“ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ, ಸಕ್ರಿಯ ಮಾನ್ಸೂನ್ ಮತ್ತು ಹಠಾತ್ ಪ್ರವಾಹದ ಕಾರಣದಿಂದಲೂ ಅಟಲ್ ಸುರಂಗದ ಬಳಿ ರಸ್ತೆ ಕುಸಿತಗೊಂಡಿದೆ. ಹೀಗಾಗಿ ಈಗ ಸಂಚಾರ ಅಸ್ತವ್ಯಸ್ಥವಾಗಿದೆ. ಈ ಮಾರ್ಗವಾಗಿ ಪ್ರಯಾಣಿಸುವವರು ಎಚ್ಚರದಿಂದ ಇರಬೇಕು. ಇಲ್ಲವಾದಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ರಸ್ತೆಯೊಂದು ಕುಸಿಯುತ್ತಿರುವುದನ್ನು ಕೂಡ ನೋಡಬಹುದಾಗಿದೆ.
Anything and everything he's ever built is crumbling right before our eyes… Soon we'll be back where we were in 2014… pic.twitter.com/Za5YlEWyHY
— Rajiv Tyagi (@rajivtango) August 3, 2024
ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿದ ಹಲವರು, ಈ ವಿಡಿಯೋ ನಿಜವೆಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ಹಂಚಿಕೊಂಡು ರಾಜಕೀಯ ಟೀಕೆಗೆ ಕೂಡ ಮುಂದಾಗಿದ್ದಾರೆ. ಹೀಗೆ ವೈರಲ್ ಆಗುತ್ತಿರುವ ವಿಡಿಯೋವಿನ ಅಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದಲ್ಲಿ ಹೇಳಲಾದಂತೆ ಅಟಲ್ ಸೇತುವೆ ಅಥವಾ ಸೇತುವೆಯ ಬಳಿ ಯಾವುದಾದರೂ ರಸ್ತೆ ಕುಸಿದಿರುವುದರ ಕುರಿತು ಯಾವುದಾದರು ವರದಿಗಳು ಕಂಡು ಬಂದಿವೆಯೇ ಎಂದು ಪರಿಶೀಲನೆ ನಡೆಸಿದೆವು. ಆದರೆ ಆ ರೀತಿಯಾದ ಯಾವುದೇ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ ಅಂಶ ಅನುಮಾನವನ್ನು ಹುಟ್ಟುಹಾಕಿತ್ತು.
ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ ನಮಗೆ 12 ಅಕ್ಟೋಬರ್ 2023 ರಂದು ಮಾಂಟೆನೆಗ್ರೊ ಮೂಲದ ಮಾಧ್ಯಮ ಕಂಪನಿಯಾದ TV Teuta ಎಂಬ ಫೇಸ್‌ಬುಕ್ ಪುಟದಲ್ಲಿನ ಪೋಸ್ಟ್‌ವೊಂದು ಕಂಡು ಬಂದಿದೆ. “ಡೆಟಿ ಐ ಝಿ (ಕರಾಡೆನಿಜ್) ತುರ್ಕಿ” ಎಂಬ ಶೀರ್ಷಿಕೆ ಕಂಡು ಬಂದಿದ್ದು, ವೈರಲ್ ವಿಡಿಯೋ ಟರ್ಕಿಗೆ ಸಂಬಂಧಿಸಿದ್ದಾಗಿದೆ ಎಂಬುದು ಖಚಿತವಾಗಿದೆ.
ಹೀಗಾಗಿ ನಾವು ಟರ್ಕಿಶ್ ಭಾಷೆಯಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ವೈರಲ್ ವೀಡಿಯೊ ಕುರಿತು ಟರ್ಕಿಶ್ ಮಾಧ್ಯಮದಿಂದ ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ, ಜೂನ್ 2023 ರಲ್ಲಿ ಟರ್ಕಿಯಲ್ಲಿ ಈ ಘಟನೆ ಸಂಭವಿಸಿದೆ. ಟರ್ಕಿಯ ಓರ್ಡುವಿನಲ್ಲಿರುವ ಕಪ್ಪು ಸಮುದ್ರ-ಮೆಡಿಟರೇನಿಯನ್ ರಸ್ತೆಯಲ್ಲಿರುವ ಡಾರಿಕಾಬಾಸಿಯಲ್ಲಿನ ಸುರಂಗದ ಬಳಿ ಸೇತುವೆ ಕುಸಿದಿದೆ ಎಂದು ಕೆಲವು ವರದಿಗಳು ಉಲ್ಲೇಖಿಸಿವೆ.ಚಾನೆಲ್ 5 ಸುದ್ದಿಸಂಸ್ಥೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿ ವಿವರಣೆಯನ್ನು ಕೂಡ ನೀಡಿದೆ, ಹೀಗಾಗಿ ಈ ವಿಡಿಯೋ ಭಾರತದಲ್ಲ ಟರ್ಕಿಯದ್ದು ಎಂಬುದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಭಾರತದಲ್ಲಿ ಭೀಕರ ಮಳೆಗೆ ಅಟಲ್ ಟನಲ್‌ನ ರಸ್ತೆಯೊಂದು ಕುಸಿದು ಬಿದ್ದಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋಗೂ ಭಾರತಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಆ ವಿಡಿಯೋ ಟರ್ಕಿಯದ್ದಾಗಿದೆ.
ಇದನ್ನೂ ಓದಿ : Fact Check: ಮೀಸಲಾತಿ ಮತ್ತು ಅಗ್ನಿವೀರ್ ಯೋಜನೆಗಳ ಬಗ್ಗೆ ಅನುರಾಗ್ ಠಾಕೂರ್ ಅವರು ತಪ್ಪುದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ