Fact Check | ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಹಿಂದೂಗಳು ಮತಾಂತರಗೊಳ್ಳುವಂತೆ ಹೇಳಿದ್ದಾರೆ ಎಂಬುದು ಸುಳ್ಳು

“ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಬೌದ್ಧರ ಹತ್ಯಾಕಾಂಡ ಮುಂದುವರೆದಿರುವುದಕ್ಕೆ ನಾನು ವಿಷಾದಿಸುತ್ತೇನೆ, ಆದರೆ ಬಾಂಗ್ಲಾದೇಶವು ಇಸ್ಲಾಮಿಕ್ ರಾಷ್ಟ್ರವಾಗಿದೆ ಮತ್ತು ಸೆಕ್ಯುಲರ್ ಅಲ್ಲ. ಈಗ, ಮುಸ್ಲಿಮರು ಇಲ್ಲಿ ಬಹುಸಂಖ್ಯಾತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹಿಂದೂಗಳು ಮತ್ತು ಬೌದ್ಧರು ಸುರಕ್ಷಿತವಾಗಿ ಬದುಕಲು ಬಯಸಿದರೆ, ಅವರು ಇಸ್ಲಾಂಗೆ ಮತಾಂತರಗೊಳ್ಳಬೇಕು ಅಥವಾ ಭಾರತಕ್ಕೆ ಹೋಗಬೇಕು.” ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಹೇಳಿಕೆ ನೀಡಿದ್ದಾರೆ ಎಂದು ಸ್ಕ್ರೀನ್‌ಶಾಟ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಹಾಗೂ ಅಲ್ಲಿನ ಇನ್ನಿತರ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯಾದ ಸುರಕ್ಷತೆ ಇಲ್ಲ. ಹಿಂದೂಗಳು ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಹಲವರು ಪೋಸ್ಟ್‌ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮುಸ್ಲಿಂ ಸಮುದಾಯವನ್ನು ನಿಂದಿಸಲು ಮುಂದಾಗಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಖಲೀದಾ ಜಿಯಾ ಪ್ರಧಾನಿಯಾಗಿದ್ದಾಗ ಇಂತಹ ಹೇಳಿಕೆ ನೀಡಿದ್ದಾರೆಯೇ ಎಂದು ವಿವಿಧ ವರದಿಗಳಿಗಾಗಿ ಪರಿಶೀಲನೆಯನ್ನು ನಡೆಸಿದೆವು. ಆದರೆ ಇದಕ್ಕೆ ಸಂಬಂಧ ಪಟ್ಟಂತೆ ಯಾವುದೇ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಜಿಯಾ ಅವರು ಈ ಹೇಳಿಕೆ ನೀಡಿದ್ದು ನಿಜವೇ ಆಗಿದ್ದಲ್ಲಿ ಆ ಕುರಿತು ಪ್ರಮುಖ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು. ಆದರೆ ಹೀಗೆ ವರದಿ ಪತ್ತೆಯಾಗದ ಕಾರಣ ವೈರಲ್‌ ಪೋಸ್ಟ್‌ ಅನುಮಾನಗಳನ್ನು ಹುಟ್ಟು ಹಾಕಿದೆ.

ಇನ್ನು ಈ ಕುರಿತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ BNP ಪ್ರೆಸ್ ವಿಂಗ್ ಸದಸ್ಯ ಸಾಯರುಲ್ ಕಬೀರ್ ಖಾನ್ ಅವರು ಬೂಮ್‌ ವೆಬ್‌ತಾಣದೊಂದಿಗೆ ಮಾತನಾಡಿದ್ದು ಈ ವೇಳೆ ಅವರು “ಖಲೀದಾ ಜಿಯಾ ಎಂದಿಗೂ ಅಂತಹ ಹೇಳಿಕೆಯನ್ನು ನೀಡಿಲ್ಲ, ಅವರು ಗುಜರಾತ್ ಗಲಭೆಯ ಸಮಯದಲ್ಲಿ ಅಧಿಕಾರದಲ್ಲಿದ್ದರು. ಅವರು ದೇಶದಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡರು. ಮತ್ತು, BNP ಕೋಮು ಸೌಹಾರ್ದತೆಯನ್ನು ನಂಬುತ್ತದೆ ಮತ್ತು ಪಕ್ಷದ ಸಂವಿಧಾನವು ಅದನ್ನು ಖಚಿತಪಡಿಸುತ್ತದೆ” ಎಂದು ತಿಳಿಸಿರುವುದಾಗಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಜಿಯಾ ಖಲೀದಾ ಅವರು ಹಿಂದೂಗಳನ್ನು ಮತಾಂತರಗೊಳ್ಳುವಂತೆ ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರು ಹಿಂದೂಗಳನ್ನು ಮತಾಂತರಗೊಳ್ಳುವಂತೆ ಹೇಳಿದ್ದಾರೆ ಎಂದು  ವೈರಲ್‌ ಆಗುತ್ತಿರುವ ಪೋಸ್ಟ್‌ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಅಪರಾದವಾಗಿದೆ ಮತ್ತು ಇಂತಹ ಸುದ್ದಿಗಳು ಕಂಡು ಬಂದರೆ ಅವುಗಳನ್ನು ಮೊದಲು ಪರಿಶೀಲಿಸುವುದು ಉತ್ತಮವಾಗಿದೆ.


Fact Check | ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್ ಇಸ್ಲಾಂಗೆ ಮತಾಂತರವಾಗಲಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *