Fact Check: ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತದೆ ಎಂಬುದು ನಿಜವೇ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ಒಂದು ದಶಕಗಳಿಂದಲೂ ಹಿಂದು-ಮುಸ್ಲಿಂ ಹೆಸರಿನಲ್ಲಿ ಕೋಮುವಾದ ಬಿತ್ತಲು ಮತ್ತು ಧರ್ಮ ಕಲಹ ನಡೆಯುವಂತೆ ಮಾಡಲು ಅನೇಕ ಬಲಪಂಥೀಯ ಸಂಘಟನೆಗಳು ಮತ್ತು ಅವುಗಳ ಬೆಂಬಲಿಗರು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಬೆಂಬಲಿಗರು ಸಹ ಪ್ರಮುಖವಾಗಿ ಭಾಗಿಯಾಗಿದ್ದು, ಪ್ರತಿನಿತ್ಯ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಿಬಿಡುವುದು, ಸಂಬಂಧವಿರದ ಘಟನೆಗೆ ಕೋಮು ಆಯಾಮವನ್ನು ನೀಡುವುದು, ಹಿಂದುಗಳ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಬಿಂಬಿಸಲು ಹಳೆಯ ಘಟನೆಗಳ ವೀಡಿಯೋಗಳನ್ನು ನಿರಂತರವಾಗಿ ಹರಿಬಿಡುತ್ತಿದ್ದಾರೆ. ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಇಂತಹ ನೂರಾರು ಆರೋಪಗಳನ್ನು, ಸುಳ್ಳು ಸುದ್ದಿಗಳನ್ನು ಸತ್ಯಶೋಧನೆ ನಡೆಸಿ ಪುರಾವೆಗಳ ಸಮೇತ ಸಾಭೀತು ಪಡಿಸಿದ್ದೇವೆ.

ಅದರಂತೆ ಈಗ, “ಭವಿಷ್ಯದಲ್ಲಿ ಬಿಜೆಪಿಯಾಗಲೀ, ಟಿಎಂಸಿಯಾಗಲೀ, ಕಾಂಗ್ರೆಸ್ ಆಗಲೀ, ಎಡರಂಗವಾಗಲೀ ಇರುವುದಿಲ್ಲ. ಭಾರತ ನಾಶವಾಗುವುದು ಖಂಡಿತ. ಭಾರತದಲ್ಲಿ ಪ್ರತಿದಿನ ಸುಮಾರು 65,000 ಮಕ್ಕಳು ಜನಿಸುತ್ತಿದ್ದಾರೆ. ಇವರಲ್ಲಿ ಸುಮಾರು 40,000 ಮುಸ್ಲಿಂ ಮಕ್ಕಳು ಮತ್ತು ಸುಮಾರು 25,000 ಹಿಂದೂಗಳು ಮತ್ತು ಇತರ ಧರ್ಮದ ಮಕ್ಕಳು. ಅಂದರೆ ಮುಸ್ಲಿಮರ ಜನನ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ.20ರಷ್ಟು!!! ಈಗ ಹುಟ್ಟಿದ ಮಕ್ಕಳಲ್ಲಿ ಮುಸ್ಲಿಮರು ಬಹುಸಂಖ್ಯಾತರು ಮತ್ತು ಹಿಂದೂಗಳು ಅಲ್ಪಸಂಖ್ಯಾತರು. ಈ ದರದಲ್ಲಿ 2050ರ ವೇಳೆಗೆ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ.” ಎಂದು ಪ್ರತಿಪಾದಿಸಿ ಧೀರ್ಘ ಬರಹವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

 

ಈ ಸಂದೇಶವನ್ನು ನವನೀತ್ ಕೌಶಾಲ್ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಲೇಖನ ಬರೆಯುವ ಹೊತ್ತಿಗೆ ಈ ಪೋಸ್ಟ್‌ ಅನ್ನು 3 ಲಕ್ಷದ 52 ಸಾವಿರ ಜನ ವೀಕ್ಷಿಸಿದ್ದು 3800 ಜನ ಇದನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ ಚೆಕ್:

ಹಂಚಿಕೊಳ್ಳಲಾಗಿರುವ ಮಾಹಿತಿ ದಿಕ್ಕು ತಪ್ಪಿಸುವಂತಿದ್ದು. ಮತ್ತು ಒಂದು ಧರ್ಮದ ಮೇಲೆ ಮಾಡಲಾಗಿರುವ ದ್ವೇಷ ಪೂರಿತ ಸುಳ್ಳು ಆರೋಪವಾಗಿದೆ.

ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಪ್ರಕಾರ, ಭಾರತದಲ್ಲಿ ದಿನಕ್ಕೆ 67,385 ಶಿಶುಗಳು ಜನಿಸುತ್ತವೆ. ಇದು ವಿಶ್ವದ ಆರನೇ ಒಂದು ಭಾಗದಷ್ಟು ಶಿಶು ಜನನಕ್ಕೆ ಸಮನಾಗಿದೆ. ದುರದೃಷ್ಟವಶಾತ್, ಪ್ರತಿ ನಿಮಿಷ, ಈ ನವಜಾತ ಶಿಶುಗಳಲ್ಲಿ ಒಂದು ಸಾಯುತ್ತದೆ. ಭಾರತವು ಪ್ರತಿವರ್ಷ ಸುಮಾರು 27 ಮಿಲಿಯನ್ ಮಕ್ಕಳ ಜನನಕ್ಕೆ ಕಾರಣವಾಗಿದೆ, ಇದು ವಿಶ್ವದ ವಾರ್ಷಿಕ ಶಿಶು ಜನನದ ಐದನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ.

ಆದರೆ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿಯಾಗಲಿ ಅಥವಾ ಇನ್ನಿತರ ಯಾವುದೇ ಸಂಘ ಸಂಸ್ಥೆಗಳು ಮಕ್ಕಳ ಜನನದ ಪ್ರಮಾಣವನ್ನು ಸಂಗ್ರಹಿಸುತ್ತವೆಯೇ ಹೊರತು ಧರ್ಮಾಧಾರಿತವಾಗಿ ಯಾವ ಸಂಸ್ಥೆಗಳು ಅದನ್ನು ನಮೂದಿಸಿಲ್ಲ. 

ಇಲ್ಲಿ ನವನೀತ್ ಕೌಶಾಲ್ ಅವರು ಮುಸ್ಲಿಂ ಮಕ್ಕಳ ಜನನದ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಿಂದುಗಳಲ್ಲಿ ಭಯ ಹುಟ್ಟಿಸುವ ಸಲುವಾಗಿ “ಪ್ರತಿ ದಿನ ಸುಮಾರು 40,000 ಮುಸ್ಲಿಂ ಮಕ್ಕಳು ಮತ್ತು ಸುಮಾರು 25,000 ಹಿಂದೂಗಳು ಮತ್ತು ಇತರ ಧರ್ಮದ ಮಕ್ಕಳು” ಹುಟ್ಟುತ್ತವೆ ಎಂದು ಸುಳ್ಳನ್ನು ಹರಿಬಿಟ್ಟಿದ್ದಾರೆ.

ನಾವು ಈ ಹಿಂದೆಯೇ ಹಿಂದು ಮತ್ತು ಮುಸ್ಲಿಂ ಫಲವತ್ತೆಯ ಕುರಿತು ಸತ್ಯಶೋಧನೆ ನಡೆಸಿ ಮುಂಬರುವ ದಿನಗಳಲ್ಲಿ ಮುಸ್ಲಿಂ ಮತ್ತು ಹಿಂದು ಮಹಿಳೆಯರ ಫಲವತ್ತತೆಯ ಧರ(Fertility Rate) ಎಷ್ಟಿರುತ್ತದೆ ಮತ್ತು ಭವಿಷ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಭಾರತದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆಯೇ ಎಂದು ಪರಿಶೀಲನೆ ನಡೆಸಿದ್ದೇವೆ.

ಈ ಲೇಖನ ಓದಿ: ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು

ವಾಸ್ತವದಲ್ಲಿ, ಸರ್ಕಾರದ ಸ್ವಂತ ದತ್ತಾಂಶದ ಪ್ರಕಾರ, ಭಾರತದಲ್ಲಿನ ಎಲ್ಲಾ ಪ್ರಮುಖ ಧಾರ್ಮಿಕ ಗುಂಪುಗಳಲ್ಲಿ ಮುಸ್ಲಿಂ ಫಲವತ್ತತೆ ದರಗಳು ವೇಗವಾಗಿ ಕುಸಿಯುತ್ತಿವೆ. 1992 ಮತ್ತು 2021 ರ ನಡುವೆ ಮುಸ್ಲಿಮರಲ್ಲಿ ಫಲವತ್ತತೆ ದರ – ಮಹಿಳೆಯು ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ – 4.41 ರಿಂದ 2.36 ಕ್ಕೆ ಇಳಿದಿದ್ದರೆ, ಹಿಂದೂಗಳಿಗೆ ಇದು 3.3 ರಿಂದ 1.94 ಕ್ಕೆ ಇಳಿದಿದೆ.

ನಾಗರೀಕ ನೊಂದಾಣಿ ವ್ಯವಸ್ಥೆ (CRS) ಹೇಳಿಕೆಯ ಪ್ರಕಾರ ಕೇಂದ್ರ ಗೃಹ ಸಚಿವಾಲಯ ಜನನ-ಮರಣ ನೊಂದಾಣಿ ಪ್ರಕ್ರಿಯೆಯನ್ನು ಮಾಡುತ್ತದೆ, ಆದರೆ ಅದರ ಮಾಹಿತಿ ಯಾವುದೇ ಧರ್ಮದ ಆಧಾರದ ಮೇಲೆ ಲಭಿಸುವುದಿಲ್ಲ. NHFS-5ರ ವರದಿಯಂತೆ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3 ನಿಂದ 1.9 ಗೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ ಸಹ 4.4 ನಿಂದ 2.3ಗೆ ಕುಸಿದಿದೆ2030ರ ವೇಳೆಗೆ ಎರಡೂ ಧರ್ಮದ ಫಲವತ್ತತೆಯ ದರ ಸಮಾನಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ.

2040 ಅಥವಾ 2050 ರಷ್ಟರಲ್ಲಿ ಭಾರತ ಮುಸ್ಲಿಂ ರಾಷ್ಟ್ರ ಆಗಿರುತ್ತದೆ. ಹಿಂದುಗಳು ಅಲ್ಪಸಂಖ್ಯಾತರಾಗಿರುತ್ತಾರೆ ಎಂಬ ಹೇಳಿಕೆಗಳು ಬಾಲೀಷವಾಗಿವೆ. ಇಂತಹ ಸಂದೇಶಗಳು ಆಧಾರಗಳಿಲ್ಲದ ಕಟ್ಟುಕಥೆಗಳಾಗಿವೆ.

ಭಾರತದ 2011ರ ಜನಗಣತಿಯ ಪ್ರಕಾರ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಕೇವಲ ‘14.2%’ ಇದೆ. ಆದರೆ ಬಹುಸಂಖ್ಯಾತರಾದ ಹಿಂದುಗಳ ಜನಸಂಖ್ಯೆ ಸುಮಾರು 78.9% ರಷ್ಟಿದೆ.

2024 ರ ಹೊತ್ತಿಗೆ, ಭಾರತದಲ್ಲಿ ಅಂದಾಜು ಮುಸ್ಲಿಂ ಜನಸಂಖ್ಯೆಯು ಸುಮಾರು 20 ಕೋಟಿ (200 ಮಿಲಿಯನ್) ಆಗಲಿದೆ, ವಿಶ್ವಸಂಸ್ಥೆಯ ಪ್ರಕಾರ ಒಟ್ಟು ಭಾರತೀಯ ಜನಸಂಖ್ಯೆ 144 ಕೋಟಿ (1.44 ಶತಕೋಟಿ)ಯಷ್ಟಿದೆ. ಭಾರತವು 2050ರ ವೇಳೆಗೆ 310 ಮಿಲಿಯನ್(31 ಕೋಟಿ) ಮುಸ್ಲಿಮರನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಮುಸ್ಲಿಮರ ಪಾಲು 1950 ಮತ್ತು 2015 ರ ನಡುವೆ ಭಾರತದ ಜನಸಂಖ್ಯೆಯ 9.84% ರಿಂದ 14.09% ಕ್ಕೆ ಏರಿತು. ಕೇಂದ್ರ ಬಿಜೆಪಿ ಸರ್ಕಾರ 2021ರ ಜನಗಣತಿಯನ್ನು ನಡೆಸದ ಕಾರಣ ಸಧ್ಯ ಭಾರತೀಯ ಜನಸಂಖ್ಯೆ, ಅದರಲ್ಲಿಯೂ ಧರ್ಮಾಧಾರಿತ ಜನಸಂಖ್ಯೆಗಳ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಿಲ್ಲದಾಗಿದೆ.

2024 ರ ಹೊತ್ತಿಗೆ, ಭಾರತವು ವಿಶ್ವದ ಅತಿದೊಡ್ಡ ಹಿಂದೂ ಜನಸಂಖ್ಯೆಯನ್ನು ಹೊಂದಿದೆ, ಸುಮಾರು 1.094 ಶತಕೋಟಿ ಅನುಯಾಯಿಗಳನ್ನು ಹೊಂದಿದೆ, ಇದು ಭಾರತದ ಬೃಹತ್ ಜನಸಂಖ್ಯೆಯ 78.9% ರಷ್ಟಿದೆ. ಸುಮಾರು 95% ವಿಶ್ವದ ಹಿಂದೂಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹವಾಗಿದೆ. ಎಂದು ವರ್ಡ್‌ ಪಾಪುಲೆಷನ್ ರಿವ್ಯೂ ವರದಿ ಮಾಡಿದೆ. 

ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಬಿಜೆಪಿ ಸರ್ಕಾರ ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯು ಧರ್ಮಾಧಾರಿತ ಜನಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಇದು ದೋಷಪೂರಿತವಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. 2021ರಲ್ಲಿ ಭಾರತದಲ್ಲಿ ನಡೆಯಬೇಕಾದ ಸಾರ್ವತ್ರಿಕ ಜಾತಿಜನಗಣತಿಯನ್ನು ನಡೆಸದೇ ಆಡಳಿತರೂಢ ಸರ್ಕಾರಗಳು ತಮಗೆ ಬೇಕಾದಂತೆ ಅಂಕಿ ಅಂಶಗಳನ್ನು ಬಳಸಿಕೊಂಡು ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ಸ್ಪಷ್ಟವಾಗಿದೆ.

ಆದ್ದರಿಂದ ಯಾರೇ ಮುಂಬರುವ ದಿನಗಳಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಪ್ರಚಾರ ಪಡಿಸುವಾಗ ಅದನ್ನು ನಂಬದಿರಿ. ಸಣ್ಣ ಸಂಶೋಧನೆ ನಡೆಸಿ ನಿರ್ಧಾರಕ್ಕೆ ಬನ್ನಿ. ಭಾರತದಲ್ಲಿ ಹಿಂದುಗಳ ಜನಸಂಖ್ಯೆ ಮುಸ್ಲಿಮರ ಜನಸಂಖ್ಯೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಿರುವುದರಿಂದ ಹಿಂದುಗಳ ಜನಸಂಖ್ಯೆಯನ್ನು ಮೀರಿ ಮುಸ್ಲಿಂ ಜನಸಂಖ್ಯೆ ಮುಂಬರುವ ದಿನಗಳಲ್ಲಿ ಹೆಚ್ಚಾಗಲು ಸಾಧ್ಯವಿಲ್ಲ ಎಂಬುದನ್ನು ಓದುಗರು ಇಲ್ಲಿ ಮನಗಾಣಬೇಕು.


ಇದನ್ನು ಓದಿ: 2041ರ ಹೊತ್ತಿಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.84 ರಷ್ಟು ಏರಿಕೆಯಾಗಲಿದೆ ಎಂಬುದು ಸುಳ್ಳು


ವೀಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ |


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *