರದ್ದಾಗಿದೆ. ಈ ವಿಡಿಯೋವನ್ನು ಬಳಸಿಕೊಂಡು ಸುಳ್ಳು ಕೋಮು ನಿರೂಪಣೆಯೊಂದಿಗೆ ವಿಡಿಯೋವನ್ನು ವೈರಲ್ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ಹಾಗಾಗಿ ಇಂತಹ ಸುಳ್ಳು ಮಾಹಿತಿಗಳನ್ನು ಹೊಂದಿರುವ ವಿಡಿಯೋಗಳನ್ನು ಶೇರ್ ಮಾಡಬೇಡಿ.
ಇದನ್ನೂ ಓದಿ : Fact Check: ಯೆಮೆನ್‌ನ ಪ್ರತಿಭಟನೆಯ ವೀಡಿಯೊವನ್ನು ಇರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯಾ ಅಂತ್ಯಕ್ರಿಯೆಯ ದೃಶ್ಯ ಎಂದು ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ