ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಕಾದು ಕುಳಿತ ಹಿಂದೂ ನಿರಾಶ್ರಿತರು ಎಂದು ಸುಳ್ಳು ಸುದ್ದಿ ಹರಡಿದ ಸುವರ್ಣ ನ್ಯೂಸ್

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಅಲ್ಲಿನ ಪ್ರಧಾನ್ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಆನಂತರ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಎಲ್ಲೆಲ್ಲೂ ಅರಾಜಕತೆ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಕೋಮು ಗಲಭೆ ಉಂಟು ಮಾಡುವ, ಪ್ರಚೋದನಾಕಾರಿಯಾದ ಸುಳ್ಳು ಸುದ್ದಿಗಳು ಸಹ ಹೆಚ್ಚಾಗಿ ಹರಡುತ್ತಿವೆ. ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಕಾದು ಕುಳಿತ ಹಿಂದೂ ನಿರಾಶ್ರಿತರು ಎಂದು ಸುವರ್ಣ ನ್ಯೂಸ್ ವರದಿ ಮಾಡಿದ್ದು ಮೂರು ಫೋಟೊಗಳ ಕೊಲಾಜ್ ಒಂದನ್ನು ಪ್ರಕಟಿಸಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಗೂಗಲ್ ಲೆನ್ಸ್‌ನಲ್ಲಿ ಸುವರ್ಣ ನ್ಯೂಸ್ ಪ್ರಕಟಿಸಿದ ಚಿತ್ರದ ಸ್ಕ್ರೀನ್ ಶಾಟ್‌ ಅನ್ನು ಹಾಕಿ ಹುಡುಕಿದಾಗ ಅದೇ ಚಿತ್ರವನ್ನು ತೋರಿಸುವ ಹತ್ತಾರು ವರದಿಗಳು, ಟ್ವಿಟರ್ ಪೋಸ್ಟ್‌ಗಳು ಕಂಡುಬಂದಿವೆ. 𝐂𝐇𝐈𝐊𝐈𝐌-𝐓𝐄-𝐀𝐖𝐆𝐈𝐍 ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ ಇಂದು ಸುವರ್ಣ ನ್ಯೂಸ್ ಪ್ರಕಟಿಸಿರುವ ನಿರಾಶ್ರಿತರ ಚಿತ್ರವನ್ನು ಮೇ19- 20, 2024ರಂದೇ ಪ್ರಕಟಿಸಿದೆ. ಆಹಾರ ಖರೀದಿಗೆ ಅವಕಾಶ ನೀಡದೆ, ಚಿತ್ರಹಿಂಸೆ ಮತ್ತು ಅನಿಯಂತ್ರಿತ ಬಂಧನದ ಮೂಲಕ ಬಾಂಗ್ಲಾದೇಶ ಸೇನೆಯಿಂದ ಬಾಂಗ್ಲಾದೇಶದ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶದಲ್ಲಿನ ಜನರ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ” ಎಂಬ ಬರಹದೊಂದಿಗೆ ಆ ಫೋಟೊ ಜೊತೆ ಹಲವು ಫೋಟೊಗಳನ್ನು ಮೂರು ತಿಂಗಳ ಹಿಂದೆಯೇ ಹಂಚಿಕೊಳ್ಳಲಾಗಿದೆ. ಅದನ್ನು ಈ ಕೆಳಗೆ ನೋಡಬಹುದು.

ಈ ಕುರಿತು ಮತ್ತಷ್ಟು ಹುಡುಕಿದಾಗ ಮೇ 20 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯೊಂದು ಕಂಡುಬಂದಿದ್ದು, ಅಲ್ಲಿಯೂ ಇದೇ ಚಿತ್ರವನ್ನು ಬಳಸಲಾಗಿದೆ. “ಬಾಂಗ್ಲಾದೇಶದ ಚಿತ್ತಗಾಂಗ್ ಹಿಲ್ ಟ್ರಾಕ್ಟ್ಸ್‌ನಿಂದ ಕನಿಷ್ಠ 65 ನಿರಾಶ್ರಿತರು ಭಾನುವಾರ ದಕ್ಷಿಣ ಮಿಜೋರಾಂನ ಲಾಂಗ್ಟ್ಲೈಗೆ ಆಗಮಿಸಿದ್ದಾರೆ. ಇದರಿಂದ ಅವರ ಒಟ್ಟು ಜನಸಂಖ್ಯೆ ಇದುವರೆಗೆ 1,433 ಕ್ಕೆ ತಲುಪಿದೆ. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಸಮೀಪದ ಮೌಟ್ಲಾಂಗ್ ಗ್ರಾಮದಲ್ಲಿ ಸ್ವಲ್ಪ ಸಮಯದ ನಂತರ ನಿರಾಶ್ರಿತರು ಜಿಲ್ಲೆಯ ವಥುಮ್ಪುಯಿ ಗ್ರಾಮವನ್ನು ಪ್ರವೇಶಿಸಿದ್ದಾರೆ ಎಂದು ಲಾಂಗ್ಟ್ಲೈ ಅಧಿಕಾರಿಗಳು ತಿಳಿಸಿದ್ದಾರೆ. ನಿರಾಶ್ರಿತರಲ್ಲಿ 38 ಪುರುಷರು ಮತ್ತು 27 ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಮತ್ತು ಅನಾರೋಗ್ಯ ಪೀಡಿತರು ಸೇರಿದ್ದಾರೆ” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾಗಾಗಿ ಸುವರ್ಣ ನ್ಯೂಸ್ ಹಂಚಿಕೊಂಡಿರುವ ಚಿತ್ರವು ಬಾಂಗ್ಲಾದೇಶದ ಚಿತ್ತಗಾಂಗ್ ಹಿಲ್ ಟ್ರಾಕ್ಟ್ಸ್‌ನಿಂದ ದಕ್ಷಿಣ ಮಿಜೋರಾಂನ ಲಾಂಗ್ಟ್ಲೈಗೆ ಮೂರು ತಿಂಗಳ ಹಿಂದೆ ಬಂದ ನಿರಾಶ್ರಿತರ ಫೋಟೊ ಎಂಬುದು ಖಚಿತವಾಗಿದೆ. ಆದರೆ ಅದನ್ನು ಇತ್ತೀಚಿನ ಬಾಂಗ್ಲಾ ಹಿಂಸಾಚಾರದಿಂದ ನೊಂದ ಹಿಂದೂ ನಿರಾಶ್ರಿತರು ಭಾರತ ಪ್ರವೇಶಕ್ಕೆ ಕಾದು ಕುಳಿತಿದ್ದಾರೆ ಎಂದು ತಪ್ಪಾಗಿ ಸುಳ್ಳು ಸುದ್ದಿ ಹರಡಿದೆ.

ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಯಾಗಿರುವುದು ನಿಜ. ಅದು ಖಂಡನೀಯ. ಅಲ್ಲಿನ ಹಿಂಸಾಚಾರ ನಿಂತು ಶಾಂತಿ ನೆಲೆಸಬೇಕಿದೆ. ಆದರೆ ಆ ಹಿನ್ನೆಲೆಯಲ್ಲಿ ಹತ್ತಾರು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡು ಕೋಮು ಗಲಭೆಗೆ ಪ್ರಚೋದನೆ ನೀಡಲಾಗುತ್ತಿರುವುದು ಅಕ್ಷಮ್ಯ. ಈಗಾಗಲೇ ಬಾಂಗ್ಲಾ ಹಿಂಸಾಚಾರಕ್ಕೆ ಸಂಬಂಧಿಸಿದ ಹಲವು ಸುಳ್ಳು ಸುದ್ದಿಗಳನ್ನು ನಾವು ಬಯಲು ಮಾಡಿದ್ದೇವೆ. ಅವುಗಳನ್ನು ಇಲ್ಲಿ ಓದಬಹುದು.

ನಿಮಗೆ ಯಾವುದೇ ಸುದ್ದಿ ಕಂಡುಬಂದಲ್ಲಿ ಪರಿಶೀಲಿಸದೆ ಹಂಚಿಕೊಳ್ಳಬೇಡಿ. ಫ್ಯಾಕ್ಟ್ ಚೆಕ್ ಮಾಡಲು ನಮಗೆ ಕಳಿಸಿ. (ವಾಟ್ಸಾಪ್ ನಂಬರ್‌ 7892502991)


ಇದನ್ನೂ ಓದಿ: Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಾಲಿಕತ್ವದ ಅಂಗಡಿಯಿಂದ ಸಿಲಿಂಡರ್‌ ಲೂಟಿ ಮಾಡಲಾಗಿದೆ ಎಂದು ಹಳೆಯ ವೀಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *