ಡಾ. ಬಿ. ಆರ್ ಅಂಬೇಡ್ಕರ್ ಅವರು ನಮ್ಮ ದೇಶ ಕಂಡ ಮಹಾನ್ ಜ್ಞಾನಿಗಳಲ್ಲಿ ಒಬ್ಬರು. ಹಾಗೆಯೇ ಮಹಾಮಾನವತಾವಾದಿ ಎಂದೇ ಹೆಸರಾದವರು. ಭಾರತ ದೇಶದ ಸಂವಿಧಾನವನ್ನು ರೂಪಿಸುವಾಗ ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಅವಕಾಶ, ಗೌರವಗಳು ಕಲ್ಪಿಸಿಕೊಡುವ ಸಲುವಾಗಿ ನಮ್ಮ ದೇಶವನ್ನು ಧರ್ಮ ನಿರಪೇಕ್ಷತೆಯ ರಾಷ್ಟ್ರವನ್ನಾಗಿ ಮಾಡಿ ಭಾರತದ ವೈವಿದ್ಯತೆಗೆ, ಬಹುತ್ವಕ್ಕೆ ಮತ್ತು ಜಾತ್ಯಾತೀತತೆ ತತ್ವಕ್ಕೆ ಕಾನೂನಾತ್ಮಕವಾಗಿ ಮನ್ನಣೆ ನೀಡಿದವರು.
ಆದರೆ, ಡಾ. ಬಿ.ಆರ್ ಅಂಬೇಡ್ಕರ್ ಅವರ ಬದುಕು ಮತ್ತು ಬರಹಗಳಿಗೆ ಸಂಬಂಧಿಸಿದಂತೆ ಅವರ ಬದುಕಿದ್ದ ಕಾಲದಿಂದ ಇಲ್ಲಿಯವರೆಗೂ ಒಂದಿಲ್ಲೊಂದು ಸುಳ್ಳು ಹರಡಲು ಅವರ ಹೇಳಿಕೆಗಳನ್ನು ತಪ್ಪಾಗಿ ತಿರುಚಲು ಅನೇಕ ಬಲಪಂಥೀಯ ಸಂಘಟನೆಗಳು ಮತ್ತು ಇಂತಹ ಸಂಘಟನೆಯ ಬೆಂಬಲಿತ ಪಕ್ಷದ ಅನುಯಾಯಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
ಇಂತಹ ಸಂಘಟನೆಗಳು ಅಥವಾ ರಾಜಕೀಯ ಮುಖಂಡರು ಅಂಬೇಡ್ಕರ್ ಅವರ ಇತರ ಪ್ರಖ್ಯಾತ ಕೃತಿಗಳನ್ನು ನಿರ್ಲಕ್ಷಿಸಿ ಹೆಚ್ಚು ಚರ್ಚಿಸುವುದು “ಪಾಕಿಸ್ತಾನ ಅಥವಾ ಭಾರತದ ವಿಭಜನೆ(Pakistan Or Partition Of India) ಕೃತಿಯನ್ನು. ಕಾರಣ ಇದರಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅವರು ಮುಸಲ್ಮಾನರ ಬಗ್ಗೆ ಟೀಕೆ ಮತ್ತು ವಿಮರ್ಶೆಗಳನ್ನು ಮಾಡಿದ್ದಾರೆ ಎಂಬ ಸಲುವಾಗಿ. ಇದನ್ನೇ ಹಿನ್ನಲೆಯಾಗಿಟ್ಟುಕೊಂಡು ಕಳೆದ ಅನೇಕ ವರ್ಷಗಳಿಂದ ಈ ಕೃತಿಯಲ್ಲಿ ಅಂಬೇಡ್ಕರ್ ಅವರು ಮುಸಲ್ಮಾನರ ಕುರಿತು ಆಕ್ಷೇಪರ್ಹ ಹೇಳಿಕೆಗಳ ನೀಡಿದ್ದಾರೆ ಎಂದು ವೀಡಿಯೋ ಮತ್ತು ಪೋಸ್ಟರ್‌ಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ.
ಎಕ್ಸ್ ನಲ್ಲಿ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಕೃತಿಯ ಕುರಿತು ಸಾಕಷ್ಟು ಜನರು ಹಂಚಿಕೊಂಡಿದ್ದು ಅವುಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವಾಟ್ಸಾಪ್ ಮತ್ತು ಪೇಸ್‌ಬುಕ್‌ನಲ್ಲಿ ಸಹ ಇಂತಹ ಸಂದೇಶಗಳು ಅನೇಕ ವರ್ಷಗಳಿಂದ ಹರಿದಾಡುತ್ತಿದೆ.
ಈ ವೈರಲ್ ಸಂದೇಶ ಹಂಚಿಕೊಂಡಿರುವ ಅನೇಕರು ಪಾಕಿಸ್ತಾನ ಅಥವಾ ಭಾರತದ ವಿಭಜನೆ ಕೃತಿಯ ನಿರ್ದಿಷ್ಟ ಪುಟವನ್ನು ಉಲ್ಲೇಖಿಸಿ ಅಂಬೇಡ್ಕರ್ ಹೇಳಿಕೆಯನ್ನು ನೀಡಿದ್ದಾರೆ.
ಆದ್ದರಿಂದ, ಈ ಲೇಖನದ ಮೂಲಕ ಆ ನಿರ್ದಿಷ್ಟ ಪುಟದಲ್ಲಿ ಈ ಹೇಳಿಕೆಗಳು ಇವೆಯೇ ಎಂದು ಪರಿಶೀಲಿಸುವ ಮೂಲಕ ವೈರಲ್ ಸಂದೇಶದ ಸತ್ಯಾಸತ್ಯತೆಯನ್ನು ಮತ್ತು ಇಂತಹ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವವರ ಉದ್ದೇಶವನ್ನು ತಿಳಿದುಕೊಳ್ಳೋಣ.
ಫ್ಯಾಕ್ಟ್ ಚೆಕ್:
“ಪಾಕಿಸ್ತಾನ ಅಥವಾ ಭಾರತದ ವಿಭಜನೆ” ಕೃತಿ ಡಾ. ಅಂಬೇಡ್ಕರ್ ಅವರ ಮಹಾಕೃತಿಗಳಲ್ಲಿ ಒಂದಾಗಿದೆ. 1945 ರಲ್ಲಿ ಬರೆಯಲಾದ ಈ ಪುಸ್ತಕವು ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್‌ನ ಕ್ರಿಯಾತ್ಮಕತೆ(ಡೈನಾಮಿಕ್ಸ್) ಅನ್ನು ವಿವರಿಸುತ್ತದೆ ಮತ್ತು ವಿಭಜನೆಯಲ್ಲಿ ಕಾಂಗ್ರೆಸ್ ಮತ್ತು ಬ್ರಿಟಿಷ್ ಸರ್ಕಾರವು ಹೇಗೆ ಪಾತ್ರವಹಿಸಿತು ಎಂದು ವಿವರಿಸುತ್ತದೆ. ಈ ಪುಸ್ತಕವು ನಿಮ್ಮನ್ನು ವಿಭಜನೆಯ ಕುರಿತು ಕೇಳದ ಭಾಗಕ್ಕೆ ಕೊಂಡೊಯ್ಯುತ್ತದೆಯಾದರೂ, ಡಾ. ಅಂಬೇಡ್ಕರ್ ಅವರು ವಿಭಜನೆಯ ಬಗ್ಗೆ ತೀರ್ಪು ನೀಡುವ ಬದಲು ಪರಿಸ್ಥಿತಿಯ ಸ್ಪಷ್ಟತೆಯನ್ನು ನೀಡುವ ಉತ್ತಮ ವಿಧಾನವನ್ನು ತೆಗೆದುಕೊಳ್ಳುತ್ತಾರೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಸಂಘರ್ಷವನ್ನು ದೂರವಿಟ್ಟರೆ, ವಿಭಜನೆ ಮತ್ತು ಅದರ ದುರಂತವನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ಪಡುತ್ತಾರೆ.
ಪುಟ 123
ವೈರಲ್ ಸಂದೇಶದಲ್ಲಿ ಪುಟ ಸಂಖ್ಯೆ 123 ಮುಸ್ಲಿಮರು ಭಾರತದಲ್ಲಿ ವಾಸಿಸಬಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ ಎಂದು ಹೇಳಲಾಗಿದೆ. ನಾವು ಡಾ. ಅಂಬೇಡ್ಕರ್ ಅವರ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಪುಸ್ತಕಕ್ಕಾಗಿ ಹುಡುಕಿದಾಗ. ಇಂಟರ್ನೆಟ್ ಆರ್ಕೈವ್‌ನಲ್ಲಿ ಸಂಪೂರ್ಣ ಕೃತಿ ಲಭ್ಯವಾಗಿದೆ. ಮತ್ತು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಡಾ. ಬಿ.ಆರ್ ಅಂಬೇಡ್ಕರ್ ಅವರ ಕೃತಿಗಳ ಆರ್ಕೈವ್ ನಲ್ಲಿ ಈ ಕೃತಿ ಲಭ್ಯವಾಗಿದೆ.
ಈ ಕೆಳಗೆ ಇಂಟರ್ನೆಟ್ ಆರ್ಕೈವ್ ಮತ್ತು MEA (Ministry of External Affairs)ಆರ್ಕೈವ್ ಎರಡರಲ್ಲಿಯೂ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಪುಸ್ತಕದ 123 ಪುಟವನ್ನು ನೀಡಲಾಗಿದೆ.
123 ನೇ ಪುಟವನ್ನು ಸಂಪೂರ್ಣವಾಗಿ ಓದಿದಾಗ ಎಲ್ಲಿಯೂ ಅಂಬೇಡ್ಕರ್ ಅವರು “ಮುಸ್ಲಿಮರು ಭಾರತದಲ್ಲಿ ವಾಸಿಸಬಾರದು” ಎಂದು ಹೇಳಿರುವ ಉಲ್ಲೇಖವೇ ಇಲ್ಲ. ಬದಲಾಗಿ ಅವರು ಇಂಟರ್ನೆಟ್ ಆರ್ಕೈವ್ ನ 123 ಪುಟದಲ್ಲಿ ಹಿಂದು ಮಹಾಸಭಾದ ಬಗ್ಗೆ ಚರ್ಚಿಸಿದ್ದಾರೆ.
ಇನ್ನೂ MEA ಆರ್ಕೈವ್ ನಲ್ಲಿ ಅಂಬೇಡ್ಕರ್ ಅವರು ಹಿಂದು ಧರ್ಮದ ಮೇಲ್ಜಾತಿ ಅಥವಾ ಪ್ರಭಾವಿ ಜಾತಿಯ ಜನರ ಕುರಿತು “ಈ ಏಕಸ್ವಾಮ್ಯವನ್ನು(monopoly) ತಮ್ಮಲ್ಲಿಯೇ ಉಳಿಸಿಕೊಳ್ಳುವುದು ಅವರ ಜೀವನದ ಮಹತ್ವಾಕಾಂಕ್ಷೆ ಮತ್ತು ಗುರಿಯಾಗಿದೆ. ವರ್ಗ ಪ್ರಾಬಲ್ಯದ ಈ ಸ್ವಾರ್ಥದ ಕಲ್ಪನೆಯೊಂದಿಗೆ ಅವರು ಕೆಳವರ್ಗದ ಹಿಂದೂಗಳನ್ನು ಸಂಪತ್ತು, ಶಿಕ್ಷಣ ಮತ್ತು ಅಧಿಕಾರದಿಂದ ಹೊರಗಿಡಲು ಪ್ರತಿಯೊಂದು ನಡೆಯನ್ನೂ ತೆಗೆದುಕೊಳ್ಳುತ್ತಾರೆ, ಇದಕ್ಕಾಗಿ ಅತ್ಯಂತ ಖಚಿತವಾದ ಮತ್ತು ಅತ್ಯಂತ ಪರಿಣಾಮಕಾರಿಯಾದ ಧರ್ಮಗ್ರಂಥಗಳನ್ನು ಸಿದ್ಧಪಡಿಸುತ್ತಾರೆ, ಮತ್ತು ಅವರ ಮನಸ್ಸಿನ ಮೇಲೆ ತುಂಬುತ್ತಾರೆ. ಕೆಳವರ್ಗದ ಹಿಂದೂಗಳ ಜೀವನದಲ್ಲಿ ಕರ್ತವ್ಯವನ್ನು ಕಲಿಸುತ್ತಾರೆ ಅದು ಉನ್ನತ ವರ್ಗದವರಿಗೆ ಸೇವೆ ಸಲ್ಲಿಸಲು ಮಾತ್ರ.” ಎಂದು ಹೇಳುತ್ತಾರೆ.
ಇನ್ನೂ ಮುಸ್ಲಿಮರ ಕುರಿತು ಕೊನೆಯ ನಾಲ್ಕು ಸಾಲಿನಲ್ಲಿ ಉಲ್ಲೇಖಿಸಿದ್ದಾರೆ. “ಹಿಂದೂಗಳು ಕೆಳವರ್ಗದ ಹಿಂದೂಗಳೊಂದಿಗೆ ತಮ್ಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ, ಅವರನ್ನು ಮುಸ್ಲಿಮರಿಗೆ ವಿಸ್ತರಿಸಲು ಪ್ರಯತ್ನಿಸಲಾಗುತ್ತದೆ. ಅವರು ಕೆಳವರ್ಗದ ಹಿಂದೂಗಳಿಗೆ ಮಾಡಿದಂತೆ ಮುಸ್ಲಿಮರನ್ನು ಸ್ಥಳ ಮತ್ತು ಅಧಿಕಾರದಿಂದ ಹೊರಗಿಡಲು ಬಯಸುತ್ತಾರೆ. ಉನ್ನತ ಜಾತಿಯ ಹಿಂದೂಗಳ ಈ ಲಕ್ಷಣವು ಅವರ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಪ್ರಮುಖವಾಗಿದೆ.” ಎಂದು ಹೇಳುತ್ತಾರೆ. ಈ ಮೂಲಕ ಮುಂದೆ ಮೇಲ್ಜಾತಿ ಹಿಂದುಗಳು ಹಿಂದೆ ಕೆಳವರ್ಗಗಳನ್ನು ನಡೆಸಿಕೊಂಡಂತೆ ಭವಿಷ್ಯದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳಲು ಮುಂದಾಗುತ್ತಾರೆ ಎಂದು ಬರೆದಿದ್ದಾರೆ.
ಪುಟ ಸಂಖ್ಯೆ 125:
ವೈರಲ್ ಸಂದೇಶದಲ್ಲಿ ಪುಟ ಸಂಖ್ಯೆ 125ರಲ್ಲಿ “ಮುಸ್ಲಿಮರು ಭಾರತಕ್ಕೆ ಬೆದರಿಕೆಯಾಗಿ ಉಳಿಯುತ್ತಾರೆ ಮತ್ತು ಭಾರತದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸುತ್ತಾರೆ.” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇಂಟರ್ನೆಟ್ ಆರ್ಕೈವ್‌ನ 125 ನೇ ಪುಟದಲ್ಲಿ ಅಂಬೇಡ್ಕರ್ ಅವರು ಸಾವರ್ಕರ್ ಕೇಳಿದ ಎರಡು ಪ್ರಶ್ನೆಗಳನ್ನು ಉತ್ತರಿಸಿದ್ದಾರೆ. ಮೊದಲನೆಯದು ಭಾರತಕ್ಕೆ “ಹಿಂದುಸ್ತಾನ” ಎಂಬ ಹೆಸರನ್ನು ಇಡುವ ಕುರಿತು ಮತ್ತು ಸಂಸ್ಕೃತವನ್ನು ಪವಿತ್ರ ಭಾಷೆ, ಹಿಂದಿಯನ್ನು ರಾಷ್ಟ್ರ ಭಾಷೆ ಮತ್ತು ನಾಗರಿಯನ್ನು ಹಿಂದುಸ್ತಾನದ ಲಿಪಿಯನ್ನಾಗಿ ಅಳವಡಿಸಿಕೊಳ್ಳುವ ಕುರಿತು ಪ್ರತಿಕ್ರಯಿಸುತ್ತಾ, “ಪ್ಯಾಲೆಸ್ಟೈನ್ ಮತ್ತು ಹಂಗೇರಿ ಮತ್ತು ಪೋಲೆಂಡ್ ಸಹ ತಮ್ಮ ದೇಶದಲ್ಲಿ ಸಾವಿರಾರು ಮುಸ್ಲಿಮರನ್ನು ಹೊಂದಿದ್ದಾರೆ. ಆದರೆ ಕೇವಲ ಅಲ್ಪಸಂಖ್ಯಾತ ಸಮುದಾಯವಾಗಿರುವುದರಿಂದ, ಈ ದೇಶಗಳಲ್ಲಿ ಅವರ ಅಸ್ತಿತ್ವವು ಈ ದೇಶಗಳ ಪ್ರಾಚೀನ ಹೆಸರುಗಳನ್ನು ಬದಲಾಯಿಸುವ ನೆಲೆಯಾಗಿ ಎಂದಿಗೂ ಮುಂದುವರೆದಿಲ್ಲ, ಇದು ಬಹುಪಾಲು ಭೂಮಿಯನ್ನು ಹೊಂದಿರುವ ಜನಾಂಗಗಳ ವಾಸಸ್ಥಾನಗಳನ್ನು ಸೂಚಿಸುತ್ತದೆ.”
ಮುಸಲ್ಮಾನರು ಹೇಗೆ ಇತರ ದೇಶದಲ್ಲಿ ಇದ್ದರೂ ದೇಶದ ಹೆಸರು ಗುರುತಿಸುವಾಗ ಅವರ ಪ್ರಭಾವ ಬೀರಿಲ್ಲ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಮುಸ್ಲಿಮರು ತಮ್ಮನ್ನು ಪೋಲೇಂಡ್ ಮುಸಲ್ಮಾನರು, ಗ್ರೀಸ್ ಮುಸಲ್ಮಾನರು ಅಥವಾ ಚೀನಿ ಮುಸಲ್ಮಾನರು ಎಂಬ ಗುರುತು ಉಳಿಸಿಕೊಳ್ಳುತ್ತಾರೆ ಆದರೆ ಭಾರತಕ್ಕೆ ಬಂದ ಮುಸಲ್ಮಾನರು ತಮ್ಮನ್ನು “ಹಿಂದುಸ್ಥಾನಿಗಳು(ಭಾರತೀಯರು)” ಎಂದು ಕರೆದುಕೊಳ್ಳುತ್ತಾರೆ ಎಂದಿದ್ದಾರೆ.
“ಧ್ರುವಗಳ ದೇಶವು ಪೋಲೆಂಡ್ ಮತ್ತು ಗ್ರೀಸಿಯನ್ನರು ಗ್ರೀಸ್ ಆಗಿ ಮುಂದುವರಿಯುತ್ತದೆ. ಅಲ್ಲಿನ ಮುಸ್ಲಿಮರು ಅವರನ್ನು ವಿರೂಪಗೊಳಿಸದಿರಲು ಧೈರ್ಯ ಮಾಡಲಿಲ್ಲ, ಆದರೆ ಸಂದರ್ಭ ಬಂದಾಗ ತಮ್ಮನ್ನು ಪೋಲಿಷ್ ಮುಸ್ಲಿಮರು ಅಥವಾ ಗ್ರೀಸಿಯನ್ ಮುಸ್ಲಿಮರು ಅಥವಾ ಚೀನೀ ಮುಸ್ಲಿಮರು ಎಂದು ಗುರುತಿಸಲು ಸಾಕಷ್ಟು ತೃಪ್ತಿ ಹೊಂದಿದ್ದಾರೆ. ಹಾಗೆಯೇ ನಮ್ಮ ಮುಸ್ಲಿಮ್ ದೇಶವಾಸಿಗಳು ತಮಗೆ ಬೇಕಾದಾಗ ರಾಷ್ಟ್ರೀಯ ಅಥವಾ ಪ್ರಾದೇಶಿಕವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳಬಹುದು, ಧಾರ್ಮಿಕ ಅಥವಾ ಸಾಂಸ್ಕೃತಿಕ ಘಟಕವಾಗಿ ತಮ್ಮ ಪ್ರತ್ಯೇಕತೆಯನ್ನು ಕನಿಷ್ಠ ರಾಜಿ ಮಾಡಿಕೊಳ್ಳದೆ “ಹಿಂದೂಸ್ತಾನಿ ಮುಸ್ಲಿಮರು” ಎಂದು. ಇಲ್ಲ, ಮುಸಲ್ಮಾನರು ತಮ್ಮ ಸ್ವಂತ ಇಚ್ಛೆಯಿಂದ ಭಾರತಕ್ಕೆ ಬಂದಂದಿನಿಂದ ತಮ್ಮನ್ನು “ಹಿಂದೂಸ್ಥಾನಿಗಳು” ಎಂದು ಕರೆದುಕೊಳ್ಳುತ್ತಿದ್ದಾರೆ.” ಎಂದಿದ್ದಾರೆ.
ಇನ್ನೂ MEA ಆರ್ಕೈವ್‌ನ 125ನೇ ಪುಟದಲ್ಲಿ. ಮುಸ್ಲಿಂ ಪ್ರಾಭಲ್ಯವಿರುವ ಸ್ಥಳಗಳಲ್ಲಿ ಹಿಂದುಗಳ ಪರಿಸ್ಥಿತಿ ಹೇಗಿರಬಹುದು ಎಂದು ಬರೆಯುತ್ತಾರೆ. ಮೇಲ್ಜಾತಿ ಹಿಂದುಗಳು ಕೆಳವರ್ಗದ ಹಿಂದುಗಳನ್ನು ಮುಂದೆ ರಾಷ್ಟ್ರೀಯತೆಯ ಹೆಸರಿನಲ್ಲಿ ಮೋಸ ಮಾಡಬಹುದು. ಆದರೆ ಮುಸ್ಲಿಮರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
“ಅವರು ರಾಷ್ಟ್ರೀಯತೆಯ ಹೆಸರಿನಲ್ಲಿ ಹಿಂದೂಗಳ ಕೆಳವರ್ಗದವರಿಗೆ ಮೋಸ ಮಾಡಬಹುದು, ಆದರೆ ಅವರು ಮುಸ್ಲಿಂ ಪ್ರಾಂತ್ಯಗಳಲ್ಲಿ ಮುಸ್ಲಿಂ ಬಹುಸಂಖ್ಯಾತರನ್ನು ವಂಚಿಸಲು ಸಾಧ್ಯವಿಲ್ಲ ಮತ್ತು ಅವರ ಸ್ಥಾನ ಮತ್ತು ಅಧಿಕಾರದ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದೂಗಳ ನಿರ್ಣಯವು-ಪಾಕಿಸ್ತಾನದ ವಿರುದ್ಧದ ಅವರ ಕೂಗನ್ನು ಮುಸ್ಲಿಂ ಬಹುಸಂಖ್ಯಾತರ ಅಡಿಯಲ್ಲಿ ಬದುಕಲು ಮತ್ತು ಸ್ವಯಂ ನಿರ್ಣಯವನ್ನು ವಿರೋಧಿಸಲು ಪರಿಗಣಿಸಬಹುದಾದರೆ ಅದು ತುಂಬಾ ಧೈರ್ಯಶಾಲಿ ವಿಷಯವಾಗಿದೆ. ಆದರೆ ಹಿಂದೂಗಳು ಮುಸಲ್ಮಾನರನ್ನು ಮೂರ್ಖರನ್ನಾಗಿಸಿ ತಮ್ಮ ಸ್ಥಾನ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಿದರೆ ಅದು ತುಂಬಾ ಬುದ್ಧಿವಂತ ವಿಷಯವಲ್ಲ.” ಎಂದಿದ್ದಾರೆ.
ಪುಟ ಸಂಖ್ಯೆ 231:
ವೈರಲ್ ಸಂದೇಶದಲ್ಲಿ “ಪುಟ ಸಂಖ್ಯೆ 231 ರಲ್ಲಿ ಬುರ್ಖಾದ ಕಾರಣದಿಂದಾಗಿ, ಲೈಂಗಿಕ ಬಯಕೆ ಹೆಚ್ಚಾಗುತ್ತದೆ, ಇದು ಹೆಚ್ಚು ಮಕ್ಕಳನ್ನು ಹಡೆಯಲು ಕಾರಣವಾಗುತ್ತದೆ.” ಎಂದಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಈ ರೀತಿಯ ಹೇಳಿಕೆಯನ್ನು ಡಾ. ಅಂಬೇಡ್ಕರ್ ಅವರು ನೀಡಿದ್ದಾರೆಯೇ ಎಂದು ಹುಡುಕಿದಾಗ. ಪುಟ ಸಂಖ್ಯೆ 230 ಮತ್ತು 231ರಲ್ಲಿ ಡಾ. ಅಂಬೇಡ್ಕರ್ ಅವರು ಮುಸ್ಲಿಂ ಧರ್ಮದಲ್ಲಿ ಮಹಿಳೆಯರ ಸ್ಥಾನಮಾನಗಳನ್ನು ವಿವರಿಸುತ್ತಾ ಹೇಗೆ ಪರ್ದಾ (ಬುರ್ಖಾ) ಪದ್ಧತಿಯು ಮಹಿಳೆಯ ಸ್ವತಂತ್ರ್ಯವನ್ನು ಕಿತ್ತು ಕೊಂಡಿದೆ ಮತ್ತು ಅದರಿಂದಾಗಿ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ದೈಹಿಕ ಮತ್ತು ಸಾಮಾಜಿಕ ಸಮಸ್ಯೆಯ ಕುರಿತು ಚರ್ಚಿಸಿದ್ದಾರೆ. ಆದರೆ ವೈರಲ್ ಹೇಳಿಕೆಯಲ್ಲಿ ಉಲ್ಲೇಖಿಸಿರುವಂತಹ ಬಾಲೀಷ ಹೇಳಿಕೆಯನ್ನು ಡಾ. ಅಂಬೇಡ್ಕರ್ ಅವರು ನೀಡಿಲ್ಲ.
“ಪರ್ದಾ ಮುಸ್ಲಿಂ ಮಹಿಳೆಯರನ್ನು ಮಾನಸಿಕ ಮತ್ತು ನೈತಿಕ ಪೋಷಣೆಯಿಂದ ವಂಚಿತಗೊಳಿಸುತ್ತದೆ. ಆರೋಗ್ಯಕರ ಸಾಮಾಜಿಕ ಜೀವನದಿಂದ ವಂಚಿತರಾಗಿ, ನೈತಿಕ ಅಧಃಪತನದ ಪ್ರಕ್ರಿಯೆಯು ಪ್ರಾರಂಭವಾಗಬೇಕು. ಹೊರಗಿನ ಪ್ರಪಂಚದಿಂದ ಸಂಪೂರ್ಣವಾಗಿ ಏಕಾಂತವಾಗಿ, ಅವರು ತಮ್ಮ ಮನಸ್ಸನ್ನು ಸಣ್ಣ ಕೌಟುಂಬಿಕ ಕಲಹಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಪರಿಣಾಮವಾಗಿ ಅವರು ತಮ್ಮ ದೃಷ್ಟಿಕೋನದಲ್ಲಿ ಸಂಕುಚಿತರಾಗುತ್ತಾರೆ ಮತ್ತು ನಿರ್ಬಂಧಿತರಾಗುತ್ತಾರೆ.” ಎಂದಿದ್ದಾರೆ.
ಪುಟ ಸಂಖ್ಯೆ 297:
ವೈರಲ್ ಸಂದೇಶದಲ್ಲಿ “ಪುಟ ಸಂಖ್ಯೆ 297, ಭಾರತದಲ್ಲಿ ಅಶಾಂತಿಗಾಗಿ ಮುಸ್ಲಿಮರು ಕೋಮುಗಲಭೆಗಳನ್ನು ಮಾಡುತ್ತಲೇ ಇರುತ್ತಾರೆ.” ಎಂದು ಹೇಳಿದ್ದಾರೆ, ಎನ್ನಲಾಗಿದೆ. ಈ ಕುರಿತು ಹುಡುಕಿದಾಗ, ಈ ರೀತಿಯ ಯಾವುದೇ ಹೇಳಿಕೆಯನ್ನು ಅಂಬೇಡ್ಕರ್ ಅವರು ನೀಡಿರುವುದು ಕಂಡು ಬಂದಿಲ್ಲ. ಬದಲಾಗಿ ಡಾ. ಅಂಬೇಡ್ಕರ್ ಅವರು ಇಸ್ಲಾಂ ಮತ್ತು ಕುರಾನ್ ಕುರಿತು ಮುಸ್ಲಿಂ ನಾಯಕರು ಕೋರ್ಟಿನಲ್ಲಿ ಮಂಡಿಸಿರುವ ವಾದವನ್ನು ಉಲ್ಲೇಖಿಸಿದ್ದಾರೆ.
ಪುಟ ಸಂಖ್ಯೆ 303:
ವೈರಲ್ ಸಂದೇಶದಲ್ಲಿ, “ಪುಟ ಸಂಖ್ಯೆ 303ರಲ್ಲಿ ಭಾರತದಲ್ಲಿ ಹಿಂದೂಗಳ ಸರ್ಕಾರವನ್ನು ಮುಸ್ಲಿಮರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.” ಎಂದಿದ್ದಾರೆ ಎನ್ನಲಾಗಿದೆ. ಈ ಕುರಿತು ಹುಡುಕಿದಾಗ, ಡಾ. ಅಂಬೇಡ್ಕರ್ ಅವರು ಹೇಗೆ ಮಹಮ್ಮದ್ ಅಲಿ ಜಿನ್ನಾ ಮಹತ್ಮಾ ಗಾಂಧೀಜಿಯವರ ಕುರಿತು ಅವಹೇಳನಕಾರಿ ಭಾಷಣಗಳನ್ನು ಅಲಿಗರ್ ಮತ್ತು ಅಜ್ಮೀರ್ ನಲ್ಲಿ ಮಾಡಿದ್ದರು ಎಂದು ಉಲ್ಲೇಖಿಸುತ್ತಾರೆ. ನಂತರ 1928 ರಲ್ಲಿ ಖ್ವಾಜಾ ಹಸನ್ ನಿಜಾಮಿ ಎಂಬುವವರು. “ಮುಸ್ಲಿಮರು ಮತ್ತು ಹಿಂದುಗಳು ಬೇರೆ ಬೇರೆ. ನಾವು ಭಾರತವನ್ನು ಯುದ್ಧಮಾಡಿ ಗೆದ್ದಿದ್ದೇವೆ. ನಮ್ಮಿಂದ ಬ್ರಿಟೀಷರು ಪಡೆದಿದ್ದಾರೆ. ಹಾಗಾಗಿ ನಾವು ಭಾರತವನ್ನು ಆಳಲು ಹಕ್ಕು ಹೊಂದಿದ್ದೇವೆ. ಹಿಂದುಗಳಿಗೆ ಸ್ವಯಂ ಆಡಳಿತ ಬರುವುದಿಲ್ಲ.” ಎಂದು ಹೇಳಿರುವುದನ್ನು ಉಲ್ಲೇಖಿಸುತ್ತಾ. 1761ರ ಪಾಣಿಪತ್ ಯುದ್ಧದಲ್ಲಿ ಏನಾಯಿತು? ಹೇಗೆ ಅಹ್ಮದ್ ಶಾ ಅಬ್ದಾಲಿಯನ್ನು ಮರಾಠ ಸೈನ್ಯ ಸೋಲಿಸಿತು ಎಂದು ವಿವರಿಸಿದ್ದಾರೆ. ಈ ಯುದ್ಧದ ವಿವರಗಳನ್ನು ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ತಿರುಚಲು ನೋಡಿದಾಗ ನಜೀಬಾಬಾದ್‌ನ ಮೌಲಾನಾ ಅಕ್ಬರ್ ಷಾ ಖಾನ್ ಅವರು ಮದನ್ ಮೋಹನ್ ಮಾಳವೀಯ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದಾರೆ.
ಪುಟ ಸಂಖ್ಯೆ 332:
ವೈರಲ್ ಸಂದೇಶದಲ್ಲಿ “ಪುಟ ಸಂಖ್ಯೆ 332 ರಲ್ಲಿ ಮುಸ್ಲಿಮರು ಎಂದಿಗೂ ದೇಶಭಕ್ತರಾಗಲು ಸಾಧ್ಯವಿಲ್ಲ” ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ನಾವು ಹುಡುಕಿದಾಗ, 1923ರಲ್ಲಿ ಭಾರತ ಸರ್ಕಾರ ಆಡಳಿತದ ಮೇಲೆ ವರದಿ ಮಾಡಲು ಸರ್ ಡೆನ್ನಿಸ್ ಬ್ರೇ ಅವರ ಅಧ್ಯಕ್ಷತೆ N.-W.F ನ ನೆಲೆಗೊಂಡ ಜಿಲ್ಲೆಗಳ ನಡುವಿನ ಸಂಬಂಧ ಪ್ರಾಂತ್ಯ ಮತ್ತು ಬುಡಕಟ್ಟು ಪ್ರದೇಶ ಮತ್ತು ನೆಲೆಗೊಂಡವರ ವಿಲೀನದ ಮೇಲೆ ಪಂಜಾಬ್ ಹೊಂದಿರುವ ಜಿಲ್ಲೆಗಳ ಕುರಿತು ತನ್ನ ಅಲ್ಪಸಂಖ್ಯಾತರ ವರದಿಯ ಮೂಲಕ ಗಮನ ಸೆಳೆದ ಒಬ್ಬ ಸದಸ್ಯರಾದ ಶ್ರೀ ಎನ್.ಎಂ.ಸಮರ್ಥ್ ಅವರ ವರದಿಯನ್ನು ಉಲ್ಲೇಖಿಸುವ ಪ್ರಶ್ನಾವಳಿಗಳನ್ನು 331 ಮತ್ತು 332 ಪುಟದಲ್ಲಿ ನೀಡಿದ್ದಾರೆ.
ಇಲ್ಲಿ ಎಲ್ಲಿಯೂ ಮುಸಲ್ಮಾನರು ದೇಶಭಕ್ತರಾಗಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿಲ್ಲ.
ಅಂಬೇಡ್ಕರ್ ಅವರು ಪಾಕಿಸ್ತಾನ ಅಥವಾ ಭಾರತದ ವಿಭಜನೆ ಕೃತಿಯಲ್ಲಿ ಮುಸ್ಲಿಂ ಮತ್ತು ಹಿಂದುಗಳ ಧರ್ಮ, ರಾಜಕಾರಣ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಎಲ್ಲವುಗಳ ಕುರಿತು ಮುಕ್ತವಾಗಿ, ನಿಷ್ಠುರತೆಯಿಂದ ಚರ್ಚಿಸಿದ್ದಾರೆ ಮತ್ತು ಭಾರತದ ಮುಂದೆ ಎದುರಿಸಬೇಕಾದ ಹಿಂದು ಮುಸ್ಲಿಂ ಕಲಹಗಳು ಮತ್ತು ಅವುಗಳನ್ನು ಗ್ರಹಿಸುವ ಕ್ರಮಗಳ ಕುರಿತು ಸಹ ಸುಧೀರ್ಘವಾಗಿ ಚರ್ಚಿಸಿದ್ದಾರೆ.
ಆದ್ದರಿಂದ ಭಾರತೀಯ ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಹರಡುವ ಸಲುವಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಬಹುಮುಖ್ಯ ಕೃತಿಯಾದ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಕುರಿತು ಸುಳ್ಳು ಹರಡಲಾಗುತ್ತಿದೆ. ಈ ಮೂಲಕ ದಲಿತ ಮತ್ತು ಹಿಂದೂ ಸಮುದಾಯವನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟುವ ಹುನ್ನಾರ ಅಡಗಿದೆ. ಹಾಗಾಗಿ ಇಂತಹ ಸಂದೇಶಗಳ ನಂಬುವ ಬದಲು ಡಾ. ಅಂಬೇಡ್ಕರ್ ಅವರು ಬರೆದಿರುವ ಮೂಲ ಕೃತಿಗಳನ್ನು ಓದಿ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ.
ಇದನ್ನು ಓದಿ: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು
ವೀಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.