ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ, ಬಾಂಗ್ಲಾದೇಶದ ಇತ್ತೀಚಿನ ದೃಶ್ಯಗಳಂತೆ ಮಹಿಳೆಯೊಬ್ಬರ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿರುವ ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗೆ ವಿವಿಧ ರೀತಿಯಾದ ಪ್ರತಿಕ್ರಿಯೆಗಳು ಬರುತ್ತಿದ್ದು, ಇದಕ್ಕೆ ಹಲವರು ತಮ್ಮದೇ ಆದ ಕಪೋಲಕಲ್ಪಿತ ಕತೆಗಳನ್ನು ಕಟ್ಟಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ಪೋಸ್ಟ್ ಮಾಡಲಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Hindu Women in Bangladesh!
They are being Raped and Killed! Hindus are staring at a Genocide in Bangladesh
These images and videos make you feel so helpless! pic.twitter.com/j47Ri5QX2p
— The Jaipur Dialogues (@JaipurDialogues) August 7, 2024
ಸಾಕಷ್ಟು ಮಂದಿ ಈ ವಿಡಿಯೋವನ್ನು ಹಂಚಿಕೊಂಡು “ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರು! ಅವರನ್ನು ಅತ್ಯಾಚಾರ ಮಾಡಲಾಗುತ್ತಿದೆ ಮತ್ತು ಕೊಲ್ಲಲಾಗುತ್ತಿದೆ! ಹಿಂದೂಗಳು ಬಾಂಗ್ಲಾದೇಶದಲ್ಲಿ ನರಮೇಧವನ್ನು ನೋಡುತ್ತಿದ್ದಾರೆ. ಈ ಚಿತ್ರಗಳು ಮತ್ತು ವೀಡಿಯೊಗಳು ನಿಮ್ಮನ್ನು ತುಂಬಾ ಅಸಹಾಯಕನನ್ನಾಗಿ ಮಾಡುತ್ತದೆ!” ಎಂದು ಬರೆದು ಈ ವಿಡಿಯೋದೊಂದಿಗೆ ಕೋಮು ದ್ವೇಷವನ್ನು ಕೂಡ ಹರಡಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಹಿಂದಿನ ಸತ್ಯ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಬಾಂಗ್ಲಾದೇಶದ ದಿ ಡೈಲಿ ಸ್ಟಾರ್ ಎಂಬ ವೆಬ್‌ಸೈಟ್‌ನಲ್ಲಿ 8 ಆಗಸ್ಟ್ 2024ರಂದು “Protests erupt in Cumilla, JnU over Fairuz’s ‘murder’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಉಲ್ಲೇಖಿಲಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ನಮಗೆ SOMOY TV ಸುದ್ದಿ ಸಂಸ್ಥೆ ಈ ಪ್ರತಿಭಟನಾ ವರದಿಯ ಕುರಿತ ವಿಡಿಯೋವನ್ನು ತನ್ನ ಯುಟ್ಯುಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಕಂಡು ಬಂದಿದೆ. ಈ ವರದಿಯ ಪ್ರಕಾರ ಜಗನ್ನಾಥ ವಿಶ್ವವಿದ್ಯಾಲಯದಲ್ಲಿ ಅಬೊಂಟಿಕಾ ಎಂಬ ವಿದ್ಯಾರ್ಥಿನಿಯೊರ್ವಳಿಗೆ ಆಕೆಯ ಸಹಪಾಠಿ ಲೈಂಗಿಕ ಕಿರುಕುಳವನ್ನು ನೀಡಿದ್ದಾನೆ. ಆದರೆ ವಿದ್ಯಾರ್ಥಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಹಾಯಕ ಪ್ರಾಧ್ಯಾಪಕರು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದರಿಂದ ಆಕ್ರೋಶಗೊಂಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಡಳಿತ ಮಂಡಳಿ ವಿರುದ್ಧ ಮೌನ ಮತ್ತು ಅಣಕು ಪ್ರತಿಭಟನೆ ನಡೆಸಿದ್ದಾರೆ. ಇದೀಗ ಇದೇ ವಿಡಿಯೋವನ್ನು ಬಳಸಿ ಕೋಮು ದ್ವೇಷವನ್ನು ಹರಡುವ ಸುಳ್ಳು ಟಿಪ್ಪಣಿಗಳೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ವಿಡಿಯೋಗೂ ಬಾಂಗ್ಲಾದಲ್ಲಿ ನಡೆದ ವಿದ್ಯಾರ್ಥಿಗಳ ಚಳವಳಿಗೂ ಯಾವುದೇ ರೀತಿಯಾದ ಸಂಬಂಧ ಇಲ್ಲ ಎಂಬುದು ಕೂಡ ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಇತ್ತೀಚೆಗ ನಡೆಯುತ್ತಿರುವ ಗಲಭೆಯಲ್ಲಿ ಹಿಂದೂ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಸುಳ್ಳು ಮಾಹಿತಿಯಿಂದ ಕೂಡಿದೆ. ಆ ವಿಡಿಯೋ ಜಗನ್ನಾಥ ವಿಶ್ವಾವಿದ್ಯಾಲದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಾಗಿದೆ. ಇಂತಹ ಸುಳ್ಳು ನಿರೂಪಣೆಯನ್ನು ಹೊಂದಿರುವ ವಿಡಿಯೋಗಳನ್ನು ಹಂಚಿಕೊಳ್ಳುವುದು ಅಪರಾದವಾಗಿದೆ.
ಇದನ್ನೂ ಓದಿ :Fact Check: ಬಾಂಗ್ಲಾದೇಶದ ಜಿಹಾದಿಗಳು ಹಿಂದೂ ಕುಟುಂಬವನ್ನು ಸಂಪೂರ್ಣವಾಗಿ ನಾಶಪಡಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.