ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅನೇಕರು ಪೋಟೋ ಮತ್ತು ವೀಡಿಯೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿಗಳನ್ನು, ಸುಳ್ಳು ಪ್ರತಿಪಾದನೆಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಹಿಂದು ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಸುಳ್ಳು ಹಬ್ಬಿಸಲಾಗಿತ್ತು. ನಂತರ ಹೋಟೆಲ್ ಒಂದಕ್ಕೆ ಬೆಂಕಿ ಬಿದ್ದ ಹಳೆಯ ವೀಡಿಯೋವನ್ನು ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹಂಚಿಕೊಂಡಿದ್ದರು. ಜಿಹಾದಿಗಳು ಕುಟುಂಬದವರನ್ನೆಲ್ಲಾ ಹತ್ಯೆ ಮಾಡಿದ್ದಾರೆ ಎಂದು ಸಂಬಂಧವಿಲ್ಲದ ಘಟನೆಯನ್ನು ಬಾಂಗ್ಲಾದೇಶದ ಹಿಂಸಾಚಾರದ್ದು ಎಂದು ಹಂಚಿಕೊಳ್ಳಲಾಗಿತ್ತು.
ಈಗ ಯೂಟೂಬ್‌ನಲ್ಲಿ ರವೀಂದ್ರ ಜೋಶಿ ಎಂಬ ಬಲಪಂಥೀಯ ಪತ್ರಕರ್ತರೊಬ್ಬರು “ಬಾಂಗ್ಲಾ ಮಾದರಿಯ ದಂಗೆಗೆ ರಾಹುಲ್ ಗಾಂಧಿ ಸ್ಕೆಚ್ ? ಭಯಾನಕ ವರದಿ” ಎಂಬ ವೀಡಿಯೋವೊಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ರವೀಂದ್ರ ಜೋಶಿಯವರು ರಾಹುಲ್ ಗಾಂಧೀಯವರು ತಮ್ಮ ಲಂಡನ್ ಪ್ರವಾಸದ ವೇಳೆ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಮುಖ್ಯಸ್ಥ ಹಾಗೂ ಮಾಜಿ ಬಾಂಗ್ಲಾದೇಶದ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅವರನ್ನು ಭೇಟಿಯಾಗಿದ್ದಾರೆ. ಮತ್ತು ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲಿ ದಂಗೆ ನಡೆಸಲು ಸಂಚು ರೂಪಿಸಿದ್ದಾರೆ. ಹಾಗೆಯೇ ಬಾಂಗ್ಲಾದೇಶದ ಹಿಂದುಗಳ ಮೇಲಿನ ದಾಳಿಗೆ ರಾಹುಲ್ ಹಸಿರು ನಿಶಾನೆ ತೋರಿದ್ದಾರೆ” ಎಂಬ ಆರೋಪವನ್ನು ಮಾಡಿದ್ದಾರೆ. ಈ ವೀಡಿಯೋವನ್ನು ಒಂದು ದಿನದ ಅಂತರದಲ್ಲಿ 85 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಹಾಗಾದರೆ ರವೀಂದ್ರ ಜೋಶಿಯವರ ಆರೋಪ ನಿಜವೇ ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್:
ನಾವು ರಾಹುಲ್ ಗಾಂಧಿ ಲಂಡನ್ ಭೇಟಿಯ ವೇಳೆ ತಾರಿಕ್ ರೆಹಮಾನ್ ಅವರನ್ನು ಭೇಟಿಯಾದ ಕುರಿತು ಹುಡುಕಿದಾಗ, ಇಬ್ಬರು ಭೇಟಿಯಾದ ಕುರಿತು ಯಾವುದೇ ವಿಶ್ವಾಸರ್ಹ ಮಾಧ್ಯಮಗಳು ವರದಿ ಮಾಡಿಲ್ಲದಿರುವುದು ಕಂಡು ಬಂದಿದೆ.
ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಚರ್ಚೆಯೊಂದರಲ್ಲಿ ಬಾಂಗ್ಲಾದೇಶದ ಬ್ಲಿಟ್ಜ್-ಸಿಟ್ಟಿಂಗ್ ಸಂಪಾದಕರಾಗಿರುವ ಸಲಾವುದ್ದೀನ್ ಚೌಧರಿ ಅವರು ಈ ಆರೋಪವನ್ನು ಮೊದಲಿಗೆ ಮಾಡಿದ್ದಾರೆ. ನಂತರ ಸಲಾವುದ್ದೀನ್ ಚೌಧರಿ ಅವರ ಹೇಳಿಕೆಯ ಆಧಾರದ ಮೇಲೆ ಬಿಜೆಪಿ ರಾಷ್ಟ್ರೀಯ ವಕ್ತಾರ ತುಹಿನ್ ಸಿನ್ಹಾ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಕುರಿತು ಸ್ಪಷ್ಟನೆ ನೀಡುವಂತೆ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.
ತುಹಿನ್ ಸಿನ್ಹಾ ಮಾತನಾಡಿ, “ರಾಹುಲ್ ಗಾಂಧಿ ಮತ್ತು ಖಲೀದಾ ಜಿಯಾ ಅವರ ಪುತ್ರ ಕಳೆದ ತಿಂಗಳು ಲಂಡನ್ ನಲ್ಲಿ ಭೇಟಿಯಾದರು ಎಂದು ಬಾಂಗ್ಲಾದೇಶದ ಹಿರಿಯ ಪತ್ರಕರ್ತರೊಬ್ಬರು ನಮ್ಮ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿಸಿದ್ದಾರೆ ಎಂಬ ಆರೋಪಗಳಿವೆ ಎಂದು ಸಿನ್ಹಾ ಹೇಳಿದರು ಎಂದು ಜೀ ನ್ಯೂಸ್ ವರದಿ ಮಾಡಿದೆ.
ರಾಹುಲ್ ಗಾಂಧಿಯವರ ಲಂಡನ್ ಸಭೆಯ ಬಗ್ಗೆ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ ಸ್ಪಷ್ಟನೆ ಕೇಳಿದ್ದಾರೆ ಎಂದು ಹನ್ಸ್ ಇಂಡಿಯಾ ಮತ್ತು ನ್ಯೂಸ್ ಡ್ರಮ್ ವರದಿ ಮಾಡಿವೆ. ಆದರೆ ಈ ವರದಿಗಳಲ್ಲಿ ಎಲ್ಲಿಯೂ ರಾಹುಲ್ ಗಾಂಧಿಯವರು ತಾರಿಕ್ ರೆಹಮಾನ್ ಅವರನ್ನು ಭೇಟಿಯಾಗಿರುವ ಕುರಿತು ಮಾಹಿತಿ ನೀಡಿಲ್ಲ. ಬದಲಾಗಿ ಭೇಟಿಯಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ ಎಂದಷ್ಟೇ ವರದಿ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಮೇ 20ರಂದು ಲಂಡನ್‌ನಲ್ಲಿ ‘ಐಡಿಯಾಸ್ ಫಾರ್ ಇಂಡಿಯಾ’ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ್ದರು. “ಭಾರತದಲ್ಲಿ ಪ್ರಜಾಪ್ರಭುತ್ವವು ಜಾಗತಿಕ ಸಾರ್ವಜನಿಕ ಒಳಿತಾಗಿದೆ. ಅಪ್ರತಿಮ ಪ್ರಮಾಣದಲ್ಲಿ ಪ್ರಜಾಪ್ರಭುತ್ವವನ್ನು ನಿರ್ವಹಿಸಿದ ಏಕೈಕ ಜನರು ನಾವು. ಲಂಡನ್‌ನಲ್ಲಿ ನಡೆದ #IdeasForIndia ಸಮ್ಮೇಳನದಲ್ಲಿ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಉತ್ಕೃಷ್ಟವಾದ ವಿನಿಮಯವನ್ನು ನಡೆಸಿದೆವು.” ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಾವು ಗೂಗಲ್ ನಲ್ಲಿ “ರಾಹುಲ್ ಗಾಂಧಿ ಲಂಡನ್‌ನಲ್ಲಿ ತಾರಿಕ್ ರೆಹಮಾನ್ ಅವರನ್ನು ಭೇಟಿಯಾದರು(Rahul Gandhi meet Tarique Rahman in London) ಎಂಬ ಕೀರ್ಡ್ ಬಳಸಿ ಸಾಕಷ್ಟು ಹುಡುಕಾಟ ನಡೆಸಿದರು ಸಹ ಈ ಇಬ್ಬರು ಭೇಟಿಯಾಗಿದ್ದಕ್ಕೆ ಯಾವುದೇ ಸಾಕ್ಷಿ ದೊರೆತಿಲ್ಲ.
ಇನ್ನೂ ವೀಡಿಯೋದಲ್ಲಿ ರವೀಂದ್ರ ಜೋಶಿಯವರು ಒಬ್ಬ “ಯುವಕ, ವಿದ್ಯಾರ್ಥಿ ನಾಯಕ ಹೋರಾಟಗಾರರ ಜೊತೆಗೆ ಸೇರಿಕೊಂಡು ಪ್ರತಿಭಟನೆಯಲ್ಲಿ, ಬೆಂಕಿ ಹಚ್ಚುವಲ್ಲಿ, ಪ್ರಧಾನ ಮಂತ್ರಿಗಳ ನಿವಾಸಕ್ಕೆ ದಾಳಿ ಮಾಡುವಲ್ಲಿ ಮುಂಚೂಣಿಯಲ್ಲಿರುತ್ತಾನೆ. ನಂತರ 1500 ಜನ ಇರುವ ಇವನ ಊರಿಗೆ ಇವನ ಸಹಚರರೇ ನುಗ್ಗುತ್ತಾರೆ. ನುಗ್ಗಿ ಈತನ ತಾಯಿಯ ಬಾಯಿಯನ್ನು ಕಟ್ಟುತ್ತಾರೆ, ಈತನ ಸಹೋದರಿಯನ್ನು ಎತ್ತಿಕೊಂಡು ಹೋಗಿ ಈತನ ಸಮಾಕ್ಷಮದಲ್ಲಿಯೇ ಅತ್ಯಾಚಾರ ಮಾಡುತ್ತಾರೆ. ಆ ಊರಿನಲ್ಲಿ ಇದ್ದದ್ದು ಒಂದೇ ಒಂದು ಕುಟುಂಬ ಅದು ಈ ಯುವಕನ ಕುಟುಂಬ. ಉಳಿದವರೆಲ್ಲಾ ಮುಸಲ್ಮಾನರು ಈತ ತಪ್ಪಿಸಿಕೊಂಡು ಓಡಿ ಹೋಗಲು ನೋಡುತ್ತಾನೆ. ಯಾರ ಜೊತೆಗೆ ಇದ್ದ ಅವರೇ ಈತನನ್ನು ಒಡೆಯಲಿಕ್ಕೆ ಬಂದಿದ್ದು. ಈತ ತಪ್ಪಿಸಿಕೊಳ್ಳಲು ನೀರಿಗೆ ಹಾರಿದಾಗ, ಸುತ್ತ ನೆರೆದಿದ್ದವರು ಅವರ ಮೇಲೆ ಕಲ್ಲು ತೂರುತ್ತಾರೆ” ಎಂಬ ಸುಳ್ಳು ಕಥೆಯೊಂದನ್ನು ಎಣೆದಿದ್ದಾರೆ.
ವಾಸ್ತವವಾಗಿ, ಜಮುನಾ ಟಿವಿ , ಜುಕ್ತಾಧಾರ , ಮಝಮಿನ್ ಮತ್ತು ಢಾಕಾ ಪೋಸ್ಟ್ ಸೇರಿದಂತೆ ವಿವಿಧ ಸುದ್ದಿತಾಣಗಳ ವರದಿಗಳ ಪ್ರಕಾರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಮತ್ತು ದೇಶದಿಂದ ಪಲಾಯನ ಮಾಡಿದ ನಂತರ, ಅವಾಮಿ ಲೀಗ್ ನಾಯಕರ ಮೇಲೆ ಹಲವಾರು ದಾಳಿಗಳು ರಾಷ್ಟ್ರವ್ಯಾಪಿ ನಡೆದಿವೆ. ಇದೇ ವೇಳೆ ಅಖೌರಾ ಪುರಸಭೆಯ ಮೇಯರ್ ತಕ್ಝಿಲ್ ಖಲೀಫಾ ಕಾಜೋಲ್ ಎಂಬಾತನ ಮೇಲೆ ಕೂಡ ದಾಳಿ ನಡೆದಿದೆ. ಈ ವೇಳೆ ಆತ ತನ್ನ ಮೇಲೆ ದಾಳಿ ಮಾಡುವ ಗುಂಪಿನಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ ಈಜಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾನೆ. ಈ ವೇಳೆ ಆತನ ಮೇಲೆ ಪ್ರತಿಭಟನಾಕಾರರು ಕಲ್ಲುಗಳನ್ನು ಎಸೆಯುತ್ತಾರೆ” ಎಂದು ಉಲ್ಲೇಖಿಸಲಾಗಿದೆ.
ರವಿಂದ್ರ ಜೋಶಿ ತರಹದ ಅನೇಕರು ಬಾಂಗ್ಲಾದೇಶದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೋಗಳನ್ನು ಬಳಸಿಕೊಂಡು ಹಿಂದುಗಳ ಮೇಲೆ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆ ಎಂದು ಭಾರತದ ಹಿಂದುಗಳನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ಭಾರತದಲ್ಲಿಯೂ ಕೋಮುಗಲಭೆಗಳನ್ನು ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ. ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಹಲವಾರು ಪೋಟೋ ಮತ್ತು ವೀಡಿಯೋಗಳ ಸತ್ಯಶೋಧನೆಯನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ಬಳಗ ಮಾಡಿದ್ದು ಅಂತಹ ವರದಿಗಳನ್ನು ನೀವು ಇಲ್ಲಿ ನೋಡಬಹುದು.
ಆದ್ದರಿಂದ ಯಾವುದೇ ವೈರಲ್ ವೀಡಿಯೋವನ್ನು, ಪೋಟೋ ಮತ್ತು ಸಂದೇಶವನ್ನು ನಂಬುವ ಮೊದಲು ಸಣ್ಣ ಹುಡುಕಾಟ ನಡೆಸಿ ಸತ್ಯವೇನೆಂದು ತಿಳಿದುಕೊಳ್ಳಿ.
ಇದನ್ನು ಓದಿ: ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ ಇಸ್ಲಾಂಗೆ ಮತಾಂತರವಾಗಲಿದ್ದಾರೆ ಎಂಬುದು ಸುಳ್ಳು
ವೀಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.