ಬಾಂಗ್ಲಾದೇಶದಲ್ಲಿ ನಿರ್ಮಾಣವಾಗಿರುವ ಅರಾಜಕ ಪರಿಸ್ಥಿತಿಯ ನಡುವೆ ಮಧ್ಯಂತರ ಸರ್ಕಾರದ ರಚನೆಯ ಪ್ರಕ್ರಿಯೆ ಜಾರಿಯಲ್ಲಿದೆ. ಈ ನಡುವೆ “ನಮ್ಮ ಅಮಾಯಕ ಸಹೋದರ ಸಹೋದರಿಯರನ್ನು ಕೊಲ್ಲಲು ಸರ್ಕಾರ ಬಾಡಿಗೆಗೆ ಖರೀದಿಸಿದ ಭಾರತೀಯ ಪೊಲೀಸರು ಈಗ ಬಾಂಗ್ಲಾದೇಶವನ್ನು ತೊರೆಯುತ್ತಿದ್ದಾರೆ” ಎಂದು ಬಂಗಾಳಿ ಭಾಷೆಯಲ್ಲಿ ಬರೆದು ವಿಡಿಯೋವೊಂದನ್ನು ಹರಿಯಬಿಡಲಾಗುತ್ತಿದೆ.
ವಿಡಿಯೋದಲ್ಲೇನಿದೆ?
ಈ ವಿಡಿಯೋದಲ್ಲಿ ವಿಮಾನ ನಿಲ್ದಾಣವೊಂದರಲ್ಲಿ ಸಶಸ್ತ್ರ ಪಡೆಯ ಪೊಲೀಸರು ಅತ್ತಿತ್ತ ಓಡಾಡುತ್ತಿರುವ ದೃಶಗಳಿವೆ.
“ಭಾರತೀಯ ಪೊಲೀಸರು. ನಮ್ಮ ದೇಶವನ್ನು ತೊರೆಯುತ್ತಿದ್ದಾರೆ. ನಮ್ಮ ಎಷ್ಟು ತಾಯಂದಿರ ಮಡಿಲನ್ನು ಬರಿದಾಗಿಸಿದ್ದಾರೋ ದೇವರೇ ಬಲ್ಲ. ಚೇತನಾ ಲೀಗ್‌ನವರು ಈಗ ಏನು ಹೇಳ್ತಾರೆ. ಈ ಪೊಲೀಸರು ನಮ್ಮ ಅಸಂಖ್ಯಾತ ಮಾತೆಯರ ಮುಖಕ್ಕೆ ಮಸಿ ಬಳಿದಿರಬಹುದು. ನಮ್ಮದೇ ದೇಶದ ಅಮಾಯಕ ಸಹೋದರ ಸಹೋದರಿಯನ್ನು ಕೊಲ್ಲಲು ಬೇರೆ ದೇಶದ ಬಾಡಿಗೆ ಪಡೆಗಳನ್ನು ಖರೀದಿಸಿರುವುದು ನಮ್ಮ ದೇಶದ ದೌರ್ಭಾಗ್ಯ” ಎಂದು ಬಂಗಾಳಿ ಭಾಷೆಯಲ್ಲಿ ಬರೆದು ಹಂಚಿಕೊಳ್ಳಲಾಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣ Xನಲ್ಲಿ (ಟ್ವಿಟರ್) 1.4 ಲಕ್ಷ ಜನರು ವೀಕ್ಷಿಸಿದ್ದಾರೆ.
ಫ್ಯಾಕ್ಟ್ ಚೆಕ್
ವಿಮಾನ ನಿಲ್ದಾಣದಲ್ಲಿ ಚಿತ್ರಿಸಲಾದ ಈ ವಿಡಿಯೋದ ಸತ್ಯಾಂಶ ತಿಳಿಯಲು ಬಂಗಾಳಿ ಭಾಷೆಯಲ್ಲಿ ಬಾಂಗ್ಲಾದೇಶ ವಿಮಾನ ನಿಲ್ದಾಣ ಸಶಸ್ತ್ರ ಪಡೆ ಎಂಬ ಕೀವರ್ಡ್ ಬಳಸಿ ಹುಡುಕಿದಾಗ ಇಂತಹುದೇ ವಿಡಿಯೋ ಹಾಗೂ ಚಿತ್ರಗಳನ್ನು ಕಾಣಬಹುದು.
ಈ ವಿಡಿಯೋದಲ್ಲಿ ಕಂಡು ಬರುವ ಪೊಲೀಸರು ಬಾಂಗ್ಲಾದೇಶದ ಏರ್‌ಪೋರ್ಟ್ ಸಶಸ್ತ್ರ ಪೊಲೀಸ್ ಬೆಟಾಲಿಯನ್ (AAPB)ನ ಪಡೆಯಾಗಿದ್ದು, ಭಾರತೀಯ ಪೊಲೀಸ್ ಸಿಬ್ಬಂದಿ ಅಲ್ಲ ಎಂಬುದು ಸಾಬೀತಾಗಿದೆ. WebQoof ಟೀಮ್‌ನ ಅನ್ವೇಷಣೆಯ ಪ್ರಕಾರ ಈ ವಿಡಿಯೋ “EKHON TV” ದೃಶ್ಯಗಳೆಂದು ತಿಳಿದು ಬಂದಿದೆ. ಈ ವಿಡಿಯೋವನ್ನು ಆಗಸ್ಟ್ 4 ರಂದು ಎಖೋನ್ ಟಿವಿ ಹಂಚಿಕೊಂಡಿದ್ದು, “ಶಹಜಲಾಲ್ ಏರ್‌ಪೋರ್ಟ್, ಢಾಕಾ ಏರ್‌ಪೋರ್ಟ್‌ನಲ್ಲಿ ಹೆಚ್ಚಿದ ಭದ್ರತೆ” ಎಂಬ ಬಂಗಾಳಿ ತಲೆ ಬರಹದೊಂದಿಗೆ ವರದಿ ಮಾಡಿದೆ.
ಹಾಗಾಗಿ ಭಾರತೀಯ ಪೊಲೀಸರು ಬಾಂಗ್ಲಾದೇಶ ತೊರೆಯುತ್ತಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋದಲ್ಲಿ ಕಂಡುಬಂದವರು ಬಾಂಗ್ಲಾದೇಶದ ಏರ್‌ಪೋರ್ಟ್ ಸಶಸ್ತ್ರ ಪೊಲೀಸ್ ಬೆಟಾಲಿಯನ್ (AAPB)ನ ಪಡೆಯ ಪೊಲೀಸರಾಗಿದ್ದಾರೆ.
ಇದನ್ನೂ ಓದಿ; ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಕಾದು ಕುಳಿತ ಹಿಂದೂ ನಿರಾಶ್ರಿತರು ಎಂದು ಸುಳ್ಳು ಸುದ್ದಿ ಹರಡಿದ ಸುವರ್ಣ ನ್ಯೂಸ್
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.