ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ- ಪಲಾಯನದ ಬಳಿಕ ದೇಶದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದು ಈ ನಡುವೆ ಕೋಮು ಬಣ್ಣ ಬಳಿದು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಪ್ರಕ್ರಿಯೆ ಎಗ್ಗಿಲ್ಲದೆ ಸಾಗುತ್ತಿದೆ. ಲಕ್ಷ್ಮೀಪುರ ಮಾರುಕಟ್ಟೆಯಲ್ಲಿ ಹಿಂದೂ ವ್ಯಕ್ತಿಯ ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಗ್ನಿ ಅವಘಡದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
ಅಗ್ನಿ ಅವಘಡಕ್ಕೆ ಕೋಮುಬಣ್ಣ ಬಳಿದ ಸುದರ್ಶನ್ ನ್ಯೂಸ್!
ಈ ಘಟನೆಯ ಬಗ್ಗೆ ಬಲಪಂಥೀಯ ವಾಹಿನಿ ಸುದರ್ಶನ್ ನ್ಯೂಸ್ ವಿಡಿಯೋವೊಂದನ್ನು X ನಲ್ಲಿ ಕೋಮು ಬಣ್ಣ ಬಳಿದು ಪೋಸ್ಟ್ ಮಾಡಿದ್ದು,
“ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ…
ಲಕ್ಷ್ಮಿಪುರದಲ್ಲಿ, ಹಿಂದೂ ವ್ಯಕ್ತಿ ರಾಜನ್ ಚಂದ್ರರವರಿಗೆ ಸೇರಿದ ಅಂಗಡಿಯನ್ನು ಸುಟ್ಟು ಬೂದಿ ಮಾಡಲಾಗಿದೆ. … ರಾಜನ್ ಚಂದ್ರ ಮತ್ತು ಅವರ ಕುಟುಂಬದವರು ಸಂಕಟದಲ್ಲಿದ್ದಾರೆ. ಅವರ ಅಂಗಡಿ, ಅವರ ಏಕೈಕ ಜೀವನೋಪಾಯದ ಮೂಲವಾಗಿತ್ತು ಈಗ ಅದು ಸುಟ್ಟು ಬೂದಿಯಾಗಿದೆ… ” ಎಂದು ಕೋಮುಬಣ್ಣ ಬಳಿದು ಹಂಚಿಕೊಂಡಿದೆ.
बांग्लादेश में हिंदुओं पर हमले…
लक्ष्मीपुर में हिंदू दुकानदार राजन चंद्रा की दुकान को जलाकर राख कर दिया गया है…
राजन चंद्रा और उनका परिवार तड़प रहा है, बिलख रहा है और उनकी रोटी का एकमात्र साधन उनकी दुकान धू-धूकर जल रही है…#bangladeshnews #dhaka #BangladeshCrisis… pic.twitter.com/qNwN1nTC0O
— Sudarshan News (@SudarshanNewsTV) August 7, 2024
ಸತ್ಯಾಂಶ ಏನು ?
ಲಕ್ಷ್ಮೀಪುರ ಗ್ರಾಮದ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಿಂದೂ ಮುಸ್ಲಿಂ ಮಾಲೀಕರಿಗೆ ಸೇರಿದ್ದ ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದು ಈ ಘಟನೆ ಜುಲೈ 11ರಂದು ನಡೆದಿತ್ತು.
ಬಾಂಗ್ಲಾದೇಶದ ಲಕ್ಷ್ಮೀಪುರ ಗ್ರಾಮದ ಮೋಜು ಚೌಧರಿ ಹಾತ್ ನಲ್ಲಿ ಕೆಲವು ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆಯ ಬಗ್ಗೆ ವರದಿಯಾಗಿದ್ದು, ಬೋನಿಕ್ ಬರ್ತಾ ಅವರ ವರದಿಯ ಪ್ರಕಾರ ಸುಮಾರು 15 ಅಂಗಡಿಗಳನ್ನು ಸುಟ್ಟು ಹೋಗಿರುವುದಾಗಿ ತಿಳಿಸಿತ್ತು ಹಾಗೂ ಸ್ಥಳೀಯ ಸಂಸದ ನೂರ್ ಉದ್ದೀನ್ ಚೌಧರಿ ನಯಾನ್ ಸಂತ್ರಸ್ತರಿಗೆ ನಷ್ಟ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು.
ಬಾಂಗ್ಲಾ ನ್ಯೂಸ್ 24ನ ವರದಿಯ ಪ್ರಕಾರ” ಅಪು ಸ್ಟೋರ್ ನ ಅಮ್ಜದ್ ಹುಸೇನ್ ಅಪು, ಉಮರ್ ಸ್ಟೋರ್ ನ ಮಾಲೀಕರಿಬ್ಬರ 23 ಲಕ್ಷ ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳು ಬೆಂಕಿಗಾಹುತಿಯಾದ ಬಗ್ಗೆ ವರದಿ ಮಾಡಿದೆ.
ಶೋಮೋಯ್ ಸಾಂಗ್ಬಾದ್ ವರದಿಯ ಪ್ರಕಾರ ” ಅಬ್ದುಲ್ ಮನ್ನಾನ್ ಮೋಟಾರ್ ಪಾರ್ಟ್ಸ್, ರಕಿಬ್ ಟೈರ್ಸ್, ಸೌರವ್ ಸ್ಟೋರ್ಸ್, ಗ್ಯಾಸ್ ಸಿಲಿಂಡರ್ಸ್, ಎಲೆಕ್ಟ್ರಾನಿಕ್ಸ್” ಅಂಗಡಿಗಳು ಬೆಂಕಿಗೆ ಆಹುತಿಯಾದ ಬಗ್ಗ್ಗೆ ವರದಿ ಮಾಡಿದ್ದು, ಮುಸ್ಲಿಂ ಮಾಲೀಕತ್ವದಲ್ಲಿದ್ದ ಅಂಗಡಿಗಳು ಎಂದು ವರದಿ ಮಾಡಿದೆ. ಇದಲ್ಲದೆ ಈ ಅವಘಡಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಜನರು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು. ಸುದರ್ಶನ್ ನ್ಯೂಸ್ ಅನ್ನು ನಂಬಬೇಡಿ.
ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ರಾಜೀನಾಮೆ ನೀಡಿ ಗುಟ್ಟಾಗಿ ದೇಶದಿಂದ ಪಲಾಯನ ಮಾಡಿದ ಬಳಿಕ ಬಾಂಗ್ಲಾದೇಶವು ಭಾರೀ ಅಶಾಂತಿ ಮತ್ತು ರಾಜಕೀಯ ಅವ್ಯವಸ್ಥೆಗೆ ಜಾರಿತ್ತು. ಈ ನಡುವೆ ದೇಶದ ಕಾನೂನು ಮತ್ತು ಸುವ್ಯವಸ್ಥೆ ಕುಸಿತ, ವಿಧ್ವಂಸಕತೆ, ಲೂಟಿ ಮತ್ತು ಹತ್ಯೆಗಳ ನಡುವೆ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ವರದಿಗಳು ಪ್ರಕಟವಾಗುತ್ತಿದ್ದು, ಆಗಸ್ಟ್ 8 ರಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರನ್ನು ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದರು.
ಇದನ್ನು ಓದಿ:
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಧಾಳಿಯನ್ನು ತೋರಿಸಲು ಗಾಜಾದ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.