Fact Check | ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಎಂದು ಹೋಟೆಲ್‌ ವಿಡಿಯೋ ಹಂಚಿಕೆ

ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರ ಪಲಾಯನದ ನಂತರ ಆ ದೇಶ ಅಕ್ಷರ ನಲುಗಿ ಹೋಗಿದೆ. ಈಗ ಅಲ್ಲಿ ಉದ್ರಿಕ್ತತೆಯ ವಾತಾವರಣವಿದ್ದು, ಇದೇ ವೇಳೆ ಹಲವು ರೀತಿಯ ಸುಳ್ಳು ಸುದ್ದಿಗಳು ಕೂಡ ವ್ಯಾಪಕವಾಗಿ ಹಬ್ಬುತ್ತಿವೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು ಮತ್ತು ಹಿಂದೂ ದೇವಾಲಯಗಳ ಮೇಲಿನ ದಾಳಿಯ ಕುರಿತು ಕೂಡ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ.

ಇದೀಗ ಇಂತಹದ್ದೇ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ “ಈ ವಿಡಿಯೋ ನೋಡಿ ಇದೊಂದು ಹಿಂದೂ ದೇವಾಲಯ. ಇಂದು ಬಾಂಗ್ಲಾದೇಶದಲ್ಲಿ ಹಿಂದುಗಳು ಅತಂತ್ರರಾಗಿದ್ದಾರೆ. ಹಿಂದೂ ದೇವಾಲಯಗಳನ್ನ ಕಂಡ ಕಂಡಲ್ಲಿ ಸುಟ್ಟುಹಾಕುತ್ತಿದ್ದಾರೆ.” ಎಂದು ಕಟ್ಟಡವೊಂದು ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತದೆ. ಈ ವಿಡಿಯೋ ಕುರಿತು ಪರಿಶೀಲನೆ ನಡೆಸದೆ ಸಾಕಷ್ಟು ಮಂದಿ ನಿಜವೆಂದು ನಂಬಿದ್ದಾರೆ. ಹೀಗೆ ವೈರಲ್ ಆಗಿರುವ  ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್ ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ವಿವಿಧ ಈ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 5 ಆಗಸ್ಟ್ 2024 ರಂದು ಕಲ್ಬೇಲ ಎಂಬ ಬಾಂಗ್ಲಾದೇಶದ ಸುದ್ದಿ ವೆಬ್ ತಾಣವೊಂದರ ವರದಿಯೊಂದು ಕಂಡು ಬಂದಿದೆ. ಈ ವರದಿಯಲ್ಲಿ ವೈರಲ್ ಪೋಸ್ಟ್ ನಲ್ಲಿ ಹಂಚಿಕೊಂಡ ಅಂಶಗಳ ಉಲ್ಲೇಖವೇ ಇಲ್ಲದಿರುವುದು ಕಂಡುಬಂದಿದೆ.

ಕಲ್ಬೇಲ ವರದಿಯ ಪ್ರಕಾರ ಶೇಕ್ ಹಸೀನಾ ಅವರು ಬಾಂಗ್ಲಾದೇಶದಿಂದ ನಿರ್ಗಮಿಸಿದ ನಂತರ ಹಲವಾರು ಸ್ಥಳಗಳಲ್ಲಿ ಜನರು ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಗಳನ್ನು ದ್ವಂಸಗೊಳಿಸುವುದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಈ ವರದಿಯಲ್ಲಿ ಬೆಂಕಿಯಲ್ಲಿ ಸುಡುತ್ತಿರುವ ಕಟ್ಟಡದ ಕುರಿತು ಸತ್ಖಿರಾದಲ್ಲಿನ ವಿವಿಧ ಸ್ಥಳಗಳಲ್ಲಿನ ದಾಳಿಯ ಚಿತ್ರ ಎಂದು ಅಡಿಬರಹವನ್ನು ನೀಡಲಾಗಿದೆ.

ಈ ಶೀರ್ಷಿಕೆಯನ್ನು ಆಧಾರಿಸಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ ಸುಮಾರು ಏಳು ತಿಂಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ ಹಲವಾರು ವಿಡಿಯೋಗಳು ಅದೇ ಕಟ್ಟಡವನ್ನು ಹೋಲುವಂತೆ ಕಂಡು ಬಂದವು. ಆ ವಿಡಿಯೋಗಳಲ್ಲಿ ರಾಜ್ ಪ್ರಸಾದ್‌ ರೆಸ್ಟೋರೆಂಟ್ ಕಲಾರೋವಾ ಸತ್ಖಿರಾ ಎಂದು ಬರೆಯಲಾಗಿತ್ತು. ಮತ್ತೊಂದು ವಿಡಿಯೋದಲ್ಲಿ “ನೂರು ಕೋಟಿ ವೆಚ್ಚದ ಅರಮನೆಯನ್ನು ನಿರ್ಮಿಸಲಾಗಿದೆ, ಇದರ ಮಾಲಿಕ ರಾಜ್ ಪ್ರಸಾದ್” ಎಂದು ಬರೆಯಲಾಗಿತ್ತು. ಈ ಅಂಶಗಳು ವೈರಲ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಕಟ್ಟಡ ಹಿಂದೂ ದೇವಾಲಯವಲ್ಲ ಬದಲಿಗೆ ಅದೊಂದು ರೆಸ್ಟೋರೆಂಟ್ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದ ಗಲಭೆಯಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋ ಹೋಟೆಲ್ ಒಂದರ ಚಿತ್ರವಾಗಿದ್ದು, ಆ ಮೂಲಕ ಸುಳ್ಳು ಸುದ್ದಿ ಹಾಗೂ ಕೋಮು ದ್ವೇಷವನ್ನು ಭಿತ್ತಲು ಪ್ರಯತ್ನಿಸಲಾಗುತ್ತಿದೆ. ಇಂತಹ ಸುಳ್ಳು ಮಾಹಿತಿಯುಳ್ಳ ವಿಡಿಯೋಗಳನ್ನು ಶೇರ್‌ ಮಾಡುವುದು ಅಪರಾದವಾಗಿದೆ.


ಇದನ್ನೂ ಓದಿ :Fact Check |ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಪ್ರತಿಭಟನೆಯ ಹಳೆಯ ವಿಡಿಯೋವನ್ನು ಹಿಂದೂ ವಿದ್ಯಾರ್ಥಿನಿ ಮೇಲೆ ಹಲ್ಲೆ ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *