Fact Check: ಬಾಂಗ್ಲಾದೇಶದಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳುವ ಹಳೆಯ ವೀಡಿಯೋವನ್ನು ಮತ್ತೆ ವೈರಲ್ ಮಾಡಲಾಗಿದೆ

ಭಾರತೀಯ ಉತ್ಪನ್ನ

ವ್ಯಕ್ತಿಯೊಬ್ಬ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರನ್ನು ಒತ್ತಾಯಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ವ್ಯಕ್ತಿಯು ಪಾಂಪ್ಲೆಂಟ್ಸ್‌ ಹಂಚುತ್ತಾ, ಬಂಗಾಳಿ ಭಾಷೆಯಲ್ಲಿ “ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ” ಎಂದು ಅಭಿಯಾನ ನಡೆಸುತ್ತಿದ್ದಾರೆ, ಎನ್ನಲಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ, ಭಾರತೀಯ ಸರಕುಗಳನ್ನು ಬಹಿಷ್ಕರಿಸಲು ಮತ್ತು ಮಾರಾಟ ಮಾಡುವುದನ್ನು ನಿಲ್ಲಿಸಲು ಮುಸ್ಲಿಂ ಅಂಗಡಿಕಾರರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ.

ಆಗಸ್ಟ್ 5, 2024 ರಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ ನಂತರ, ದೇಶದಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. ಹಿಂದಿನ ಆಡಳಿತ ಪಕ್ಷವಾದ ಅವಾಮಿ ಲೀಗ್ ಸದಸ್ಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಉದ್ದೇಶಿತ ದಾಳಿಗಳು ವರದಿಯಾಗಿವೆ. ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ಮನೆಗಳು, ಪೂಜಾ ಸ್ಥಳಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ನಡೆಸಲಾಗಿದೆ.

ಆಗಸ್ಟ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ಅವರಿಗೆ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಲು ಮನವಿ ಮಾಡಿದ್ದರು.

ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು, ‘ಬಾಂಗ್ಲಾದೇಶದ ಹೊಸ ಸರ್ಕಾರವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಧಿಕೃತ ಅಭಿಯಾನವನ್ನು ಪ್ರಾರಂಭಿಸಿದೆ. ಬಿಎನ್ ಪಿ ನಾಯಕರು ನಗರಗಳಲ್ಲಿ ಸಂಚರಿಸಿ ಪ್ಯಾರಾಚೂಟ್ ಆಯಿಲ್, ಡಾಬರ್ ಹನಿ, ಉಜಾಲಾ ವಾಷಿಂಗ್ ಪೌಡರ್ ಮುಂತಾದ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಅಂಗಡಿಕಾರರನ್ನು ಕೇಳಿದರು. ಅವರು ಅದಾನಿಯನ್ನು ಬಹಿಷ್ಕರಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. “ನಮ್ಮ ಪೂರ್ವ ಗಡಿಯಲ್ಲಿ ಬಾಂಗ್ಲಾದೇಶದಿಂದ ಪಾಕಿಸ್ತಾನಕ್ಕಿಂತ ದೊಡ್ಡ ಬೆದರಿಕೆ ಹೊರಹೊಮ್ಮುತ್ತಿದೆ ಎಂದು ಭಾರತ ಸರ್ಕಾರ ಈಗ ಅರ್ಥಮಾಡಿಕೊಳ್ಳಬೇಕು ಮತ್ತು ಬಾಂಗ್ಲಾದೇಶಕ್ಕೆ ತನ್ನದೇ ಭಾಷೆಯಲ್ಲಿ ಪ್ರತಿಕ್ರಿಯಿಸಬೇಕು” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಆರ್ಕೈವ್ ಲಿಂಕ್.

ಅಂತೆಯೇ, ಫೇಸ್‌ಬುಕ್‌ನ ಬಳಕೆದಾರರೊಬ್ಬರು, “ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಯಾದ ತಕ್ಷಣ, ನಿಮ್ಮ ಅಂಗಡಿಯಲ್ಲಿ ಯಾವುದೇ ಭಾರತೀಯ ಉತ್ಪನ್ನವಿದ್ದರೆ, ಅದನ್ನು ನಾಶಪಡಿಸಿ ಅಥವಾ ಅದು ಅಂಗಡಿಯಲ್ಲಿ ಎಲ್ಲಿಯೂ ಗೋಚರಿಸಬಾರದು ಎಂದು ಎಲ್ಲಾ ಮುಸ್ಲಿಂ ಅಂಗಡಿಯವರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗುತ್ತಿದೆ. ಇದು ಹಿಂದೂಗಳನ್ನು ತುಂಬಾ ದ್ವೇಷಿಸುವ ಮುಸ್ಲಿಂ ದೇಶ ಮತ್ತು ಅವರಿಗಿಂತ ಹೆಚ್ಚಿನ ಮುಸ್ಲಿಮರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಜಾತ್ಯತೀತ ಜನರು ಈಗ ಇದು ಸರಿ ಎಂದು ಹೇಳಬೇಕು. ಭಾಯಿಜಾನ್ ಏನು ಹೇಳುತ್ತಾನೆ?” ಎಂದು ಹಂಚಿಕೊಂಡಿದ್ದಾರೆ.

ಆರ್ಕೈವ್ ಲಿಂಕ್.

ಫ್ಯಾಕ್ಟ್ ಚೆಕ್:

ಈ ಆರೋಪವನ್ನು ಪರಿಶೀಲಿಸಲು, ವೈರಲ್ ವೀಡಿಯೊದಿಂದ ಪ್ರಮುಖ ಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಲು ನಾವು ಇನ್ವಿಡ್ ಸಾಧನವನ್ನು ಬಳಸಿದೆವು. ತಮನ್ನಾ ಫಿರ್ದೌಸ್ ಶಿಖಾ ಎಂಬ ಫೇಸ್ಬುಕ್ ಬಳಕೆದಾರರು ಫೆಬ್ರವರಿ 22, 2024 ರಂದು ಹಂಚಿಕೊಂಡ ವೀಡಿಯೊವನ್ನು ಅವರು ಕಂಡುಕೊಂಡಿದ್ದಾರೆ. ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿಯವರಿಗೆ ಮನವಿ ಮಾಡುವುದನ್ನು ವೀಡಿಯೊ ತೋರಿಸುತ್ತದೆ. ಬಂಗಾಳಿ ಭಾಷೆಯಲ್ಲಿನ ಶೀರ್ಷಿಕೆಯನ್ನು ಹಿಂದಿಗೆ ಭಾಷಾಂತರಿಸಿದಾಗ, ಸ್ಥೂಲವಾಗಿ, “ಅಂಗಡಿಗಳಿಗೆ ಹೋಗಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು” ಎಂದು ಅರ್ಥೈಸುತ್ತದೆ.

ಶಿಖಾ ಅವರ ಫೇಸ್‌ಬುಕ್ ಖಾತೆಯಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಅವರು ಗಣ ಅಧಿಕಾರ್ ಪರಿಷತ್ (ಗೋನೊ ಅಧಿಕಾರ್ ಪರಿಷತ್) ಪಕ್ಷದ ನಾಯಕಿ.

ಈ ಮಾಹಿತಿಯನ್ನು ಬಳಸಿಕೊಂಡು, ಬಂಗಾಳಿ ಕೀವರ್ಡ್‌ಗಳೊಂದಿಗೆ ಗೂಗಲ್ ಹುಡುಕಾಟವನ್ನು ನಡೆಸಿದಾಗ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಯ ಫೇಸ್‌ಬುಕ್‌ ಖಾತೆ ಲಭ್ಯವಾಗಿದೆ. ಅವರ ಹೆಸರು ಮೊಹಮ್ಮದ್ ತಾರಿಕ್ ರೆಹಮಾನ್, ಮತ್ತು ಅವರು ಗಣ ಅಧಿಕಾರ್ ಪರಿಷತ್‌ನ ಸದಸ್ಯರಾಗಿದ್ದಾರೆ.

ಬಾಂಗ್ಲಾದೇಶದ ಸುದ್ದಿ ಸಂಸ್ಥೆ ನ್ಯೂ ಏಜ್‌ನ ವರದಿಯ ಪ್ರಕಾರ, ಗಣ ಅಧಿಕಾರ್ ಪರಿಷತ್ ಬಾಂಗ್ಲಾದೇಶದ ರಾಜಕೀಯ ಪಕ್ಷವಾಗಿದ್ದು, ಇದನ್ನು ಅಕ್ಟೋಬರ್ 2021 ರಲ್ಲಿ ಸ್ಥಾಪಿಸಲಾಯಿತು.

ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ನಾವು ಮೊಹಮ್ಮದ್ ತಾರಿಕ್ ಅವರನ್ನು ಸಂಪರ್ಕಿಸಿದಾಗ, “ವೀಡಿಯೊದಲ್ಲಿರುವ ವ್ಯಕ್ತಿ ನಾನೇ. ಇದು ಫೆಬ್ರವರಿ 2024 ರಲ್ಲಿ ನಡೆದ ಘಟನೆಯಾಗಿದ್ದು, ಇದು ದೇಶದಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನದ ಭಾಗವಾಗಿತ್ತು. ಢಾಕಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹೊಂದಿಕೊಂಡಿರುವ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ” ಎಂದಿದ್ದಾರೆ.

ಇದಲ್ಲದೆ, 2024 ರ ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು, ಅಲ್ಲಿ ಶೇಖ್ ಹಸೀನಾ ನಾಲ್ಕನೇ ಅವಧಿಗೆ ಗೆದ್ದರು. ಅಲ್ ಜಜೀರಾ ವರದಿಯ ಪ್ರಕಾರ, ಪ್ರತಿಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಿದವು ಮತ್ತು ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ದೊಡ್ಡ “ಇಂಡಿಯಾ ಔಟ್” ಅಭಿಯಾನವನ್ನು ಪ್ರಾರಂಭಿಸಿದವು. #BoycottIndia ಅಭಿಯಾನವು ಜನವರಿ ಮಧ್ಯದಲ್ಲಿ ಪ್ರಾರಂಭವಾಯಿತು. ಈ ಅಭಿಯಾನಕ್ಕೆ ಸಂಬಂಧಿಸಿದ ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಮೊಹಮ್ಮದ್ ತಾರಿಕ್ ರೆಹಮಾನ್ ಅವರ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಫೆಬ್ರವರಿ 19, 2024 ರಂದು, ಅವರ ಖಾತೆಯ ಪೋಸ್ಟ್‌ನಲ್ಲಿ ಬಹಿಷ್ಕಾರಕ್ಕೆ ಕರೆ ನೀಡಲಾದ ಭಾರತೀಯ ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ.

ಈ ವರ್ಷದ ಫೆಬ್ರವರಿ 21 ರಂದು ಮಾಡಿದ ಪೋಸ್ಟ್‌ನಲ್ಲಿ, ತಾರಿಕ್ ಭಾರತೀಯ ಉತ್ಪನ್ನಗಳನ್ನು ಪಟ್ಟಿ ಮಾಡುವ ಅದೇ ಪೋಸ್ಟರ್ ಅನ್ನು ಹಿಡಿದಿರುವುದನ್ನು ಕಾಣಬಹುದು. ಪೋಸ್ಟ್‌ನಲ್ಲಿ ಬಾಂಗ್ಲಾ ಶೀರ್ಷಿಕೆ ಹೀಗಿದೆ, “ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ.”

2024 ರ ಫೆಬ್ರವರಿ-ಮಾರ್ಚ್‌ನಲ್ಲಿ ಗಣ ಅಧಿಕಾರ್ ಪರಿಷತ್ ಪಕ್ಷದ ಸದಸ್ಯರು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನದ ವರದಿಗಳನ್ನು ಬಾಂಗ್ಲಾದೇಶದ ಸುದ್ದಿ ಸಂಸ್ಥೆಗಳಾದ ಪ್ರೊಥೋ ಮಾಲೋ ಮತ್ತು ಅಜ್ಕರ್ ಪತ್ರಿಕೆ ಪ್ರಸಾರ ಮಾಡಿದ್ದವು. ಬಾಂಗ್ಲಾದೇಶದ ಆಗಿನ ಪ್ರಧಾನಿ ಶೇಖ್ ಹಸೀನಾ ಅವರು ವಿರೋಧ ಪಕ್ಷಗಳು ನಡೆಸುತ್ತಿರುವ ‘ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ’ ಅಭಿಯಾನವನ್ನು ಖಂಡಿಸಿದ್ದರು.

ಫೆಬ್ರವರಿ ಮತ್ತು ಮಾರ್ಚ್ 2024 ರ ನಡುವೆ, ಬಾಂಗ್ಲಾದೇಶದ ಸುದ್ದಿ ಸಂಸ್ಥೆಗಳಾದ ಪ್ರೊಥೊ ಮಾಲೋ ಮತ್ತು ಅಜ್ಕರ್ ಪತ್ರಿಕೆ ಗಣ ಅಧಿಕಾರ್ ಪರಿಷತ್ ಪಕ್ಷವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ಮುನ್ನಡೆಸುತ್ತಿದೆ ಎಂದು ವರದಿ ಮಾಡಿದೆ.

ಆ ಸಮಯದಲ್ಲಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ವಿರೋಧ ಪಕ್ಷಗಳ ಈ ಅಭಿಯಾನವನ್ನು ಟೀಕಿಸಿದ್ದರು. ಆದ್ದರಿಂದ “ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನ” ಇತ್ತೀಚಿನದ್ದಾಗಿರದೇ ಹಳೆಯದಾಗಿದೆ.


ಇದನ್ನು ಓದಿ: ಬಾಂಗ್ಲಾದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂಬ ವಿಡಿಯೋ ಸುಳ್ಳು


ವೀಡಿಯೋ ನೋಡಿ: ಮದರಾಸದಲ್ಲಿ ಭಾರೀ ಶಸ್ತ್ರಾಸ್ತ ಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿದ ಕಿಡಿಗೇಡಿಗಳು..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *